ADVERTISEMENT

ಭಾಲ್ಕಿ | ದೊರೆಯದ ‘ಖಾತ್ರಿ’ ಕೆಲಸ; ಸಂಕಷ್ಟ

ಉದ್ಯೋಗ ನೀಡದೆ ಸತಾಯಿಸುತ್ತಿರುವ ಅಧಿಕಾರಿಗಳು; ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 2:40 IST
Last Updated 18 ಜೂನ್ 2020, 2:40 IST
ಭಾಲ್ಕಿಯ ತಾಲ್ಲೂಕು ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಕೆಲಸ ನೀಡಿ ಎಂದು ಕೂಲಿ ಕಾರ್ಮಿಕರು ಆಗ್ರಹಿಸಿದರು
ಭಾಲ್ಕಿಯ ತಾಲ್ಲೂಕು ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಕೆಲಸ ನೀಡಿ ಎಂದು ಕೂಲಿ ಕಾರ್ಮಿಕರು ಆಗ್ರಹಿಸಿದರು   

ಭಾಲ್ಕಿ: ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಯಲ್ಲಿ ಹಣವಿಲ್ಲದೆ ನಿತ್ಯದ ಜೀವನ ನಿರ್ವಹಣೆಗೆ ಅಗತ್ಯ ವಸ್ತುಗಳನ್ನು ಖರೀದಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಕೂಲಿ ಕೆಲಸ ಮಾಡಿ ಹಣ ಸಂಪಾದಿಸೋಣ ಎಂದರೆ ಅಧಿಕಾರಿಗಳು ಕೆಲಸ ಮಾಡಲು ಕಾಮಗಾರಿಗಳು ಇಲ್ಲ ಎಂದು ಹೇಳುತ್ತಿದ್ದಾರೆ...

ಇವು ತಾಲ್ಲೂಕಿನ ದಾಡಗಿ ಗ್ರಾಮದ ಕೂಲಿ ಕಾರ್ಮಿಕರ ನೋವಿನ ನುಡಿಗಳು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಜಮಾಯಿಸಿದ ಸುಮಾರು 80 ಜನ ಕೂಲಿ ಕಾರ್ಮಿಕರು ಉದ್ಯೋಗ ನೀಡಲು ಆಗ್ರಹಿಸಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದಿಪೀಕಾ ನಾಯ್ಕರ್ ಗೆ ಮನವಿ ಸಲ್ಲಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಕೂಲಿ ಕಾರ್ಮಿಕರು, ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ 200 ದಿನಗಳವರೆಗೆ ಕೆಲಸ ನೀಡಬೇಕು ಎಂಬ ನಿಯಮವಿದೆ. ಆದರೆ ನಮಗೆ ಕೇವಲ 7 ದಿನಗಳು ಮಾತ್ರ ಕೆಲಸ ನೀಡಿದ್ದಾರೆ. ಇನ್ನು ಹೆಚ್ಚಿನ ಕೆಲಸ ನೀಡಿ ಎಂದು ಅಧಿಕಾರಿಗಳಿಗೆ ಕೇಳಿದರೆ ಕಾಮಗಾರಿ ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಈ ಮುಂಚೆ ಕೂಲಿ ಕಾರ್ಮಿಕರಿಂದ ಮಾಡಿಸಬೇಕಾದ ಕೆಲಸವನ್ನು ಜೆಸಿಬಿಯಿಂದ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಕಂಪ್ಯೂಟರ್ ಆಪರೇಟರ್ ಎನ್‍ಎಂಆರ್ ತೆಗೆದುಕೊಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಪ್ರತಿಯೊಂದು ಕೆಲಸದಲ್ಲಿ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಾರೆ. ಕೊಳವೆ ಬಾವಿಯ ಮೋಟರ್ ಕೆಡದಿದ್ದರೂ ಕೆಟ್ಟಿದೆ ಎಂದು ಬೋಗಸ್ ಬಿಲ್ ಎತ್ತಿದ್ದಾರೆ ಎಂದು ದೂರಿದರು.

ಕೂಲಿ ಕಾರ್ಮಿಕರಿಗೆ ಶೀಘ್ರದಲ್ಲಿ ಕೆಲಸ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಿದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.