ADVERTISEMENT

ಎಚ್ಚೆತ್ತ ‘ಭಗವಂತ’, ‘ಪ್ರಭು’ ಪ್ರತ್ಯಕ್ಷ

ಉದ್ಯೋಗ ಕಳೆದುಕೊಂಡು ಮನೆ ಸೇರುತ್ತಿರುವ ಕುಟುಂಬಗಳು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 15:34 IST
Last Updated 30 ಮಾರ್ಚ್ 2020, 15:34 IST
ಬೀದರ್‌ನ ಶಹಾಪುರ ಗೇಟ್‌ ಬಳಿಯ ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಕುಡಿಯುವ ನೀರಿನ ಬಾಟಲಿ ಪೂರೈಸಿದ ಯಾಮಾಹಾ ಸಿಬ್ಬಂದಿ
ಬೀದರ್‌ನ ಶಹಾಪುರ ಗೇಟ್‌ ಬಳಿಯ ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಕುಡಿಯುವ ನೀರಿನ ಬಾಟಲಿ ಪೂರೈಸಿದ ಯಾಮಾಹಾ ಸಿಬ್ಬಂದಿ   

ಬೀದರ್: ಕೋವಿಡ್ 19 ಮುಕ್ತಿ ಹೆಸರಿನಲ್ಲಿ ಜವಾಬ್ದಾರಿಯಿಂದ ದೂರ ಉಳಿದು ಮೌನವೃತ ಕೈಗೊಂಡಿದ್ದ ಸಂಸದ ಭಗವಂತ ಖೂಬಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯೇ ಹರಿದು ಬಂದ ನಂತರ ಎಚ್ಚೆತ್ತುಕೊಂಡ ಅವರು ಮೌನ ಮುರಿದಿದ್ದಾರೆ.

ಲಾಕ್‌ಡೌನ್‌ ಹೆಸರಲ್ಲಿ ಮನೆಯಲ್ಲಿ ಲಾಕ್‌ ಆಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ನೀರು ಹಾಗೂ ಊಟದ ವ್ಯವಸ್ಥೆ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಅಲೆಮಾರಿಗಳು ವಾಸವಾಗಿರುವ ಸ್ಥಳಕ್ಕೆ ತೆರಳಿ ಅವರಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯ ವಿತರಣೆ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು ಚೆಕ್‌ಪೋಸ್ಟ್‌ಗೆ ತೆರಳಿ ಕಗ್ಗತ್ತಲಲ್ಲಿ ಕೆಲಸ ಮಾಡುತ್ತಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಕ್ಷೇಮ ವಿಚಾರಿಸಿದರೆ, ಬೀದರ್‌ ಶಾಸಕ ರಹೀಂ ಖಾನ್‌ ಅವರು ಕಡು ಬಡವರಿಗೆ ಮೂರು ವಾರಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯ ಪೂರೈಕೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಮನೆಯಲ್ಲಿ ಉಳಿದುಕೊಂಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಸೋಮವಾರ ಸಂಸದ ಹಾಗೂ ಸಚಿವರು ಮನೆಯಿಂದ ಹೊರ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.