ಹುಲಸೂರ: ತಾಲ್ಲೂಕಿನ ಮಿರಖಲ ಗ್ರಾಮಸ್ಥರು ಹತ್ತು ಹಲವು ಸಮಸ್ಯೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ.
ಸಮರ್ಪಕ ರಸ್ತೆಗಳಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾಮದ ಕೆಲ ಭಾಗಗಳಲ್ಲಿ ನಾಲ್ಕು ಚಕ್ರದ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂಥ ಸ್ಥಿತಿಯಿದೆ. ಇದರಿಂದಾಗಿ ಹೆರಿಗೆ, ಅಪಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಗ್ರಾಮದ ಮುಖ್ಯ ರಸ್ತೆಗಳು ಹಾಗೂ ಒಳ ರಸ್ತೆಗಳು ತುಂಬಾ ಇಕ್ಕಟ್ಟಾಗಿವೆ. ಗ್ರಾಮ ಪಂಚಾಯಿತಿಯವರು ರಸ್ತೆ ಬದಿಗಳಲ್ಲಿ ಚರಂಡಿ ನಿರ್ಮಿಸದೆ ಇರುವುದರಿಂದ ರಸ್ತೆಗಳ ಮೇಲೆ ಗಲೀಜು ನೀರು ಹಾಗೂ ಮಳೆ ನೀರು ಹರಿಯುತ್ತದೆ.
ಅಲ್ಲಲ್ಲಿ ಚರಂಡಿ ಇದ್ದರೂ, ಹೂಳು ತುಂಬಿದೆ. ನೀರು ಸರಾಗವಾಗಿ ಹರಿದೇ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಲಕ್ಷಣಗಳು ಹೆಚ್ಚಾಗಿವೆ. ದುರ್ವಾಸನೆಯೂ ಹೆಚ್ಚಾಗಿದೆ.
ಜೋರು ಮಳೆಯಾದಾಗ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಇದರಿಂದ ರಸ್ತೆಗಳು ಹಾಳಾಗಿ ತಗ್ಗು–ಗುಂಡಿಗಳು ಬಿದ್ದಿವೆ. ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಸಂಚರಿಸಲೂ ಭಯಪಡುವಂಥ ಸ್ಥಿತಿ ಇದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಗ್ರಾಮದಲ್ಲಿ ಬಹುತೇಕ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳಿಲ್ಲ. ರಾತ್ರಿ ಸಮಯದಲ್ಲಿ ಒಬ್ಬಂಟಿಯಾಗಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಮಳೆಗಾಲದ ಸಮಯ ಆಗಿರುವುದರಿಂದ ಕೆಸರು, ವಿಷಜಂತುಗಳ ಭಯ ಕಾಡುತ್ತಿದೆ.
ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರವಿದ್ದು, ಅಂಗನವಾಡಿ ಕೇಂದ್ರದ ಅಕ್ಕಪಕ್ಕದಲ್ಲಿ ಗಲೀಜು ನೀರು ಹರಿಯುತ್ತದೆ. ಅಂಥ ಪ್ರದೇಶದಲ್ಲೇ ಮಕ್ಕಳ ಅಕ್ಷರಾಭ್ಯಾಸ ನಡೆಯುತ್ತಿದ್ದು, ಊಟ, ಉಪಾಹಾರ ಸೇವಿಸಬೇಕಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಅವುಗಳನ್ನು ಹೊರತುಪಡಿಸಿ ಯಾವ ವಾಹನ ಸೌಲಭ್ಯವೂ ಇಲ್ಲ. ಅಗತ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರು ಬೇರೆ ಊರಿಗೆ ತೆರಳಬೇಕಾದರೆ ಪಕ್ಕದಲ್ಲಿರುವ ಹುಲಸೂರ ಪಟ್ಟಣಕ್ಕೆ ಬರಬೇಕು.
ಗ್ರಾಮದಲ್ಲಿ ತೀರಾ ಹಳೆಯದಾದ ಹಾಗೂ ಈಗ ಸಂಪೂರ್ಣವಾಗಿ ಹಾಳಾಗಿರುವ ಪಶು ಆಸ್ಪತ್ರೆಯ ಕಟ್ಟಡವಿದೆ. ಅಲ್ಲಿ ವೈದ್ಯರು ಸೇರಿದಂತೆ ಯಾವ ಸೌಲಭ್ಯ, ಸಿಬ್ಬಂದಿಯೂ ಇಲ್ಲ. ಗ್ರಾಮಕ್ಕೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯವಿದ್ದು, ಗ್ರಾಮಸ್ಥರು ಅದಕ್ಕಾಗಿ ಕಾಯುತ್ತಿದ್ದಾರೆ.
ಈ ಕುರಿತು ಅಭಿಪ್ರಾಯ ಪಡೆಯಲು ಪಿಡಿಒ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಚರಂಡಿ ನೀರು ನಿಂತಲ್ಲಿಯೇ ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಸಾಂಕ್ರಾಮಿಕ ರೋಗ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಪಂಚಾಯಿತಿಯವರು ಗ್ರಾಮದ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕುಗಣೇಶ ಪಾಟೀಲ ಮಿರಖಲ ಗ್ರಾಮಸ್ಥ
ಮಿರಖಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿ ಗ್ರಾಮದ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದುಮಹದೇವ ಜಮ್ಮು ತಾಲ್ಲೂಕು ಪಂಚಾಯಿತಿ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.