ADVERTISEMENT

ಹೆಸರಿಗಷ್ಟೇ ಖಾನಾಪೂರ ಜಂಕ್ಷನ್‌, ಪಿಟ್‌ಲೈನ್‌

ಸೂಕ್ತ ನಿರ್ವಹಣೆಯ ಕೊರತೆ; ರೈಲುಗಳ ಓಡಾಟಕ್ಕೆ ಸೀಮಿತವಾದ ಜಂಕ್ಷನ್‌

ಶಶಿಕಾಂತ್ ಎಸ್. ಶೆಂಬೆಳ್ಳಿ
Published 31 ಮೇ 2025, 5:41 IST
Last Updated 31 ಮೇ 2025, 5:41 IST
ಭಾಲ್ಕಿ ತಾಲ್ಲೂಕಿನ ಖಾನಾಪೂರ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಶುಕ್ರವಾರ ಟಾರ್‌ ಹಾಕಲಾಯಿತು
ಭಾಲ್ಕಿ ತಾಲ್ಲೂಕಿನ ಖಾನಾಪೂರ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಶುಕ್ರವಾರ ಟಾರ್‌ ಹಾಕಲಾಯಿತು   

ಬೀದರ್‌: ಉತ್ತರ ಭಾರತದ ಹಲವು ಮಹಾನಗರಗಳಿಗೆ ಸಂಪರ್ಕ ಕಲ್ಪಿಸಿ, ಪ್ರಯಾಣದ ಅವಧಿ ಕಡಿಮೆಗೊಳಿಸುವ ಉದ್ದೇಶದಿಂದ ಸ್ಥಾಪಿಸಿರುವ ಭಾಲ್ಕಿ ತಾಲ್ಲೂಕಿನ ಖಾನಾಪುರ ಜಂಕ್ಷನ್‌ ಹೆಸರಿಗಷ್ಟೇ ಸೀಮಿತವಾಗಿದೆ.

ಖಾನಾಪುರ ಜಂಕ್ಷನ್‌ ಒಂದು ಕಡೆ ಕಲಬುರಗಿ ಮೂಲಕ ರಾಜ್ಯದ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನೊಂದು ಕಡೆ ನಾಂದೇಡ ಮೂಲಕ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ಕೊಂಡಿಯಾಗಿದೆ. ವಿಕಾರಾಬಾದ್‌, ಸಿಕಂದರಾಬಾದ್‌ ಮೂಲಕ ಉತ್ತರದ ಹಲವು ರಾಜ್ಯಗಳಿಗೆ ರೈಲುಗಳು ಸಂಚಾರ ಬೆಳೆಸುತ್ತವೆ. ಬೀದರ್‌, ಖಾನಾಪುರ ಜಂಕ್ಷನ್‌ ಮೂಲಕ ಸಂಚರಿಸಿದರೆ ಪ್ರಯಾಣದ ಅವಧಿ ಸಾಕಷ್ಟು ತಗ್ಗುತ್ತದೆ. ಆದರೆ, ಈ ನಿಟ್ಟಿನಲ್ಲಿ ಪ್ರಗತಿ ಆಗಿಲ್ಲ.

ದೇಶದ ಇತರೆ ಭಾಗಗಳಿಗೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಖಾನಾಪುರ ಜಂಕ್ಷನ್‌ ನಿರ್ಮಾಣಕ್ಕೆ 1998–99ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ, ದೀರ್ಘಕಾಲ ಅದು ನನೆಗುದಿಗೆ ಬಿದ್ದಿತ್ತು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಆಸ್ಥೆ ವಹಿಸಿ ಖಾನಾಪುರ ಮಾರ್ಗ ಪೂರ್ಣಗೊಳಿಸಿ, 2013ರಲ್ಲಿ ಅದನ್ನು ಉದ್ಘಾಟಿಸಿದ್ದರು. ಬೀದರ್‌–ಖಾನಾಪುರ–ಹುಮನಾಬಾದ್‌ ನಡುವೆ ಡೆಮು ರೈಲು ಸೇವೆಗೂ ಚಾಲನೆ ಕೊಟ್ಟಿದ್ದರು.

