ADVERTISEMENT

ಗ್ರಾಮೀಣ ಕನ್ನಡಿಗರನ್ನು ಗುರುತಿಸಿ ಗೌರವಿಸಿ

ತಾಲ್ಲೂಕುಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ನಾರಾಯಣರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 16:03 IST
Last Updated 1 ನವೆಂಬರ್ 2019, 16:03 IST
ಬಸವಕಲ್ಯಾಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ನಡೆದ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು
ಬಸವಕಲ್ಯಾಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ನಡೆದ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು   

ಬಸವಕಲ್ಯಾಣ: ‘ಗ್ರಾಮೀಣ ಭಾಗದ ಕನ್ನಡಿಗರನ್ನು ಗುರುತಿಸಿ ಗೌರವಿಸಬೇಕು. ಅದರಿಂದ ನಾಡು ನುಡಿ ಸೇವೆ ಮಾಡಿದಂತಾಗುತ್ತದೆ’ ಎಂದು ಶಾಸಕ ಬಿ.ನಾರಾಯಣರಾವ್ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ಶುಕ್ರವಾರ ಇಲ್ಲಿನ ತೇರು ಮೈದಾನದ ಸಭಾಭವನದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

‘ಹಳ್ಳಿಗಳ ಜನ ಕನ್ನಡ ತಾಯಿ ಹಾಗೂ ಸ್ವಂತ ತಾಯಿ ತಂದೆಯ ಸಂರಕ್ಷಣೆ ಮಾಡುತ್ತಾರೆ. ಆದರೆ, ಉನ್ನತ ಶಿಕ್ಷಣ ಪಡೆದವರು ಕನ್ನಡಕ್ಕೂ ಕಿಮ್ಮತ್ತು ಕೊಡುವುದಿಲ್ಲ. ತನ್ನ ತಂದೆ ತಾಯಿಯನ್ನೂ ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಆದ್ದರಿಂದ ಸಾಮಾನ್ಯರಲ್ಲಿ ಕನ್ನಡದ ಪ್ರೇಮವನ್ನು ಗುರುತಿಸಬೇಕು. ಬರೀ ದೊಡ್ಡವರಿಗೆ ಪ್ರಶಸ್ತಿ, ಪುರಸ್ಕಾರ ನೀಡದೇ ಅರ್ಹ ಪ್ರತಿಭಾವಂತರನ್ನು ಹುಡುಕಿ ತೆಗೆಯಬೇಕು’ ಎಂದರು.

ADVERTISEMENT

ಉಪ ವಿಭಾಗಾಧಿಕಾರಿ ಭಂವರಸಿಂಗ್ ಮೀನಾ ಮಾತನಾಡಿ, ‘ಹಾರಕೂಡ ಹಿರೇಮಠ ಸಂಸ್ಥಾನದ ಚನ್ನವೀರ ಶಿವಾಚಾರ್ಯರು ಹಾಗೂ ಜಾನಪದ ಕಲಾವಿದ ಭೀಮಸಿಂಗ್‌ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರತಿರುವುದು ಹೆಮ್ಮೆಯ ಸಂಗತಿ’ ಎಂದರು.

ಉಪನ್ಯಾಸಕ ಅಂಬರೀಶ ಭೀಮಾಣೆ ಮಾತನಾಡಿ, ‘ಕನ್ನಡ ನಾಡು ನುಡಿ ಮಹತ್ವ ಸಾರುವ ಅನೇಕ ಶಾಸನಗಳು ದೊರೆತಿವೆ. ರಾಷ್ಟ್ರಕೂಟರು ಹಾಗೂ ಇತರೆ ರಾಜರು ಈ ಭಾಷೆಯನ್ನು ಸಮೃದ್ಧಗೊಳಿಸಿದ್ದಾರೆ. ವಚನಗಳ ರಚನೆಯ ಮೂಲಕ ಬಸವಾದಿ ಶರಣರು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದರು.

ತಹಶೀಲ್ದಾರ್ ಸಾವಿತ್ರಿ ಸಲಗರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯಶೋದಾ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಡಾ.ರುದ್ರಮಣಿ ಮಠಪತಿ, ಶಿವಕುಮಾರ ಜಡಗೆ ಮಾತನಾಡಿದರು.

ತಡೋಳಾ ರಾಜೇಶ್ವರ ಶಿವಾಚಾರ್ಯರಿಗೆ ಕನ್ನಡ ಕೃಷಿರತ್ನ ಪ್ರಶಸ್ತಿ ಹಾಗೂ ಬೇಲೂರ ಪಂಚಾಕ್ಷರಿ ಸ್ವಾಮೀಜಿ, ಡಾ.ಗಂಗಾಂಬಿಕಾ ಪಾಟೀಲ ಅವರಿಗೆ ಕನ್ನಡ ಗುರು ಪ್ರಶಸ್ತಿ ನೀಡಲಾಯಿತು.

ವಿವಿಧ ಕ್ಷೇತ್ರದ ಸಾಧಕರಾದ ಡಾ.ಸತೀಶಕುಮಾರ ಹೊಸಮನಿ, ದಿಲೀಪಗಿರಿ ಗೋಸಾಯಿ ಗೋಕುಳ, ಮನೋಹರ ಮೈಸೆ, ಡಾ.ಜಿ.ಎಸ್.ಭುರಳೆ, ದತ್ತು ಭೆಂಡೆ, ಸುಭಾಷ ಪತಂಗೆ, ವೀರಶೆಟ್ಟಿ ಮಲಶೆಟ್ಟಿ, ಮಹಾದೇವಿ ಹೊಳ್ಕರ್, ತಿರಕೇಶ ಭಜಂತ್ರಿ, ಶಾರದಾಬಾಯಿ ಕರಬಶೆಟ್ಟಿ, ಕಮಲಾದೇವಿ ಜಾಧವ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಸುಧೀರ ಕಾಡಾದಿ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಮಡೋಳಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.