ADVERTISEMENT

ಮತ ಅಸಿಂಧು; ಲಾಟರಿ ಮೂಲಕ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 4:07 IST
Last Updated 31 ಜನವರಿ 2021, 4:07 IST
ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರು
ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರು   

ಭಾಲ್ಕಿ: ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಒಂದು ಮತ ಅಸಿಂಧುವಾದ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಒಟ್ಟು 18 ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪ್ರವರ್ಗ 2 ಅ ಗೆ ಮೀಸಲಾಗಿದೆ. ಅಧ್ಯಕ್ಷೆ ಸ್ಥಾನಕ್ಕಾಗಿ ಕಾಂಗ್ರೆಸ್‌ ಬೆಂಬಲಿತ ತಮೀಜಾ ಮಹ್ಮದ್‌ಸಾಬ್‌, ಬಿಜೆಪಿ ಬೆಂಬಲಿತ ಬಸಮ್ಮ ಚಂದ್ರಕಾಂತ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಸಂಗೀತಾ ಅನಿಲ್‌ಕುಮಾರ, ಬಿಜೆಪಿ ಬೆಂಬಲಿತ ಶ್ರೀದೇವಿ ಸಿದ್ದಪ್ಪ ಸ್ಪರ್ಧಿಸಿದ್ದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಸದಸ್ಯರೊಬ್ಬರು ಬ್ಯಾಲೆಟ್‌ ಪೇಪರ್‌ನ ನಿಗದಿತ ಸ್ಥಳದಲ್ಲಿ ಮತ ಚಲಾವಣೆ ಮಾಡದೆ ಇದ್ದುದ್ದರಿಂದ ಅವರ ಮತ ಅಸಿಂಧುವಾಗಿದೆ. ಹಾಗಾಗಿ, ಎರಡೂ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡು ಪಕ್ಷಗಳ ಬೆಂಬಲಿತ ಅಭ್ಯರ್ಥಿ ಗಳಿಗೆ ಸಮಮತ ಬಂದವು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸಂಗ್ರಾಮಪ್ಪ ಖಂಡಾಳೆ, ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ನಡೆಸಿದರು. ಆಗ ಅಧ್ಯಕ್ಷೆಯಾಗಿ ಕಾಂಗ್ರೆಸ್‌ ಬೆಂಬಲಿತ ತಮೀಜಾ ಮಹ್ಮದ್‌ಸಾಬ್‌, ಉಪಾಧ್ಯಕ್ಷೆಯಾಗಿ ಸಂಗೀತಾ ಅನಿಲ್‌ಕುಮಾರ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

ADVERTISEMENT

ಸದಸ್ಯರ ಆರೋಪ:

‘ಅಧಿಕಾರಿಗಳು ಮೊದಲು ಅಧ್ಯಕ್ಷ ಸ್ಥಾನದ ಬದಲು ಉಪಾಧ್ಯಕ್ಷ ಸ್ಥಾನಕ್ಕೆ ಏಕೆ ಚುನಾವಣೆ ನಡೆಸಿದ್ದಾರೆ? ಬಿಜೆಪಿ ಬೆಂಬಲಿತ 10 ಸದಸ್ಯರು ಜತೆಗಿದ್ದೇವೆ. ಆದರೂ ಕಾಂಗ್ರೆಸ್‌ ಬೆಂಬಲಿತರು ಆಯ್ಕೆಯಾಗಿದ್ದಾರೆ. ಇದಕ್ಕೆ ಅಧಿಕಾರಿಗಳ ಗೊಂದಲದ ತೀರ್ಮಾನವೇ ಕಾರಣ’ ಎಂದು ಬಿಜೆಪಿ ಬೆಂಬಲಿತ 10 ಸದಸ್ಯರು ಆರೋಪಿಸಿದ್ದಾರೆ.

‘ಪುನಃ ಚುನಾವಣೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ, ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ ಅವರಿಗೆ 10 ಜನ ಸದಸ್ಯರು ಸಹಿ ಮಾಡಿದ ಮನವಿಪತ್ರ ಸಲ್ಲಿಸಿದ್ದಾರೆ.

ಚುನಾವಣೆ ಅಧಿಕಾರಿ ತೀರ್ಪಿನ ವಿರುದ್ಧ ಕೋರ್ಟ್‌ಗೆ ಮೊರೆ ಹೋಗಲು, ತಹಶೀಲ್ದಾರ್‌ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾಗಿ ಬಿಜೆಪಿ ಬೆಂಬಲಿತರು ತಿಳಿಸಿದ್ದಾರೆ.

ಪೊಲೀಸ್‌ ಬಂದೋಬಸ್ತ್‌

ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಎರಡು ಡಿಆರ್‌ ಪೊಲೀಸ್‌ ವಾಹನ, ಸುಮಾರು 100ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಸಿಪಿಐ, ಪಿಎಸ್‌ಐ ಗ್ರಾಮದಲ್ಲಿ ಬಿಡಾರ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.