ADVERTISEMENT

ಖಾನಾಪೂರದಲ್ಲಿ ಪಿಟ್‌ಲೈನ್‌ ಹಾಗೂ ಕೋಚ್‌ ಶೆಡ್‌ ನಿರ್ಮಾಣಕ್ಕೆ ₹10 ಕೋಟಿ ಅನುದಾನ ಮೀಸಲಿಟ್ಟಿದ್ದರು. ಬೀದರ್‌–ಕಲಬುರಗಿ ರೈಲು ಮಾರ್ಗ ಕೂಡ ಅವರ ಅವಧಿಯಲ್ಲೇ ಪೂರ್ಣಗೊಂಡಿತ್ತು. ಇನ್ನೇನು ‘ಸೆಕ್ಯೂರಿಟಿ ಇನ್‌ಸ್ಪೆಕ್ಶನ್‌’ ಆಗಿ ಈ ಮಾರ್ಗದಲ್ಲಿ ರೈಲು ಸಂಚರಿಸಬೇಕಿತ್ತು. ಆದರೆ, 2014ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಕಂಡಿತು. ಬಳಿಕ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಮಾರ್ಗದಲ್ಲಿ ಡೆಮು ರೈಲು ಸಂಚಾರ ಕಲಬುರಗಿ ವರೆಗೆ ವಿಸ್ತರಣೆಗೊಂಡಿತು.

ಕುಂಟುತ್ತ ಏಳುತ್ತ 2017–18ರಲ್ಲಿ ಖಾನಾಪೂರದಲ್ಲಿ ಸುಸಜ್ಜಿತ ಪಿಟ್‌ಲೈನ್‌ ಹಾಗೂ ಕೋಚ್‌ ಶೆಡ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತು. ಮೊದಲ ವರ್ಷ ಇದೇ ಪಿಟ್‌ಲೈನ್‌ನಲ್ಲಿ ರೈಲುಗಳನ್ನು ಸ್ವಚ್ಛಗೊಳಿಸಲಾಯಿತು. ಕೋವಿಡ್‌ ಒಕ್ಕರಿಸಿದ ನಂತರ ಕೆಲವು ತಿಂಗಳ ವರೆಗೆ ರೈಲುಗಳು ಸಂಚರಿಸಲಿಲ್ಲ. ಇದರ ನೇರ ಪರಿಣಾಮ ಖಾನಾಪೂರ ಜಂಕ್ಷನ್‌ ಮೇಲೆ ಬೀರಿತು. ಪರಿಸ್ಥಿತಿ ಸಾಮಾನ್ಯವಾದ ನಂತರವೂ ಇದರತ್ತ ಯಾರೂ ಚಿತ್ತ ಹರಿಸಲಿಲ್ಲ. ಇದರಿಂದಾಗಿ ₹10 ಕೋಟಿಯಲ್ಲಿ ನಿರ್ಮಿಸಿದ ಪಿಟ್‌ಲೈನ್‌ ಬಳಕೆಯಾಗುತ್ತಿಲ್ಲ. ನೀರಿನ ವ್ಯವಸ್ಥೆ ಹಾಗೂ ವಿದ್ಯುತ್‌ ಸಂಪರ್ಕ ವ್ಯವಸ್ಥೆಯ ನೆಪವೊಡ್ಡಿ ಇಲ್ಲಿ ರೈಲುಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಆದರೆ, ರೈಲ್ವೆ ಇಲಾಖೆಗೆ ಇದೇನೂ ದೊಡ್ಡ ವಿಷಯವಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಪಿಟ್‌ಲೈನ್‌ ಆರಂಭಿಸಬೇಕು ಎಂಬುದು ರೈಲು ಪ್ರಯಾಣಿಕರ ಆಗ್ರಹವಾಗಿದೆ.

