ADVERTISEMENT

ನರಕದ ಭಯ ಹುಟ್ಟಿಸದ ಬಸವ ಧರ್ಮ: ಸಾಹಿತಿ ರಂಜಾನ್ ದರ್ಗಾ ಅಭಿಮತ

ಬಸವಕಲ್ಯಾಣ: ಕಲ್ಯಾಣ ಪರ್ವ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 4:35 IST
Last Updated 20 ಅಕ್ಟೋಬರ್ 2021, 4:35 IST
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಮಂಗಳವಾರ ನಡೆದ ಕಲ್ಯಾಣ ಪರ್ವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಸವಾನುಯಾಯಿಗಳು
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಮಂಗಳವಾರ ನಡೆದ ಕಲ್ಯಾಣ ಪರ್ವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಸವಾನುಯಾಯಿಗಳು   

ಬಸವಕಲ್ಯಾಣ: ‘ಬಸವ ಧರ್ಮದಲ್ಲಿ ಸ್ವರ್ಗದ ಆಸೆ ತೋರಿಸಲಾಗಿಲ್ಲ. ನರಕ ಇದೆಯೆಂದು ಹೇಳಿ ಭಯ ಹುಟ್ಟಿಸುವುದಿಲ್ಲ. ಕಾಯಕವೇ ಕೈಲಾಸ ಎಂದು ಸಾರಲಾಗಿದೆ’ ಎಂದು ಸಾಹಿತಿ ರಂಜಾನ್ ದರ್ಗಾ ಹೇಳಿದ್ದಾರೆ.

ನಗರದ ಬಸವ ಮಹಾಮನೆಯಲ್ಲಿ ಕೂಡಲಸಂಗಮ ಬಸವಧರ್ಮ ಪೀಠದಿಂದ ಮಂಗಳವಾರ ನಡೆದ 20 ನೇ ಕಲ್ಯಾಣ ಪರ್ವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಸವಧರ್ಮ 900 ವರ್ಷಗಳಿಂದ ಆಸ್ತಿತ್ವದಲ್ಲಿದೆ. ಆದ್ದರಿಂದ ಇದಕ್ಕೆ ಸಂವಿಧಾನಾತ್ಮಕ ಮಾನ್ಯತೆ ಸಿಗಬೇಕು. ಬಸವಾದಿ ಶರಣರು ಕೇವಲ ಒಬ್ಬರ ಹಿತ ಬಯಸಲಿಲ್ಲ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದರು. ಏಕ ದೇವೋಪಾಸನೆಗೆ ಮಹತ್ವ ನೀಡಿದರು. ಕಾಯಕದ ನೆಲೆಗಟ್ಟಿನ ಮೇಲೆ ಅನುಭಾವದ ತತ್ವಜ್ಞಾನ ನೀಡಿದ್ದಾರೆ. ಕಾಯಕ ಜೀವಿಗಳಿಗೆ ಮಾತ್ರ ಮಹತ್ವ ನೀಡಲಾಗಿತ್ತು. 770 ಅಮರ ಗಣಂಗಳನ್ನು ಹಾಗೂ ಒಂದು ಲಕ್ಷದ ತೊಂಭತ್ತಾರು ಶರಣರನ್ನು ಮುಕ್ತಾತ್ಮರನ್ನಾಗಿ ಮಾಡಿದ ಕೀರ್ತಿ ಗುರು ಬಸವಣ್ಣನವರಿಗೆ ಸಲ್ಲುತ್ತದೆ’ ಎಂದರು.

ADVERTISEMENT

‘ಅಂದಿನ ಅನುಭವ ಮಂಟಪ ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂದಿನ ಸಂಸತ್ತಿನಲ್ಲಿ ಕೇವಲ 545 ಸದಸ್ಯರಿದ್ದರೆ, ಅಂದಿನ ಅನುಭವ ಮಂಟಪದಲ್ಲಿ 770 ಸದಸ್ಯರಿದ್ದರು. ಅಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವಿತ್ತು’ ಎಂದು ಅವರು ಹೇಳಿದರು.

‘ಲಿಂಗೈಕ್ಯ ಮಾತೆ ಮಹಾದೇವಿಯವರ ಸತ್ಯ ಸಂಕಲ್ಪದಿಂದ ಬಸವತತ್ವ ಪ್ರಚಾರದ ಕಾರ್ಯ ಹಾಗೂ ಅನೇಕ ಕೆಲಸಗಳಾಗಿವೆ. ಅವರ ಸಂಕಲ್ಪದಿಂದಾಗಿಯೇ ಇಲ್ಲಿ 20 ವರ್ಷದಿಂದ ಕಲ್ಯಾಣಪರ್ವ ನಡೆಯುತ್ತಿದೆ. ದೂರದ ಊರುಗಳಿಂದ ಅನೇಕ ಬಸವ ಅನುಯಾಯಿಗಳು ಬರುತ್ತಿದ್ದಾರೆ. ಅವರ ನಂತರ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷ ಸ್ಥಾನವಹಿಸಿರುವ ಮಾತೆ ಗಂಗಾದೇವಿಯವರು ಹಾಗೂ ಇತರ ಸ್ವಾಮೀಜಿಯವರು ಕೂಡ ಮಾತೆ ಮಹಾದೇವಿಯವರ ಸಂಕಲ್ಪ ಈಡೇರಿಕೆಗೆ ಪ್ರಯತ್ನಿಸುತ್ತಿದ್ದಾರೆ’ ಎಂದರು.

ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ಗುರು ಬಸವಣ್ಣನವರು ಮನಸ್ಸು ಕಟ್ಟುವ ಕಾರ್ಯ ಮಾಡಿದ್ದರು. ಸರ್ವ ಸಮಾನತೆ ಜಾರಿಗಾಗಿ ಕ್ರಾಂತಿಗೈದರು. ಅವರ ಸಂದೇಶ ಜಗತ್ತಿನ ಮೂಲೆ ಮೂಲೆಗೆ ಮುಟ್ಟಿಸುವುದಕ್ಕೆ ಎಲ್ಲರೂ ಶ್ರಮಿಸಬೇಕಾಗಿದೆ’ ಎಂದು ಅವರು ಹೇಳಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಹಾಗೂ ಮುಖಂಡ ಬಾಬು ವಾಲಿ ಮಾತನಾಡಿದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಚನ್ನಬಸವಾನಂದ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ಸತ್ಯಾದೇವಿ, ಬಸವರಾಜ ದೇಶಮುಖ, ಕಿರಣ ಖಂಡ್ರೆ, ಆರ್.ಜಿ.ಶೆಟಗಾರ, ಸೋಮಶೇಖರ ಪಾಟೀಲ, ಹಾವಶೆಟ್ಟಿ ಪಾಟೀಲ, ರಾಜಶೇಖರ ಅಷ್ಟೂರೆ, ಬಸವರಾಜ ಪಾಟೀಲ ಶಿವಪುರ, ಶಂಕರೆಪ್ಪ ಪಾಟೀಲ, ಚಂದ್ರಮೌಳಿ, ಸಿದ್ದು ಪಾಟೀಲ, ಸಂಜೀವ ಗಾಯಕವಾಡ, ಶಿವರಾಜ ಪಾಟೀಲ ಅತಿವಾಳ ಪಾಲ್ಗೊಂಡಿದ್ದರು.

ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರು. ಸುರೇಶ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.