ADVERTISEMENT

ಕಮಲನಗರ: ಪ್ರಯಾಣಿಕರ ಉಪಯೋಗಕ್ಕೆ ಬಾರದ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 8:08 IST
Last Updated 13 ಜನವರಿ 2026, 8:08 IST
ಕಮಲನಗರ ಪಟ್ಟಣದ ಮದನೂರ ರಸ್ತೆಯಲ್ಲಿಯ ಪಾಳು ಬಿದ್ದಿರುವ ಬಸ್ ನಿಲ್ದಾಣ
ಕಮಲನಗರ ಪಟ್ಟಣದ ಮದನೂರ ರಸ್ತೆಯಲ್ಲಿಯ ಪಾಳು ಬಿದ್ದಿರುವ ಬಸ್ ನಿಲ್ದಾಣ   

ಕಮಲನಗರ: ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು ಹದಿನೆಂಟು ವರ್ಷಗಳ ಹಿಂದೆ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿದೆ. ಆದರೆ ಬಸ್ ನಿಲ್ದಾಣಕ್ಕೆ ಬಸ್‍ಗಳು, ಪ್ರಯಾಣಿಕರು ಬಾರದೆ ಇರುವುದರಿಂದ ಕಟ್ಟಡ ಹಾಳು ಬಿದ್ದಿದೆ.

ಕಮಲನಗರ ಪಟ್ಟಣದ ಮದನೂರ್ ಮುಖ್ಯ ರಸ್ತೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಬಸ್‍ಗಳು ಹೋಗುವುದಿಲ್ಲ. ನೂತನ ತಾಲ್ಲೂಕು ಕೇಂದ್ರ ರಚನೆಯಾಗಿ ಎಂಟು ವರ್ಷ ಕಳೆದರೂ, ಬೆಳೆಯುತ್ತಿರುವ ಪಟ್ಟಣಕ್ಕೆ ಬಸ್‌ ನಿಲ್ದಾಣ ನಿರ್ಮಾಣವಾದರಷ್ಟೇ ಸಾಲದು. ಬಸ್‍ಗಳ ಸಂಚಾರಕ್ಕೆ ಸಮರ್ಪಕ ವ್ಯವಸ್ಥೆ ಮೂಲ ಸೌಕರ್ಯಗಳು ಇರಬೇಕು.

ಪಾಳು ಬಿದ್ದಿರುವ ಬಸ್ ನಿಲ್ದಾಣವನ್ನು ಈಗ ಅಭಿವೃದ್ಧಿಪಡಿಸಿ ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಬೇಕಿರುವ ಅನಿವಾರ್ಯತೆ ಇದೆ.

