ADVERTISEMENT

ಕಾರಂಜಾ ಸಂತ್ರಸ್ತರ 926 ದಿನಗಳ ಅಹೋರಾತ್ರಿ ಧರಣಿ ಮುಕ್ತಾಯ

ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಭರವಸೆ; ಸಚಿವ ಈಶ್ವರ ಬಿ. ಖಂಡ್ರೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 13:18 IST
Last Updated 11 ಜನವರಿ 2025, 13:18 IST
   

ಬೀದರ್‌: ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಕಳೆದ 926 ದಿನಗಳಿಂದ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಶನಿವಾರ ಕೊನೆಗೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಧರಣಿ ಸ್ಥಳಕ್ಕೆ ಬಂದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇಡಿಕೆ ಈಡೇರಿಸಲು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸಿದ್ದಾರೆ. ಧರಣಿ ಹಿಂಪಡೆಯಬೇಕು ಎಂದು ಮನವಿ ಮಾಡಿದಾಗ ಧರಣಿ ನಿರತರು ಚಪ್ಪಾಳೆ ಹೊಡೆದು ಸ್ವಾಗತಿಸಿದರು. 

ಬಳಿಕ ಧರಣಿ ನಿರತರನ್ನು ಸನ್ಮಾನಿಸಿದ ಸಚಿವರು, ಎಲ್ಲರಿಗೂ ಜ್ಯೂಸ್‌ ಕುಡಿಸಿದರು. ಸರ್ಕಾರದ ಮಾತಿಗೆ ಕಿವಿಗೊಟ್ಟು ಧರಣಿ ಹಿಂಪಡೆದಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ADVERTISEMENT

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ಮುಖ್ಯಮಂತ್ರಿಯವರು ಕೊಟ್ಟ ಭರವಸೆ ಹಾಗೂ ಅವರ ಪರವಾಗಿ ಸಚಿವ ಖಂಡ್ರೆ ಅವರು ಬಂದು ಮನವಿ ಮಾಡಿರುವುದರಿಂದ ಸಂತ್ರಸ್ತ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಹಾಗೂ ಎಲ್ಲರ ಸರ್ವ ಸಮ್ಮತಿಯೊಂದಿಗೆ ಧರಣಿ ಹಿಂಪಡೆಯಲಾಗುತ್ತಿದೆ ಎಂದು ಘೋಷಿಸಿದರು.

ಬೆಳಗಾವಿಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀಡಿರುವ ಭರವಸೆಯಂತೆ ತಾಂತ್ರಿಕ ಸಮಿತಿ ರಚಿಸಲಾಗಿದೆ. ಅದರ ವರದಿ ಆಧರಿಸಿ ಶೀಘ್ರದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಸಂತ್ರಸ್ತರ ಬೇಡಿಕೆಗೆ ಸಂಬಂಧಿಸಿದಂತೆ ಸಚಿವ ಖಂಡ್ರೆ ಹಾಗೂ ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿದ ಕಾರಣ ಫಲಿತಾಂಶ ಬಂದಿದೆ. ಎಲ್ಲರಿಗೂ ರೈತರು ಕೃತಜ್ಞರಾಗಿದ್ದೇವೆ ಎಂದು ಹೇಳಿದರು.

ಚಂದ್ರಶೇಖರ ಪಾಟೀಲ ಹುಚಕನಳ್ಳಿ ಮಾತನಾಡಿ, 2022ರ ಜೂನ್ 1ರಂದು ಧರಣಿ ಆರಂಭಿಸಿದ್ದೆವು. ಅದಕ್ಕೆ ಸರ್ಕಾರ ಈಗ ಸ್ಪಂದಿಸಿದೆ. ಬೇಗ ರೈತರಿಗೆ ಪರಿಹಾರ ತಲುಪಿಸುವ ಕೆಲಸವಾಗಬೇಕು ಎಂದರು.

ಶಾಸಕ ಡಾ. ಶೈಲೆಂದ್ರ ಕೆ. ಬೆಲ್ದಾಳೆ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಅರವಿಂದಕುಮಾರ ಅರಳಿ, ಬಸವರಾಜ ದೇಶಮುಖ, ಪ್ರೊ.ಆರ್.ಕೆ. ಹುಡುಗಿ, ಪ್ರೊ. ಬಸವರಾಜ ಕುಮ್ನೂರ, ಅಬ್ದುಲ್‌ ಮನ್ನಾನ್‌ ಸೇಠ್‌, ವಿನಯ್‌ ಮಾಳಗೆ, ರೋಹನಕುಮಾರ, ಕೇದಾರನಾಥ ಪಾಟೀಲ, ಮಹೇಶ ಮೂಲಗೆ, ಭೀಮರೆಡ್ಡಿ ಬೆಳ್ಳೂರ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.