ADVERTISEMENT

ಮೊಬೈಲ್ ಬಳಕೆಗೆ ಮಿತಿ ಇರಲಿ

ಜನಸೇವಾ ಶಾಲೆಯಲ್ಲಿ ಮೌಲ್ಯ ಜಾಗೃತಿ ಕಾರ್ಯಕ್ರಮ: ವಿಠ್ಠಲ ನಾಯಕ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 13:04 IST
Last Updated 5 ಡಿಸೆಂಬರ್ 2022, 13:04 IST
ಬೀದರ್‌ನ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹಾಸ್ಯ ಹಾಗೂ ಮೌಲ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಹಾಸ್ಯ ಕಲಾವಿದ ವಿಠ್ಠಲ ನಾಯಕ್ ಕಲಡ್ಕ ಮಾತನಾಡಿದರು
ಬೀದರ್‌ನ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹಾಸ್ಯ ಹಾಗೂ ಮೌಲ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ಹಾಸ್ಯ ಕಲಾವಿದ ವಿಠ್ಠಲ ನಾಯಕ್ ಕಲಡ್ಕ ಮಾತನಾಡಿದರು   

ಬೀದರ್‌: ಮೊಬೈಲ್, ಟಿವಿ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಅಗತ್ಯಕ್ಕೆ ತಕ್ಕಂತೆ ಇತಿ, ಮಿತಿಯೊಳಗೆ ಬಳಸಬೇಕು ಎಂದು ಹಾಸ್ಯ ಕಲಾವಿದ ವಿಠ್ಠಲ ನಾಯಕ್ ಕಲಡ್ಕ ಸಲಹೆ ಮಾಡಿದರು.

ಜನಸೇವಾ ಪ್ರತಿಷ್ಠಾನದ ವತಿಯಿಂದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಹಾಸ್ಯ ಹಾಗೂ ಮೌಲ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನಗಳು ಮಾನವನ ಒಳಿತಿಗಾಗಿ ಇವೆಯೇ ಹೊರತು ಹಾಳು ಮಾಡುವುದಕ್ಕಲ್ಲ. ಹೀಗಾಗಿ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇಂದಿನ ಯುವಕರು ಮೊಬೈಲ್, ಟಿವಿಗಳಲ್ಲೇ ಮುಳುಗಿ ಹೋಗಿದ್ದಾರೆ. ಹೆತ್ತವರು, ಸಮಾಜವನ್ನೂ ಮರೆತಿದ್ದಾರೆ. ಬಹಳ ಒತ್ತಡದಲ್ಲಿ ಇದ್ದಾರೆ. ಯುವ ಪೀಳಿಗೆ ಕಷ್ಟಕ್ಕೆ ಹೆದರುತ್ತಿದ್ದಾರೆ. ವಿಚಲಿತರಾಗುತ್ತಿದ್ದಾರೆ. ಕಾರಣ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
ಯುವಕರು ಜೀವನದಲ್ಲಿ ಶಿಸ್ತು, ಸಂಯಮ, ಒಳ್ಳೆಯ ಆಚಾರ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಜನನಿ, ಜನ್ಮಭೂಮಿಯನ್ನು ಗೌರವಿಸಬೇಕು. ಪ್ರಕೃತಿಯನ್ನು ಪ್ರೀತಿಸಬೇಕು ಎಂದು ಹೇಳಿದರು.
ಅನೇಕ ಹಾಸ್ಯ ಚಟಾಕಿಗಳನ್ನು ಹಾರಿಸಿ ನೆರೆದಿದ್ದ ಮಕ್ಕಳು, ಯುವಕರು, ಪಾಲಕರು ಹಾಗೂ ಶಿಕ್ಷಕರು ನಕ್ಕು ನಲಿಯುವಂತೆ ಮಾಡಿದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಜನಸೇವಾ ಪ್ರತಿಷ್ಠಾನದ ವತಿಯಿಂದ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.

ADVERTISEMENT


ಜನಸೇವಾ ಶಾಲೆಯಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ಕೊಡಲಾಗುತ್ತಿದೆ. ಮೌಲ್ಯಗಳನ್ನು ಬೆಳೆಸಲಾಗುತ್ತಿದೆ. ಪ್ರೇರಣಾತ್ಮಕ ಕಾರ್ಯಕ್ರಮಗಳ ಮೂಲಕ ಅವರನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಪ್ರತಿಷ್ಠಾನದ ಹಿರಿಯ ಸದಸ್ಯ ಬಿ.ಎಸ್. ಕುದರೆ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಶರಣಪ್ಪ ಸಿಕೇನಪುರ, ದಕ್ಷಿಣ ಕನ್ನಡ ಕರಾವಳಿ ಸಂಘದ ಕಾರ್ಯದರ್ಶಿ ರಘುರಾಮ ಭಟ್, ರಾಯಚೂರಿನ ಸೇನಾ ತರಬೇತುದಾರ ಪಂಪಣ್ಣ ದೇವದುರ್ಗ, ಜನಸೇವಾ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಶಿವಲಿಂಗಪ್ಪ ಜಲಾದೆ ಉಪಸ್ಥಿತರಿದ್ದರು. ಶಿಕ್ಷಕ ಅಮೀತ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.