ಜನವಾಡ: ಸರ್ಕಾರಿ ಜಾಗ ಅತಿಕ್ರಮಣ ತೆರವುಗೊಳಿಸಿ, ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡಿ, ಶೌಚಾಲಯ ಕಾಮಗಾರಿ ಕಳಪೆ ಕೈಗೊಂಡವರ ವಿರುದ್ಧ ಕ್ರಮ ಜರುಗಿಸಿ, ಸ್ಮಶಾನ ಭೂಮಿ ಮಂಜೂರು ಮಾಡಿ, ವಸತಿ ಸೌಲಭ್ಯ ಕಲ್ಪಿಸಿ, ಸ್ಥಗಿತಗೊಂಡ ಮಾಸಾಶನ ಆರಂಭಿಸಿ, ಗೃಹಲಕ್ಷ್ಮಿ ಹಣ ಕೊಡಿಸಿ...
ಬೀದರ್ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ನಡೆದ ತಾಲ್ಲೂಕುಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜಿಲ್ಲಾ ಆಡಳಿತದ ಮುಂದಿಟ್ಟ ಕೆಲ ಪ್ರಮುಖ ಬೇಡಿಕೆಗಳು ಇವು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಸಮುದಾಯ ಹಾಗೂ ವೈಯಕ್ತಿಕ ಸಮಸ್ಯೆಗಳು ಅನಾವರಣಗೊಂಡವು.
ರಾಜನಾಳ ಗ್ರಾಮದ ಜನರು ಗ್ರಾಮದಲ್ಲಿ ಸರ್ಕಾರಿ ಜಾಗ ಅತಿಕ್ರಮಣವಾಗಿದೆ ಎಂದು ಗಮನ ಸೆಳೆದರೆ, ಅಲಿಯಂಬರ್ ನಿವಾಸಿಗಳು ಗ್ರಾಮದಲ್ಲಿ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮಹಿಳಾ ಶೌಚಾಲಯ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದರು. ಯರನಳ್ಳಿ ಗ್ರಾಮಸ್ಥರು ಯರನಳ್ಳಿಯಿಂದ ಹಳೆಯ ಸಾಂಗ್ವಿವರೆಗಿನ ಕಚ್ಚಾ ದಾರಿ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಯರನಳ್ಳಿ- ಹಳೆಯ ಸಾಂಗ್ವಿ ರಸ್ತೆ ನಿರ್ಮಿಸಿಕೊಡಲಾಗುವುದು ಎಂದು ಪೌರಾಡಳಿತ ಸಚಿವ ರಹೀಂಖಾನ್ ಭರವಸೆ ನೀಡಿದರೆ, ಸರ್ಕಾರಿ ಜಾಗ ಅತಿಕ್ರಮಣ ತೆರವುಗೊಳಿಸಬೇಕು ಹಾಗೂ ಶೌಚಾಲಯ ಕಾಮಗಾರಿ ಕಳಪೆ ಆರೋಪದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ನಿರ್ದೇಶನ ನೀಡಿದರು.
ಜನವಾಡ ಗ್ರಾಮದ ಬೀದರ್- ಔರಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯದ ಅಂಗಡಿ ಇದ್ದು, ಸಮೀಪವೇ ಶಾಲೆ ಇದೆ. ಸುತ್ತಮುತ್ತ ಜನ ವಸತಿ ಪ್ರದೇಶ ಇದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಗ್ರಾಮದಲ್ಲಿ ದಿನದ 24 ಗಂಟೆ ಸಿಗುತ್ತಿದೆ. ಮದ್ಯದಂಗಡಿಯನ್ನು ಸ್ಥಳಾಂತರಿಸಬೇಕು ಎಂದು ಜನವಾಡ ಗ್ರಾಮದ ಅನೇಕರು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಹಾಗೂ ಜಿಲ್ಲಾಧಿಕಾರಿ, ಅಬಕಾರಿ ಉಪ ಆಯುಕ್ತರಿಂದ ಮಾಹಿತಿ ಪಡೆದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜನವಾಡದ ಬೀದರ್- ಔರಾದ್ ರಸ್ತೆ ಬದಿಯಲ್ಲಿ ಇರುವ ಲೋಕೋಪಯೋಗಿ ಇಲಾಖೆಯ ಹಳೆಯ ವಸತಿಗೃಹವನ್ನು ನೆಲಸಮಗೊಳಿಸಿ, ಬಸ್ ತಂಗುದಾಣ ನಿರ್ಮಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಮರಕಲ್‍ನ ಸರ್ಕಾರಿ ಶಾಲೆ ಸಮೀಪ ರಸ್ತೆ, ಚರಂಡಿ ನಿರ್ಮಿಸಿಕೊಡಬೇಕು ಎಂದು ಮರಕಲ್ ಗ್ರಾಮಸ್ಥರು, ರೇಷನ್ ಕಾರ್ಡ್‍ನಲ್ಲಿ ಹೆಸರು ಕಡಿತಗೊಂಡಿದೆ ಎಂದು ಯರನಳ್ಳಿಯ ಗಂಗಾಂಬಿಕಾ, ಒಂದು ವರ್ಷದಿಂದ ಮಾಸಾಶನ ಬರುತ್ತಿಲ್ಲ ಎಂದು ಜನವಾಡದ 85 ವರ್ಷದ ಲಕ್ಷ್ಮಿ ಝರೆಪ್ಪ, ಗೃಹಲಕ್ಷ್ಮಿ ಹಣ ದೊರೆಯುತ್ತಿಲ್ಲ ಎಂದು ಮುತ್ತಮ್ಮ, ಮನೆ ಮುಂದೆ ಚರಂಡಿ ನಿರ್ಮಿಸಿಕೊಬೇಕು ಎಂದು ಜನವಾಡದ ಅಶೋಕ, ಮನೆ ಮಂಜೂರು ಮಾಡಬೇಕು ಎಂದು ಲಕ್ಷ್ಮಿಬಾಯಿ, ಅಶ್ವಿನಿ ಸಂತೋಷ್, ಗ್ರಾಮಕ್ಕೆ ಲೈನ್‍ಮೆನ್ ಇಲ್ಲವೆಂದು ಯರನಳ್ಳಿಯ ಮಹೇಶ, ಮನೆ ಮೇಲಿಂದ ಹಾದು ಹೋಗಿರುವ ವಿದ್ಯುತ್ ತಂತಿ ಸ್ಥಳಾಂತರಿಸಬೇಕು ಎಂದು ಮರಕಲ್‍ನ ಶಿವಕುಮಾರ ಮನವಿ ಸಲ್ಲಿಸಿದರು. ಪಡಿತರ ಚೀಟಿ, ಮಾಸಾಶನ ಮಂಜೂರಾತಿಗಾಗಿಯೂ ಅನೇಕರು ಮನವಿ ಪತ್ರ ಕೊಟ್ಟರು.
ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಅವರು ಜನರ ಬೇಡಿಕೆ ಈಡೇರಿಕೆ, ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬೀದರ್ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ಬೀದರ್ ಉಪ ವಿಭಾಗಾಧಿಕಾರಿ ಶಕೀಲ್, ತಹಶೀಲ್ದಾರ್ ಡಿ.ಜಿ. ಮಹಾತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ್ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈಜಯಂತಿಬಾಯಿ ಇದ್ದರು.
ಒಟ್ಟು 205 ಅರ್ಜಿಗಳ ಸ್ವೀಕಾರ ಮಾಸಾಶನ ಪತ್ರ, ಜಾಬ್‍ಕಾರ್ಡ್ ವಿತರಣೆ ಜನವಾಡದಲ್ಲಿ ಚರಂಡಿ ಸ್ಥಳ ಅತಿಕ್ರಮಣ ತೆರವಿಗೆ ಸೂಚನೆ
ಜನವಾಡದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜನವಾಡ ಹಾಗೂ ಮಾಳೆಗಾಂವ್ ಹೋಬಳಿಯ ವಿವಿಧೆಡೆ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆರಹೀಂಖಾನ್ ಪೌರಾಡಳಿತ ಸಚಿವ
ಜನರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಆಡಳಿತ ಸಿದ್ಧವಿದೆ. ಎನ್‍ಎ ಲೇಔಟ್‍ನಲ್ಲಿ ಅಕ್ರಮ ಕಂಡು ಬಂದರೆ ಕ್ರಮ ಜರುಗಿಸಲಾಗುವುದುಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ
‘ಅಧಿಕಾರಿಗಳಿಂದ ಕರೆ ಬಾರದಿದ್ದರೆ ತಿಳಿಸಿ’
ಜನಸ್ಪಂದನ ಕಾರ್ಯಕ್ರಮದಲ್ಲಿ ಸಮಸ್ಯೆ ಹೇಳಿಕೊಂಡವರನ್ನು ಅಧಿಕಾರಿಗಳೇ ಸಂಪರ್ಕಿಸಿ ಸಮಸ್ಯೆ ಪರಿಹರಿಸಬೇಕು ಎಂದು ಪೌರಾಡಳಿತ ಸಚಿವ ರಹೀಂಖಾನ್ ಸೂಚನೆ ನೀಡಿದರು. ಜನವಾಡದಲ್ಲಿ ನಡೆದ ಜನಸ್ಪಂದನದಲ್ಲಿ ಸಚಿವರ ಸೂಚನೆಯಂತೆ ಅನೇಕ ಅಧಿಕಾರಿಗಳು ಸ್ಥಳದಲ್ಲೇ ದೂರುದಾರರ ಮೊಬೈಲ್ ಸಂಖ್ಯೆಗಳನ್ನು ಬರೆದುಕೊಂಡರು. ‘ಅಧಿಕಾರಿಗಳು ಒಂದು ವೇಳೆ ಸಂಪರ್ಕಿಸದಿದ್ದರೆ ನನಗೆ ತಿಳಿಸಿ ಮುಂದೆ ಏನು ಮಾಡಬೇಕು ಅದನ್ನು ಮಾಡುವೆ’ ಎಂದು ಸಚಿವರು ದೂರುದಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.