ADVERTISEMENT

ಕಾವಡ ಯಾತ್ರೆ: ಬಂದವರ ಓಣಿ ನೀರಿನ ಜಲಾಭಿಷೇಕ

5 ಕಿ.ಮೀ ದೂರದಿಂದ ಕುಂಭ, ಕಲಶಗಳಲ್ಲಿ ನೀರು ಹೊತ್ತು ತಂದ ಮಹಿಳೆಯರು ಮಕ್ಕಳು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 6:32 IST
Last Updated 7 ಆಗಸ್ಟ್ 2025, 6:32 IST
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಕಾವಡ ಯಾತ್ರೆಯಲ್ಲಿ ಮುಖ್ಯ ಕಾವಡ ಹಿಡಿದಿರುವ ಭಕ್ತರು
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಕಾವಡ ಯಾತ್ರೆಯಲ್ಲಿ ಮುಖ್ಯ ಕಾವಡ ಹಿಡಿದಿರುವ ಭಕ್ತರು   

ಬಸವಕಲ್ಯಾಣ: ನಗರದಲ್ಲಿ ಬುಧವಾರ ಬೃಹತ್ ಕಾವಡ ಯಾತ್ರೆ ನಡೆಯಿತು. ಬಂದವರ ಓಣಿ ತೀರ್ಥದ ನೀರನ್ನು ಹೊತ್ತುಕೊಂಡು ಬಂದು ಸದಾನಂದ ಸ್ವಾಮಿ ಮಠದಲ್ಲಿನ ಶಿವನ ಪ್ರತಿಮೆಗೆ ಅಭಿಷೇಕ ಮಾಡಲಾಯಿತು.

ಮಹಿಳೆ ಮಕ್ಕಳು ಸೇರಿದಂತೆ ಅನೇಕರು ಕುಂಭ, ಕಲಶಗಳಲ್ಲಿ ನೀರು ತುಂಬಿಕೊಂಡು ಬಂದರು. ಕೆಲವರು ತಲೆಮೇಲೆ ನೀರಿನ ಕಲಶ ಇಟ್ಟುಕೊಂಡಿದ್ದರೆ, ಅನೇಕರು ಕೋಲಿನ ಎರಡೂ ತುದಿಗೆ ಅವುಗಳನ್ನು ಕಟ್ಟಿ ಹೆಗಲ ಮೇಲೆ ಹೊತ್ತುಕೊಂಡು ಬಂದರು. ಪಲ್ಲಕ್ಕಿಯಂತೆ ಪುಷ್ಪಗಳಿಂದ ಸಿಂಗರಿಸಿದ್ದ ಮುಖ್ಯ ಕಾವಡಕ್ಕೆ ನೀರಿನ ಎರಡು ಕೊಡಗಳನ್ನು ಕಟ್ಟಲಾಗಿತ್ತು. ಒಬ್ಬರಾದ ಮೇಲೆ ಇನ್ನೊಬ್ಬರು ಇದನ್ನು ಹೆಗಲ ಮೇಲೆ ಹೊತ್ತುಕೊಳ್ಳುತ್ತಿದ್ದರು.

ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ಕಾವಡ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು.

ADVERTISEMENT

ಭಜನಾ ತಂಡ, ವಾದ್ಯ ಮೇಳದವರು ಯಾತ್ರೆಗೆ ಹೊಸ ಮೆರಗು ನೀಡಿದರು. ಮಹಿಳೆಯರು ಒಂದೇ ಬಣ್ಣದ ಸೀರೆ ಉಟ್ಟುಕೊಂಡು ಗಮನ ಸೆಳೆದರು. ಪುರುಷರು ತಲೆಮೇಲೆ ಭಗವಾ ಟೊಪ್ಪಿಗೆ ಮತ್ತು ಬಿಳಿ ವಸ್ತ್ರಗಳನ್ನು ಧರಿಸಿದ್ದರಿಂದ ಮೆರವಣಿಗೆಯ ಆಕರ್ಷಣೆ ಹೆಚ್ಚಿತ್ತು. ವಾಹನದ ಮೇಲೆ ಶಿವ ಪ್ರತಿಮೆ ಇಡಲಾಗಿತ್ತು. ಅನೇಕರು ಇದಕ್ಕೆ ತೆಂಗು, ಕರ್ಪೂರ ಅರ್ಪಿಸಿದರು. ಸದಾನಂದ ಮಠಕ್ಕೆ ಬಂದಾಗ ಸಾಲಿನಲ್ಲಿ ನಿಂತು ಶಿವಲಿಂಗಕ್ಕೆ ನೀರೆರೆಯಲಾಯಿತು. ಅನ್ನ ಸಂತರ್ಪಣೆಯೂ ನಡೆಯಿತು.

ಬಸವಕಲ್ಯಾಣದಲ್ಲಿ ಬುಧವಾರ ನಡೆದ ಕಾವಡ ಯಾತ್ರೆಯಲ್ಲಿ ಮುಖ್ಯ ಕಾವಡ ಹಿಡಿದಿರುವ ಭಕ್ತರು
ಬಸವಕಲ್ಯಾಣದಲ್ಲಿ ಬುಧವಾರ ನಡೆದ ಕಾವಡ ಯಾತ್ರೆಯಲ್ಲಿ ಶಾಸಕ ಶರಣು ಸಲಗರ ಭಜನೆ ಮಾಡುತ್ತ ಪಾಲ್ಗೊಂಡರು. ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಇದ್ದರು

ಕಾವಡ ಹಿಡಿದ ಶಾಸಕ ಮಾಜಿ ಶಾಸಕರು

ಶಾಸಕ ಶರಣು ಸಲಗರ ಅವರು ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ಮೂಲಕ ಬಂದರು. ಭಜನೆ ಮಾಡಿದರು. ಕೆಲಕಾಲ ಮುಖ್ಯ ಕಾವಡ ಸಹ ಹಿಡಿದಿದ್ದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ತ್ರಿಪುರಾಂತದಲ್ಲಿನ ಅವರ ಮನೆಯ ಎದುರು ಕಾವಡ ಯಾತ್ರೆಯನ್ನು ಸ್ವಾಗತಿಸಿದರು. ಪಾದಯಾತ್ರಿಗಳಿಗೆ ಕುಡಿಯುವ ನೀರು ಹಣ್ಣು ವಿತರಿಸಿದರು. ಕೆಲಕಾಲ ಅವರೂ ಕಾವಡ ಹೊತ್ತುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.