ADVERTISEMENT

ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಬಸ್ ನಿಲ್ದಾಣ ಕುಡುಕರ ತಾಣವಾಗಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಸ್ ನಿಲ್ದಾಣದ ಆವರಣದಲ್ಲಿ ಗಿಡ-ಗಂಟಿಗಳು ಬೆಳೆದಿವೆ. ಪುಂಡ ಪೋಕರಿಗಳು ಕಟ್ಟಡದ ಕಿಟಕಿಗಳ ಗಾಜು ಒಡೆದು ಹಾಳು ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣದಲ್ಲಿ ಬಸ್‍ಗಳು ನಿಲ್ಲದಿರುವುದು ಹಾಗೂ ಪ್ರಯಾಣಿಕರು ಬಾರದೆ ಇರುವುದರಿಂದ ಈ ನಿಲ್ದಾಣವು ಅನೈತಿಕ ತಾಣವಾಗಿ ಮಾರ್ಪಟ್ಟಿದೆ. ಕಟ್ಟಡದ ಮೂಲೆಗಳಲ್ಲಿ ಸರಾಯಿ ಬಾಟಲಿ ಪುಂಡ ಪೋಕರಿಗಳ ಮೋಜು ಮಸ್ತಿಯ ತಾಣವಾಗಿದೆ. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಾಳು ಕೊಂಪೆಯಾದ ಶೌಚಾಲಯ : ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯ ಹಾಳು ಕೊಂಪೆಯಾಗಿದೆ. ಯಾರೋ ಕಿಡಿಗೇಡಿಗಳು ಶೌಚಾಲಯದ ಬಾಗಿಲು, ಕಿಟಕಿಗಳು ಮುರಿದು ಹಾಕಿದ್ದಾರೆ. ಸುತ್ತಲೂ ಗಿಡ-ಗಂಟಿಗಳು ಬೆಳೆದು ಉಪಯೋಗಕ್ಕೆ ಬಾರದಂತಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು ಹದಿನೆಂಟು ವರ್ಷದ ಕೆಳಗೆ ಕಮಲನಗರ ಬಸ್ ನಿಲ್ದಾಣ ಕಟ್ಟಡ ನಿರ್ಮಾಣಕ್ಕಾಗಿ ದಾನದ ರೂಪದಲ್ಲಿ ಜಾಗವನ್ನು ನೀಡಿದ್ದೇವೆ. ಆದರೆ ಬಸ್ ನಿಲ್ದಾಣದಲ್ಲಿ ಬಸ್‍ಗಳು ನಿಲ್ಲಿಸುವಂತೆ ಸಾಕಷ್ಟು ಬಾರಿ ಚುನಾಯಿತ ಪ್ರತಿನಿಧಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.ಕಾಟಾಚಾರಕ್ಕೆ ಮಾತ್ರ ಬಸ್ ನಿಲ್ದಾಣದ ಕಟ್ಟಡ ಇದೆ. ಪ್ರಯಾಣಿಕರಿಗೆ ಉಪಯೋಗಕ್ಕೆ ಬಾರದಂತಾಗಿದೆ ಎಂದು ಶಿವಕುಮಾರ ಪಾಟೀಲ್ ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಸುತ್ತಲೂ ಗಿಡ-ಗಂಟಿಗಳು ಬೆಳೆದಿರುವುದು
ಬಸ್ ನಿಲ್ದಾಣದ ಆವರಣದಲ್ಲಿ ಸರಾಯಿ ಬಾಟಲಿಗಳು ಬಿದ್ದಿರುವುದು

ಬಸ್ ನಿಲ್ದಾಣ

ಸಂಚಾರ ನಿಯಂತ್ರಕರ ನಿಯೋಜನೆ ಮಾಡಲಾಗಿದೆ. ಔರಾದ ಡಿಪೋ ಬಸ್‍ಗಳು ನಿಲ್ದಾಣದಲ್ಲಿ ಹೋಗಿ ಬರುವುದನ್ನು ಮಾಡುತ್ತಿವೆ. ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಖುದ್ದು ಭೇಟಿ ನೀಡಿ ವೀಕ್ಷಿಸಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದು. – ರಾಜಶೇಖರ. ಘಟಕ ವ್ಯವಸ್ಥಾಪಕರು ಔರಾದ್‌

ಕಮಲನಗರ ಬಸ್ ನಿಲ್ದಾಣ

ಪ್ರಯಾಣಿಕರ ಅನುಕೂಲಕ್ಕೆ ಎಂದು ಸರ್ಕಾರ ಅವಶ್ಯಕತೆ ಇಲ್ಲದ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಿಸಿದೆ. ಪ್ರಸ್ತುತ ಸಾರ್ವಜನಿಕ ಆಸ್ಪತ್ರೆ ಇರುವ ಸ್ಥಳದಲ್ಲಿ ನಿರ್ಮಿಸಿದರೆ ಸಾರ್ವಜನಿಕರಿಗೆ ಉಪಯುಕ್ತವಾದರೂ ಆಗುತ್ತಿತ್ತು. ಆದರೆ ಉಪಯೋಗಕ್ಕಿಲ್ಲ. ನಿಲ್ದಾಣದ ಸ್ಥಳದಲ್ಲಿ ತಾಲ್ಲೂಕು ಆಡಳಿತ ಕಟ್ಟಡ ನಿರ್ಮಿಸಿ ಬಸ್ ನಿಲ್ದಾಣ ಜನಭರಿತ ಸ್ಥಳಕ್ಕೆ ವರ್ಗಾಯಿಸಬೇಕು. –ಗುಂಡಪ್ಪ ಬೆಲ್ಲೆ. ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.