ADVERTISEMENT

ಬೀದರ್ | ಸರ್ಕಾರ ರೈತರ ನೆರವಿಗೆ ಧಾವಿಸಲಿ: ರಮೇಶ ಪಾಟೀಲ ಸೋಲಪುರ

ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 15:09 IST
Last Updated 16 ಅಕ್ಟೋಬರ್ 2020, 15:09 IST
ರಮೇಶ ಪಾಟೀಲ ಸೋಲಪುರ
ರಮೇಶ ಪಾಟೀಲ ಸೋಲಪುರ   

ಬೀದರ್: ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರ ನೆರವಿಗೆ ಧಾವಿಸಬೇಕು ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಆಗ್ರಹಿಸಿದ್ದಾರೆ.

ಬೆಳೆ ನಷ್ಟಕ್ಕೆ ಏಕರೆಗೆ ₹ 25 ಸಾವಿರ ಪರಿಹಾರ ಒದಗಿಸಬೇಕು. ಮನೆ, ಮಠ ಕಳೆದುಕೊಂಡವರಿಗೂ ಸಹಾಯಹಸ್ತ ಚಾಚಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆ ಭಾರಿ ಅನಾಹುತ ಸೃಷ್ಟಿಸಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಸೋಯಾಬೀನ್, ಕಬ್ಬು, ತೊಗರಿ, ಹತ್ತಿ ಮೊದಲಾದ ಬೆಳೆ ಹಾನಿಯಾಗಿದೆ. ಹೊಲದಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ನೂರಾರು ಮನೆಗಳು ಕುಸಿದಿವೆ. ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿವೆ. ನೀರಿನಲ್ಲಿ ಮುಳುಗಿ ಅನೇಕ ಸೇತುವೆಗಳು ಬಿರುಕು ಬಿಟ್ಟಿವೆ. ರಸ್ತೆ, ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಬರದಿಂದಾಗಿ ತತ್ತರಿಸಿದ್ದ ಜಿಲ್ಲೆಯ ರೈತರು ಇದೀಗ ಅತಿವೃಷ್ಟಿಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಬೆಳೆಗಳು ಜಲಾವೃತಗೊಂಡಿವೆ. ಅನೇಕರು ಬೆಳೆ ರಾಶಿ ಮಾಡಲು ಹಾಕಿದ್ದ ಬಣವೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಕಷ್ಟವಂತೂ ಹೇಳತೀರದ್ದಾಗಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್‍ನಲ್ಲಿ ನಾಲ್ಕು ದಿನ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಆಗಿರುವ ಬೆಳೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯ ಕುರಿತು ಜಿಲ್ಲಾ ಆಡಳಿತ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಿದರೂ ಸರ್ಕಾರ ಈವರೆಗೆ ಯಾವುದೇ ಪರಿಹಾರ ಘೋಷಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಅಧಿಕಾರದಲ್ಲಿ ಇದ್ದಾಗಲೆಲ್ಲ ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದೆ. ಸಾಲ ಮನ್ನಾ, ಬೆಳೆ ನಷ್ಟ ಪರಿಹಾರ ಸೇರಿದಂತೆ ಹಲವು ರೀತಿಯಲ್ಲಿ ನೆರವಾಗುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದೆ ಎಂದು ಸ್ಮರಿಸಿದ್ದಾರೆ.

ಕೊರೊನಾದ ಕಾರಣ ಬಡವರು, ರೈತರು, ಕೃಷಿ ಕೂಲಿ ಕಾರ್ಮಿಕರು ಮೊದಲೇ ತೊಂದರೆಯಲ್ಲಿದ್ದಾರೆ. ಅತಿವೃಷ್ಟಿ ಅವರನ್ನು ಇನ್ನಷ್ಟು ಹೈರಾಣಾಗಿಸಿದೆ. ಸರ್ಕಾರ ಜನರ ಸಂಕಷ್ಟವನ್ನು ಕಣ್ಣು ತೆರೆದು ನೋಡಲಿ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಿರುವ ಬೆಳೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟದ ಸಮಗ್ರ ಸಮೀಕ್ಷೆ ನಡೆಸಬೇಕು. ಅತಿವೃಷ್ಟಿ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಕಲ್ಪಿಸಬೇಕು. ಹಾಳಾದ ರಸ್ತೆ, ಸೇತುವೆ, ವಿದ್ಯುತ್ ಕಂಬ, ಮೊಬೈಲ್ ಸಂಪರ್ಕ ಮೊದಲಾದವುಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.