ಪಿಟ್‌ಲೈನ್‌ನಿಂದ ಏನೆಲ್ಲ ಅನುಕೂಲ:

ಯಾವ ಜಿಲ್ಲೆಯ ನಿಲ್ದಾಣದಲ್ಲಿ ಪಿಟ್‌ಲೈನ್‌ಗಳಿರುತ್ತವೆಯೋ ಅಂತಹ ಕಡೆಗಳಲ್ಲಿ ಹೆಚ್ಚಿನ ರೈಲು ಸೌಲಭ್ಯ ಕಲ್ಪಿಸಲಾಗುತ್ತದೆ. ಪಿಟ್‌ಲೈನ್‌ನಲ್ಲಿ ರೈಲುಗಳ ಸ್ವಚ್ಛತೆಯ ಜೊತೆಗೆ ಅವುಗಳ ನಿರ್ವಹಣೆ, ಗಂಟೆಗಟ್ಟಲೇ ಅವುಗಳ ನಿಲುಗಡೆಗೆ ಸ್ಥಳಾವಕಾಶ ಇರುತ್ತದೆ. ಈ ಕಾರಣಕ್ಕಾಗಿ ಪಿಟ್‌ಲೈನ್‌ ಬಹಳ ಮಹತ್ವದ್ದು.

ಸದ್ಯ ಖಾನಾಪೂರದಲ್ಲಿರುವ ಪಿಟ್‌ಲೈನ್‌ ಬಳಸದ ಕಾರಣ ಬೀದರ್‌ಗೆ ಬಂದು ಸೇರುತ್ತಿರುವ ರೈಲುಗಳ ಸ್ವಚ್ಛತೆ ಬೀದರ್‌ನಲ್ಲಿ ಮಾಡುತ್ತಿದ್ದರೆ, ಅವುಗಳ ನಿರ್ವಹಣೆಯ ಕೆಲಸ ಬೆಂಗಳೂರು, ಹೈದರಾಬಾದ್‌ ಸೇರಿದಂತೆ ಬೇರೆ ನಿಲ್ದಾಣಗಳಲ್ಲಿ ಮಾಡಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಹೊಸ ರೈಲುಗಳು ಜಿಲ್ಲೆಗೆ ಮಂಜೂರಾಗುವುದರ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ರೈಲು ಪ್ರಯಾಣಿಕರ ಆತಂಕ.

ಖಾನಾಪೂರ ಜಂಕ್ಷನ್‌ನಲ್ಲಿರುವ ಸ್ಕೈವಾಕ್‌ ಮೇಲೆ ಶೆಡ್‌ ನಿರ್ಮಿಸುವ ಕೆಲಸ ಶುಕ್ರವಾರ ಭರದಿಂದ ನಡೆಯಿತು
ಖಾನಾಪೂರ ಜಂಕ್ಷನ್‌
ಖಾನಾಪೂರ ಜಂಕ್ಷನ್‌ನಲ್ಲಿರುವ ರೈಲು ಹಳಿ ದುರಸ್ತಿ ಕಾರ್ಯ ಶುಕ್ರವಾರ ನಡೆಯಿತು

