ADVERTISEMENT

ಲಾಕ್‍ಡೌನ್: ಸ್ತಬ್ಧಗೊಂಡ ಬೀದರ್ ಜಿಲ್ಲೆ

ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ; ಆಸ್ಪತ್ರೆಗೆ ನಡೆದುಕೊಂಡು ಹೋದ ರೋಗಿಗಳ ಸಂಬಂಧಿಕರು

​ಪ್ರಜಾವಾಣಿ ವಾರ್ತೆ
Published 11 ಮೇ 2021, 5:45 IST
Last Updated 11 ಮೇ 2021, 5:45 IST
ಬೀದರ್ ಹೊರವಲಯದ ಕರ್ನಾಟಕ-ತೆಲಂಗಾಣ ಗಡಿಯಲ್ಲಿ ನಿರ್ಮಿಸಲಾದ ಚೆಕ್‍ಪೋಸ್ಟ್
ಬೀದರ್ ಹೊರವಲಯದ ಕರ್ನಾಟಕ-ತೆಲಂಗಾಣ ಗಡಿಯಲ್ಲಿ ನಿರ್ಮಿಸಲಾದ ಚೆಕ್‍ಪೋಸ್ಟ್   

ಬೀದರ್: ಕೋವಿಡ್ ಸೋಂಕು ತಡೆಗೆ ರಾಜ್ಯ ಸರ್ಕಾರ ವಿಧಿಸಿರುವ 15 ದಿನಗಳ ಲಾಕ್‍ಡೌನ್‍ನ ಮೊದಲ ದಿನವಾದ ಸೋಮವಾರ ಬೀದರ್ ಜಿಲ್ಲೆ ಸ್ತಬ್ಧಗೊಂಡಿತು.

ಬಹುತೇಕ ಜನ ಮನೆಗಳಿಂದ ಹೊರಗೆ ಬರಲಿಲ್ಲ. ಅನಗತ್ಯವಾಗಿ ಸಂಚರಿಸಿದ ಅನೇಕರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದರು. ಅಷ್ಟು ಮಾತ್ರವಲ್ಲ; ವಾಹನಗಳನ್ನೂ ಜಪ್ತಿ ಮಾಡಿಕೊಂಡರು.

ಬೆಳಿಗ್ಗೆ 6ರಿಂದ 10ರವರೆಗೆ ಕಿರಾಣಿ, ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದುಕೊಂಡಿದ್ದವು. ಜನ ಕಾಲ್ನಡಿಗೆಯಲ್ಲಿ ಅಂಗಡಿಗಳಿಗೆ ತೆರಳಿ ಬೇಕಾದ ವಸ್ತುಗಳನ್ನು ಖರೀದಿಸಿದರು.

ADVERTISEMENT

ಬೆಳಿಗ್ಗೆ 10 ರ ನಂತರ ಆಸ್ಪತ್ರೆ, ಮೆಡಿಕಲ್ ಹೊರತುಪಡಿಸಿ ಎಲ್ಲ ಅಂಗಡಿಗಳು ಮುಚ್ಚಿಕೊಂಡವು. ನಗರದ ಬಹುತೇಕ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಲಾಕ್‍ಡೌನ್ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ನಗರದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದರು. ದ್ವಿಚಕ್ರ ವಾಹನ, ಕಾರುಗಳಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದವರಿಗೆ, ಕೊರೊನಾ ಸೋಂಕಿತರ ಸಂಬಂಧಿಕರಿಗೆ ಅನುವು ಮಾಡಿಕೊಟ್ಟರು. ಆದರೆ, ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನಗಳನ್ನು ಜಪ್ತಿ ಮಾಡಿದರು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು.

ಹೊಸ ನಗರದ ಅನೇಕ ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಜಾರಿಯಲ್ಲಿತ್ತು. ಆದರೆ, ಓಲ್ಡ್ ಸಿಟಿಯಲ್ಲಿ ಹೋಟೆಲ್ ತೆರೆಯಲು ಅವಕಾಶ ಕೊಟ್ಟಿಲ್ಲ ಎಂದು ಓಲ್ಡ್‍ಸಿಟಿಯ ನಿವಾಸಿಯೊಬ್ಬರು ದೂರಿದರು.

ಅನೇಕ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಹಳ್ಳದಕೇರಿಯ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಿಂದ ಹಣ್ಣು ಹಾಗೂ ತರಕಾರಿ ತರುವುದಕ್ಕಾಗಿ ವಾಹನ ಒಯ್ಯಲು ಅವಕಾಶ ನೀಡಲಿಲ್ಲ. ಸರ್ಕಾರವೇ ವ್ಯಾಪಾರ ನಡೆಸಲು ಅನುಮತಿ ನೀಡಿದೆ. ವಾಹನ ಒಯ್ಯಬಾರದೆಂದರೆ ಮಾರಾಟದ ವಸ್ತುಗಳನ್ನು ಕಿಲೋ ಮೀಟರ್‌ಗಟ್ಟಲೆ ತಲೆ ಮೇಲೆ ಹೊತ್ತುಕೊಂಡು
ತರಬೇಕೇ ಎಂದು ಗೋಳು ತೋಡಿಕೊಂಡರು.

