ತಡಪಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ತಡಪಳ್ಳಿ ಗ್ರಾಮದ ಬಡ ರೈತ ಭಾಸ್ಕರ್ ರೆಡ್ಡಿ ಅವರ ಪುತ್ರಿ ಪ್ರವಾಲಿಕಾ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಬೀದರ್ ತಾಲ್ಲೂಕಿಗೆ ಟಾಪರ್ ಆಗಿ ಹೊರ ಹೊಮ್ಮುವ ಮೂಲಕ ಗಮನ ಸೆಳೆದಿದ್ದಾರೆ.
ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಪ್ರವಾಲಿಕಾ, ಶೇ 99.2 ರಷ್ಟು ಅಂಕ ಗಳಿಸಿದ್ದಾರೆ.
ಕನ್ನಡದಲ್ಲಿ 125, ಹಿಂದಿ 100, ಗಣಿತ 100, ವಿಜ್ಞಾನ 99, ಸಮಾಜ ವಿಜ್ಞಾನ 98 ಹಾಗೂ ಇಂಗ್ಲಿಷ್‍ನಲ್ಲಿ 98 ಅಂಕ ಪಡೆದಿದ್ದಾರೆ.
‘ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದರಿಂದ ಅತೀವ ಸಂತಸವಾಗಿದೆ. ಪಾಲಕರು, ಶಿಕ್ಷಕರ ಪ್ರೋತ್ಸಾಹ ಹಾಗೂ ಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಪ್ರವಾಲಿಕಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ವಸತಿ ನಿಲಯದಲ್ಲಿ ಇದ್ದ ಕಾರಣ ಸಂಪೂರ್ಣ ಮೊಬೈಲ್‍ನಿಂದ ದೂರವಿದ್ದೆ. ಓದಿನಲ್ಲಿ ಏಕಾಗ್ರತೆ ಕಾಯ್ದುಕೊಂಡಿದ್ದೆ’ ಎಂದು ತಿಳಿಸಿದರು.
‘ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯಲಿದ್ದೇನೆ. ಮುಂದೆ ಐಎಎಸ್ ಆಗುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.