- ಯಾವ್ಯಾವ ರೈಲುಗಳ ಸಂಚಾರ

ಖಾನಾಪುರ ಜಂಕ್ಷನ್‌ ಮೂಲಕ ಬೀದರ್‌–ಕಲಬುರಗಿ ಹೈದರಾಬಾದ್‌–ಪುಣೆ ನಾಂದೇಡ್‌–ಬೆಂಗಳೂರು ರೈಲುಗಳು ಸಂಚರಿಸುತ್ತವೆ. ಆದರೆ ಬೀದರ್‌–ಕಲಬುರಗಿ ಹಾಗೂ ಕಲಬುರಗಿ–ಬೀದರ್‌ ನಡುವೆ ಎರಡು ಕಡೆಗಳಿಂದ ದಿನಕ್ಕೆ ತಲಾ ನಾಲ್ಕು ಸಲ ಸಂಚರಿಸುವ ಡೆಮು ರೈಲು ನಿಲ್ಲುತ್ತದೆ. ಪುಣೆ–ಹೈದರಾಬಾದ್‌ ಹಾಗೂ ಹೈದರಾಬಾದ್‌–ಪುಣೆ ರೈಲು ಕೂಡ ನಿಲುಗಡೆಯಾಗುತ್ತದೆ. ಆದರೆ ನಾಂದೇಡ್‌–ಬೆಂಗಳೂರು ಬೆಂಗಳೂರು–ನಾಂದೇಡ್‌ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ಇತರೆ ದೂರದ ಭಾಗಗಳಿಗೆ ತೆರಳುವ ಎಕ್ಸ್‌ಪ್ರೆಸ್‌ ರೈಲುಗಳು ನಿಲ್ಲುವುದಿಲ್ಲ. ಸುಮಾರು 20ಕ್ಕೂ ಹೆಚ್ಚು ಸರಕು ಸಾಗಣೆ ರೈಲುಗಳು ನಿತ್ಯ ಸಂಚರಿಸುತ್ತವೆ. ಹೆಚ್ಚಿನ ರೈಲುಗಳು ನಿಲುಗಡೆ ಮಾಡದ ಕಾರಣ ಪ್ರಯಾಣಿಕರ ಓಡಾಟವೂ ಬಹಳ ಕಡಿಮೆಯಿದೆ. ನಿತ್ಯ ಟಿಕೆಟ್‌ನಿಂದ ₹2 ಸಾವಿರ ವರೆಗೆ ಬಂದರೆ ಹೆಚ್ಚು ಎಂಬಂತಹ ಪರಿಸ್ಥಿತಿ ಇದೆ.

ಜಂಕ್ಷನ್‌ನಲ್ಲಿ ಏನೇನು ಸೌಲಭ್ಯವಿದೆ?

ಖಾನಾಪುರ ಜಂಕ್ಷನ್‌ ಸ್ಥಾಪಿಸಲಾಗಿದೆ. ಆದರೆ ಅಲ್ಲಿರುವ ಸೌಲಭ್ಯಗಳ ಬಗ್ಗೆ ನೋಡಿದಾಗ ಬಹಳ ನಿರಾಸೆಯಾಗುತ್ತದೆ. ಸಾಮಾನ್ಯ ಟಿಕೆಟ್‌ ಕೌಂಟರ್‌ ಇದೆ. ಆದರೆ ಮುಂಗಡ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ ಇಲ್ಲ. ಸಾಮಾನ್ಯ ಪ್ರಯಾಣಿಕರ ನಿರೀಕ್ಷಣಾ ಕೊಠಡಿ ಇದೆ. ಆದರೆ ವಿಐಪಿ ನಿರೀಕ್ಷಣಾ ಕೊಠಡಿ ಇಲ್ಲ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳು ಬಹಳ ಚಿಕ್ಕದಾಗಿವೆ. ಅವುಗಳನ್ನು ಪ್ರಯಾಣಿಕರಿಗಿಂತ ಅಲ್ಲಿನ ಸಿಬ್ಬಂದಿಯೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಪಾಳಿಗೆ ತಕ್ಕಂತೆ ಮೂವರು ಸ್ಟೇಶನ್‌ ಮಾಸ್ಟರ್‌ಗಳಿದ್ದಾರೆ. ಆರು ಜನ ‘ಪಾಯಿಂಟ್ಸ್‌ಮೆನ್‌’ಗಳಿದ್ದಾರೆ. ಕತ್ತಲಾಗುತ್ತಿದ್ದಂತೆ ಜನರ ಓಡಾಟವೇ ಇರುವುದಿಲ್ಲ. ನಿಲ್ದಾಣವೆಲ್ಲ ಬಿಕೋ ಎನ್ನುತ್ತದೆ. ಜನ ಹೋಗಲು ಹಿಂದೇಟು ಹಾಕುತ್ತಾರೆ.