ಕಿರಾಣಿ ಅಂಗಡಿ ತೆರೆದಿಡಲು ಅವಕಾಶ ಕೊಟ್ಟಿದ್ದೇ ಸರ್ಕಾರ. ಈಗ ವಾಹನ ಬಳಸಬಾರದೆಂದರೆ ಗ್ರಾಹಕರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಹೇಗೆ ತೆಗೆದುಕೊಂಡು ಬರಬೇಕು. ಒಂದು ಕಡೆ ತೆರೆದಿಡಲು ಅವಕಾಶ ಕೊಟ್ಟು, ಮತ್ತೊಂದು ಕಡೆ ನಿರ್ಬಂಧಗಳನ್ನು ಹಾಕಿದರೆ ಹೇಗೆ ಎಂದು ಕಿರಾಣಿ ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ಜನತಾ ಕರ್ಫ್ಯೂ ವೇಳೆ ಜನ ಗಂಭೀರ ಆಗಿರಲಿಲ್ಲ. ಆದರೆ, ಕಟ್ಟುನಿಟ್ಟಿನ ಲಾಕ್‍ಡೌನ್‍ನಿಂದಾಗಿ ಬಹುತೇಕರು ಮನೆಯಿಂದ ಹೊರಗೆ ಬಂದಿಲ್ಲ. ಜನ ಸ್ವಯಂ ಪ್ರೇರಣೆಯಿಂದ ಸಹಕರಿಸಿದರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರಲಿದೆ’ ಎಂದು ನಗರದ ನಿವಾಸಿ ಮಾಣಿಕಪ್ಪ ಹೇಳಿದರು.

ರೈಲಿನಲ್ಲಿ ಬಂದ ಪ್ರಯಾಣಿಕರಿಗೆ ತೊಂದರೆ

ರೈಲಿನಲ್ಲಿ ವಿವಿಧೆಡೆಯಿಂದ ಬೀದರ್‌ ನಗರಕ್ಕೆ ಬಂದವರು ಆಟೊಗಳಿಲ್ಲದೆ, ವಾಹನಗಳ ಬಳಕೆಗೆ ಅವಕಾಶವೂ ಇಲ್ಲದೆ ತೊಂದರೆಗೊಳಗಾದರು.

ನಗರದ ರೈಲು ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ಪುಟ್ಟ ಮಕ್ಕಳೊಂದಿಗೆ ನಡೆದುಕೊಂಡೇ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಗ್ರಾಮೀಣ ಪ್ರದೇಶದವರು ಸಂಕಟ ಅನುಭವಿಸಿದರು.

836 ವಾಹನಗಳ ಜಪ್ತಿ

ಬೀದರ್ ಜಿಲ್ಲೆಯಲ್ಲಿ ಲಾಕ್‍ಡೌನ್ ಇದ್ದರೂ, ಅನವಶ್ಯಕವಾಗಿ ಸಂಚರಿಸುತ್ತಿದ್ದ 836 ವಾಹನಗಳನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆ್ಯಕ್ಟ್ 2020 ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾಸ್ಕ್ ಧರಿಸದ 1,028 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ₹1,02,800 ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ತಿಳಿಸಿದ್ದಾರೆ.

ಲಾಕ್‍ಡೌನ್ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಅವಕಾಶ ನೀಡದ ತೆಲಂಗಾಣ ಪೊಲೀಸರು

ಕೋವಿಡ್ ಸೋಂಕಿತರನ್ನು ಸಾಗಿಸುತ್ತಿದ್ದ ಆಂಬುಲೆನ್ಸ್‌ಗಳಿಗೆ ತೆಲಂಗಾಣ ಪೊಲೀಸರು ತನ್ನ ಗಡಿಯೊಳಗೆ ಪ್ರವೇಶ ನೀಡಲಿಲ್ಲ.

ನಗರದ ಹೊರವಲಯದ ಶಹಾಪುರ ಗೇಟ್ ಬಳಿಯ ಗಡಿಯಲ್ಲಿ ‘ತೆಲಂಗಾಣ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ಇಲ್ಲ. ಪ್ರವೇಶ ಕೊಡಬೇಡಿ ಎಂದು ಸರ್ಕಾರದ ಆದೇಶ ನೀಡಿದೆ’ ಎಂದು ಹೇಳಿ ಪೊಲೀಸರು ಸೋಂಕಿತರನ್ನು ಒಯ್ಯುತ್ತಿದ್ದ ಆಂಬುಲೆನ್ಸ್‌ಗಳನ್ನು ಮರಳಿ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.