ADVERTISEMENT

ಬೀದರ್‌ನಲ್ಲಿ ಸಾಮೂಹಿಕವಾಗಿ ಪತ್ರ ಬರೆದ 411 ವಿದ್ಯಾರ್ಥಿಗಳು

‘ನನ್ನ ಮಾತೃ ಭೂಮಿಗೊಂದು ಪತ್ರ’ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 13:59 IST
Last Updated 6 ಅಕ್ಟೋಬರ್ 2018, 13:59 IST
ಬೀದರ್‌ನ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಅಂಚೆ ಇಲಾಖೆಯ ವತಿಯಿಂದ ಶನಿವಾರ ‘ನನ್ನ ಮಾತೃ ಭೂಮಿಗೊಂದು ಪತ್ರ’ ಶೀರ್ಷಿಕೆಯಡಿ ನಡೆದ ಪತ್ರ ಲೇಖನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಬೀದರ್‌ನ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಅಂಚೆ ಇಲಾಖೆಯ ವತಿಯಿಂದ ಶನಿವಾರ ‘ನನ್ನ ಮಾತೃ ಭೂಮಿಗೊಂದು ಪತ್ರ’ ಶೀರ್ಷಿಕೆಯಡಿ ನಡೆದ ಪತ್ರ ಲೇಖನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು   

ಬೀದರ್: ಅಂಚೆ ಇಲಾಖೆಯ ವತಿಯಿಂದ ‘ನನ್ನ ಮಾತೃ ಭೂಮಿಗೊಂದು ಪತ್ರ’ ಶೀರ್ಷಿಕೆಯಡಿ ಇಲ್ಲಿನ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ಪತ್ರ ಲೇಖನ ಸ್ಪರ್ಧೆಯಲ್ಲಿ 411 ವಿದ್ಯಾರ್ಥಿಗಳು ಪತ್ರ ಬರೆದರು.

‘ಪತ್ರ ಲೇಖನ ಕಲೆಗೆ ಉತ್ತೇಜನ ನೀಡಲು ಸಂಘಟಿಸಿರುವ ಪತ್ರ ಲೇಖನ ಸ್ಪರ್ಧೆಗೆ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ’ ಎಂದು ಅಂಚೆ ಇಲಾಖೆಯ ಅಧಿಕಾರಿ ಮಂಗಲಾ ಭಾಗವತ್ ತಿಳಿಸಿದರು.

‘ಪತ್ರ ಲೇಖನ ಸ್ಪರ್ಧೆಯ ಯಶಸ್ಸಿಗೆ ಮೊದಲು ಶಾಲಾ ಕಾಲೇಜುಗಳಿಗೆ ಭೇಟಿ ಕೊಟ್ಟು ಪತ್ರ ಲೇಖನದ ಮಹತ್ವ, ವಿಷಯದ ಪರಿಕಲ್ಪನೆಯ ಅರಿವು ಮೂಡಿಸಲಾಗಿದೆ. ನಂತರ ಸ್ಪರ್ಧೆಯನ್ನು ಆಯೋಜಿಸಿ ಪತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ಖುದ್ದು ಪತ್ರ ಬರೆದು ಅಂಚೆ ಪೆಟ್ಟಿಗೆಯಲ್ಲಿ ಹಾಕುವಂತೆ ಸಾರ್ವಜನಿಕರಿಗೆ ಪ್ರೇರಣೆ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಸ್ಪರ್ಧೆಯ ಆಶಯದ ಕುರಿತು ಪ್ರತಿ ಗ್ರಾಮಗಳಲ್ಲೂ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ 271 ಅಂಚೆ ಶಾಖೆಗಳು, 32 ಉಪ ಕಚೇರಿಗಳಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯ ಅಧ್ಯಕ್ಷ ಎಸ್.ಬಿ. ಬಿರಾದಾರ ಮಾತನಾಡಿ, ‘ಮಕ್ಕಳಲ್ಲಿ ಬರವಣಿಗೆ, ಅಭಿವ್ಯಕ್ತಿ ಕೌಶಲ ಹೆಚ್ಚಿಸಲು ಪತ್ರ ಲೇಖನ ಸ್ಪರ್ಧೆಗಳು ಸಹಕಾರಿಯಾಗಲಿವೆ’ ಎಂದು ತಿಳಿಸಿದರು.

‘ಈಗಿನ ಮೊಬೈಲ್, ವಾಟ್ಸ್‍ಆ್ಯಪ್, ಫೇಸ್‌ಬುಕ್‌ ಯುಗದಲ್ಲಿ ಪತ್ರ ಬರೆಯುವವರೇ ಇಲ್ಲವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಂಚೆ ಇಲಾಖೆ ಪತ್ರ ಲೇಖನ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದು ನುಡಿದರು.
ಮುಖ್ಯ ಶಿಕ್ಷಕಿ ಪ್ರತಿಭಾ ಚಾಮಾ, ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.