ಬೀದರ್‌ನಲ್ಲಿ ರೈಲುಗಳ ಸ್ವಚ್ಛತೆ

ಖಾನಾಪುರ ಜಂಕ್ಷನ್‌ನಲ್ಲಿರುವ ಪಿಟ್‌ಲೈನ್‌ ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಸದ್ಯ ಬೀದರ್‌ ರೈಲು ನಿಲ್ದಾಣದಲ್ಲಿ ನಾಲ್ಕು ರೈಲುಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.  ಬೀದರ್‌–ಯಶವಂತಪುರ ಬೀದರ್‌–ಮಚಲಿಪಟ್ಟಣ ಬೀದರ್‌–ಹೈದರಾಬಾದ್‌ ಇಂಟರ್‌ಸಿಟಿ ಹಾಗೂ ಬೀದರ್‌–ಕಲಬುರಗಿ ಡೆಮು ರೈಲು ಸೇರಿದೆ. ಆದರೆ ರೈಲುಗಳ ನಿರ್ವಹಣಾ ಕೆಲಸ ಬೀದರ್‌ ರೈಲು ನಿಲ್ದಾಣದಲ್ಲಿ ಆಗುತ್ತಿಲ್ಲ. ಬೀದರ್‌–ಹೈದರಾಬಾದ್‌ ಇಂಟರ್‌ಸಿಟಿ ರೈಲಿನ ನಿರ್ವಹಣಾ ಕೆಲಸ ಹೈದರಾಬಾದ್‌ನಲ್ಲಿ ಮಾಡಲಾಗುತ್ತಿದೆ. ಒಂದು ರೈಲು ಯಶವಂತಪುರದಲ್ಲಿ ಇನ್ನೊಂದು ಮಚಲಿಪಟ್ಟಣದಲ್ಲಿ ನಿರ್ವಹಿಸಲಾಗುತ್ತಿದೆ.

- ಜಂಕ್ಷನ್‌ನಿಂದ ಜನರಿಗೇಕೆ ಅನಾನುಕೂಲ

ಖಾನಾಪುರ ಜಂಕ್ಷನ್‌ ಭಾಲ್ಕಿ ತಾಲ್ಲೂಕಿನ ಖಾನಾಪುರ ಹಾಗೂ ಮಳಚಾಪುರ ಗ್ರಾಮಗಳ ನಡುವೆ ನೆಲೆಸಿದೆ. ಹೆಚ್ಚು ಕಡಿಮೆ ಎರಡೂ ಗ್ರಾಮಗಳಿಗೆ ಸಮಾನ ಅಂತರದಲ್ಲಿದೆ. ಗ್ರಾಮಗಳಿಂದ ರೈಲು ನಿಲ್ದಾಣಕ್ಕೆ ಯಾವುದೇ ಬಸ್‌ ಸೌಕರ್ಯ ಇಲ್ಲ. ಆಟೊಗಳು ಕೂಡ ಹೆಚ್ಚಾಗಿ ಸಂಚರಿಸುವುದಿಲ್ಲ. ಒಂದು ವೇಳೆ ರೈಲಿಗೆ ಬಂದರೆ ಗ್ರಾಮಕ್ಕೆ ನಡೆದುಕೊಂಡೇ ಹೋಗಬೇಕು. ಮಕ್ಕಳು ವಯಸ್ಸಾದವರು ಹಾಗೂ ಲಗೇಜ್‌ ಇದ್ದರೆ ಇನ್ನೂ ಕಷ್ಟ. ಹೀಗಾಗಿ ಹೆಚ್ಚಿನವರು ರೈಲಿನ ಬದಲು ಬಸ್‌ಗಳಲ್ಲಿ ಸಂಚರಿಸಲು ಇಷ್ಟಪಡುತ್ತಾರೆ.

