ADVERTISEMENT

ಮಾತೃಭಾಷೆ ಪ್ರತಿಯೊಬ್ಬರ ಉಸಿರಾಗಲಿ

ಪ್ರೊ ಸಿದ್ರಾಮಪ್ಪ ಮಾಸಿಮಾಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 10:08 IST
Last Updated 9 ನವೆಂಬರ್ 2019, 10:08 IST
ಬೀದರ್‌ನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಿವಿಬಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಉದ್ಘಾಟಿಸಿದರು
ಬೀದರ್‌ನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಿವಿಬಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಉದ್ಘಾಟಿಸಿದರು   

ಬೀದರ್: ‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಜರು ಭಾಷೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ಬಿವಿಬಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.

ಇಲ್ಲಿಯ ನೌಬಾದ್‌ನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ನಾಡು, ನುಡಿ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬಸವಾದಿ ಶರಣರ ನಡೆ ನುಡಿ ಒಂದಾಗಿದ್ದವು. ಆದ್ದರಿಂದಲೇ ಅವರು ರಚಿಸಿದ ವಚನಗಳು ಪ್ರಸ್ತುತವಾಗಿವೆ. ಬದುಕಿನಲ್ಲಿ ನೆಮ್ಮದಿಯ ಪಡೆದುಕೊಳ್ಳಬೇಕಾದರೆ ನಿರಂತರವಾಗಿ ವಚನ ಸಾಹಿತ್ಯದ ಅಧ್ಯಯನ ಮಾಡಬೇಕು’ ಎಂದು ನುಡಿದರು.

‘ಕನ್ನಡಿಗರಾದ ನಾವು ಕನ್ನಡ ಭಾಷೆಯ ಮೇಲೆ ಪ್ರೀತಿ, ವಾತ್ಸಲ್ಯ ತೋರಿಸಬೇಕು. ಬದುಕಿನುದ್ದಕ್ಕೂ ಮಾತೃ ಭಾಷೆ ನಮ್ಮ ಉಸಿರಾಗಬೇಕು’ ಎಂದು ತಿಳಿಸಿದರು. ಉಪನ್ಯಾಸಕ ಲೋಕೇಶ ಉಡಬಾಳೆ ಮಾತನಾಡಿ, ‘ಕನ್ನಡಿಗರು ಆಂಗ್ಲ ಭಾಷೆಯ ವ್ಯಾಮೋಹದಿಂದ ಮುಕ್ತರಾಗಿ ಮಾತೃ ಭಾಷೆಗೆ ದ್ರೋಹ ಬಗೆಯಲಾರದೆ ಮಾತೃ ಭಾಷೆಯ ಬಗ್ಗೆ ಗೌರವ ಹೊಂದಬೇಕು’ ಎಂದರು.

ADVERTISEMENT

ಉಪನ್ಯಾಸಕಿ ಜಗದೇವಿ ತಿಪಶೆಟ್ಟಿ ಮಾತನಾಡಿ, ‘ಕನ್ನಡ ಭಾಷೆ ಬೆಳೆಸುವಲ್ಲಿ ಯುವ ಜನಾಂಗದ ಪಾತ್ರ ಮಗತ್ವದ್ದಾಗಿದೆ’ ಎಂದು ತಿಳಿಸಿದರು. ಮುಖ್ಯ ಶಿಕ್ಷಕಿ ಅನಿತಾ ದೇಶಮುಖ ಮಾತನಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಉಮಾಕಾಂತ ಮೀಸೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾರದಾ ಪದವಿಪೂರ್ವ ಮಹಾವಿದ್ಯಾಲಯದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ರೇಣುಕಾ ಸುಭಾಷ, ರಾಧಿಕಾ ಶಿವಶಂಕರ ಮತ್ತು ಸುನೀತಾ ಶಿವಶರಣಪ್ಪ ಅವರನ್ನು ಸನ್ಮಾನಿಸಲಾಯಿತು.
ರಮೇಶ ಬಿರಾದಾರ ಸ್ವಾಗತಿಸಿದರು. ಕೆ.ಸತ್ಯಮೂರ್ತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.