ಯಾವ ವ್ಯವಸ್ಥೆಯೂ ಇಲ್ಲ

ಕೋವಿಡ್‌ನಲ್ಲಿ ಖಾನಾಪೂರ ಜಂಕ್ಷನ್‌ನಲ್ಲಿರುವ ಪಿಟ್‌ಲೈನ್‌ ಬಂದ್‌ ಆಗಿತ್ತು. ನಂತರ ಪುನಃ ಆಗಿಲ್ಲ. ಅಲ್ಲಿ ನೀರು ವಿದ್ಯುತ್‌ ಪೂರೈಕೆ ಸೇರಿದಂತೆ ಯಾವ ವ್ಯವಸ್ಥೆಯೂ ಇಲ್ಲ. ಅದು ಸರಿ ಹೋದರೆ ಪುನಃ ರೈಲುಗಳನ್ನು ಅಲ್ಲಿ ಸ್ವಚ್ಛಗೊಳಿಸಬಹುದು. –ನರಸಿಂಗ್‌ ಹಿರಿಯ ಸೆಕ್ಷೆನ್‌ ಎಂಜಿನಿಯರ್‌ ರೈಲ್ವೆ ಸ್ವಚ್ಛತಾ ವಿಭಾಗ ಮೂರು ವರ್ಷಗಳಿಂದ ಆಗಿಲ್ಲ ನಾನು ಕಳೆದ ಮೂರು ವರ್ಷಗಳಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಮೂರು ವರ್ಷಗಳಿಂದ ಯಾವೊಂದು ರೈಲಿನ ಸ್ವಚ್ಛತೆ ಇಲ್ಲಿನ ಪಿಟ್‌ಲೈನ್‌ನಲ್ಲಿ ಆಗಿಲ್ಲ. –ಸತ್ಯೇಂದ್ರಕುಮಾರ ಸ್ಟೇಶನ್‌ ಮಾಸ್ಟರ್‌ ಖಾನಾಪೂರ ಜಂಕ್ಷನ್‌

- ಸಚಿವರ ಆಗಮನ;

ರೈಲು ನಿಲ್ದಾಣದಲ್ಲಿ ಸ್ವಚ್ಛತೆ ಹೊಸ ಟಾರ್‌ ರಸ್ತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರು ಶನಿವಾರ (ಮೇ 31) ಭಾಲ್ಕಿ ತಾಲ್ಲೂಕಿನ ಖಾನಾಪೂರ ಜಂಕ್ಷನ್‌ನಲ್ಲಿ ಸರಕು ಶೆಡ್‌ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಸಚಿವರು ಬರುವುದು ಖಚಿತವಾಗಿರುವ ವಿಷಯ ತಿಳಿಯುತ್ತಿದ್ದಂತೆ ಖಾನಾಪೂರ ಜಂಕ್ಷನ್‌ನಲ್ಲಿ ಶುಕ್ರವಾರ ಬಿರುಸಿನಿಂದ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯ ನಡೆಯಿತು. ಖಾನಾಪೂರ–ಮಳಚಾಪೂರ ಗ್ರಾಮದ ಮುಖ್ಯರಸ್ತೆಯಿಂದ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸಾಕಷ್ಟು ತಗ್ಗು ದಿಣ್ಣೆಗಳು ಬಿದ್ದಿದ್ದವು. ಪೊದೆ ಮರಗಳು ಬೆಳೆದು ಓಡಾಡಲು ಕಷ್ಟ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೆಸಿಬಿ ಮೂಲಕ ಪೊದೆ ತೆಗೆದು ಟಾರ್‌ ಹಾಕುವುದು ಶುಕ್ರವಾರ ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ಗಮನಕ್ಕೆ ಬಂತು. ಇನ್ನು ನಿಲ್ದಾಣದ ಹೊರಭಾಗ ಹಾಗೂ ಒಳಭಾಗದ ಹಲವೆಡೆ ವಿದ್ಯುತ್‌ ದೀಪಗಳು ಹಾಳಾಗಿದ್ದವು. ಅವುಗಳನ್ನು ಸರಿಪಡಿಸಲಾಗಿದೆ. ಸ್ಕೈವಾಕ್‌ ಮೇಲೆ ಹೊದಿಕೆ ಇರಲಿಲ್ಲ. ಈಗ ಅವುಗಳನ್ನು ಹಾಕಲಾಗಿದೆ. ಇಡೀ ನಿಲ್ದಾಣದ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ. ಶುಕ್ರವಾರ ಅನೇಕ ಜನ ಕಾರ್ಮಿಕರು ನಿಲ್ದಾಣದ ಸುತ್ತ ಬಿಡುವಿಲ್ಲದೆ ಕೆಲಸ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.