ADVERTISEMENT

ಮಕ್ಕಳಲ್ಲಿ ಅಪೌಷ್ಟಿಕತೆ: ಡಿ.1ರಿಂದ ಮೊಟ್ಟೆ, ಬಾಳೆಹಣ್ಣು

ಚಂದ್ರಕಾಂತ ಮಸಾನಿ
Published 28 ನವೆಂಬರ್ 2021, 13:46 IST
Last Updated 28 ನವೆಂಬರ್ 2021, 13:46 IST
ಭಾಲ್ಕಿ ತಾಲ್ಲೂಕಿನ ಜ್ಯಾಂತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಹಾಲು ಸೇವಿಸುತ್ತಿರುವುದು
ಭಾಲ್ಕಿ ತಾಲ್ಲೂಕಿನ ಜ್ಯಾಂತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಹಾಲು ಸೇವಿಸುತ್ತಿರುವುದು   

ಬೀದರ್: ಕೋವಿಡ್‌ನಿಂದ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಪ್ರಾಥಮಿಕ ಶಾಲೆಗಳು ಇತ್ತೀಚೆಗಷ್ಟೆ ತೆರೆದುಕೊಂಡಿವೆ. ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ಕಂಡು ಬಂದಿರುವ ಕಾರಣ ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳಿಗೆ ಹಾಲು, ಬಾಳೆ ಹಣ್ಣು ಹಾಗೂ ಮೊಟ್ಟೆ ಕೊಡಲು ಮುಂದಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಬಡ ಹಾಗೂ ಸಾಮಾನ್ಯ ಕುಟುಂಬದ ಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಡಿಸೆಂಬರ್ 1ರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವುದನ್ನು ಶುರು ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಎಲ್ಲ ಶಾಲೆಗಳಲ್ಲೂ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ.

ಭಾಲ್ಕಿ, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ನವೆಂಬರ್ 25ರಿಂದ ಹಾಲು ಕೊಡಲು ಶುರು ಮಾಡಲಾಗಿದೆ. ಮಕ್ಕಳು ಸರತಿ ಸಾಲಿನಲ್ಲಿ ನಿಂತು ಹಾಲು ಸೇವಿಸಿ ಸಂಭ್ರಮಿಸುತ್ತಿದ್ದಾರೆ.

ADVERTISEMENT

‘ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ವಾರದಲ್ಲಿ ಎರಡು ಬಾರಿ ಮೊಟ್ಟೆ ವಿತರಿಸಲು ನಿರ್ಧರಿಸಲಾಗಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು ಕೊಡಲಾಗುವುದು. ಕೆಲವು ಕಡೆ ಈಗಾಗಲೇ ಹಾಲು ಸಹ ಕೊಡಲು ಶುರು ಮಾಡಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ ತಿಳಿಸಿದರು.

‘ಶಿಕ್ಷಣ ಇಲಾಖೆ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಮಕ್ಕಳ ಆರೋಗ್ಯ ಸರಿ ಇದ್ದರೆ ಮಾತ್ರ ಸರಿಯಾಗಿ ಪಾಠ ಕಲಿಯಲು ಸಾಧ್ಯವಿದೆ. ಅಪೌಷ್ಟಿಕತೆ ನಿವಾರಿಸಲು ಮೊಟ್ಟೆ ಹಾಗೂ ಬಾಳೆಹಣ್ಣು ಕೊಡುತ್ತಿರುವುದು ಒಳ್ಳೆಯದು’ ಎಂದು ವಿದ್ಯಾರ್ಥಿಯ ಪಾಲಕಿ ಸಾಜೀದಾಬಿ ಹೇಳಿದರು.


ಒಂದನೇ ತರಗತಿ ಮಕ್ಕಳಿಗಿಲ್ಲ ಸಮವಸ್ತ್ರ

2ರಿಂದ 7ನೇ ತರಗತಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿದೆ. ಕೆಲ ಕಡೆ 1ನೇ ತರಗತಿ ಮಕ್ಕಳಿಗೆ ಸಮವಸ್ತ್ರಗಳನ್ನೇ ವಿತರಿಸಿಲ್ಲ. ಒಂದೂವರೆ ವರ್ಷ ಶಾಲೆಗಳು ಮುಚ್ಚಿದ್ದ ಕಾರಣ ಶಿಕ್ಷಣ ಇಲಾಖೆ ಕಚೇರಿಯಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಿರಲಿಲ್ಲ. ಹಿಂದೆ ಸಲ್ಲಿಸಿದ್ದ ಬೇಡಿಕೆಗೆ ಅನುಗುಣವಾಗಿ ಸಮವಸ್ತ್ರಗಳು ಬಂದಿವೆ. ಬಹುತೇಕ ಮಕ್ಕಳಿಗೆ ಸಮವಸ್ತ್ರಗಳನ್ನು ಹಂಚಿಕೆ ಮಾಡಲಾಗಿದೆ. ದಾಸ್ತಾನು ಇದ್ದಷ್ಟು ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ. ಕೆಲ ಮಕ್ಕಳಿಗೆ ಹಳೆಯ ಪುಸ್ತಕಗಳ ವಿತರಣೆ ಮಾಡಿ ಪಾಠಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ.

‘ಕೋವಿಡ್‌ ನಂತರ ಸರ್ಕಾರಿ ಶಾಲೆಗಳಲ್ಲಿ ಸ್ವಲ್ಪ ಮಟ್ಟಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲು ಅಗತ್ಯ ಅನುದಾನ ಒದಗಿಸುವಂತೆ ಇಲಾಖೆ ಮೂಲಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ರೆಡ್ಡಿ ಹೇಳುತ್ತಾರೆ.


ವಿದ್ಯಾರ್ಥಿಗಳ ಹಾಜರಾತಿ ಇಳಿಕೆ

ಕೋವಿಡ್‌ ಪ್ರಯುಕ್ತ ಮಕ್ಕಳ ಹಾಜರಾತಿ ಕಡ್ಡಾಯವಲ್ಲ ಎಂದು ಹೇಳಿರುವ ಕಾರಣ ಪೂರ್ಣ ಪ್ರಮಾಣದಲ್ಲಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಕೋವಿಡ್‌ ಭಯದಿಂದ ಕೆಲ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಶೇಕಡ 20 ರಷ್ಟು ಸರ್ಕಾರಿ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಮದರಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಶಿಕ್ಷಕ ಮಾತ್ರ ಇದ್ದಾರೆ. ಶಾಸಕ ಬಂಡೆಪ್ಪ ಕಾಶೆಂಪೂರ ಅವರು ಶಿಕ್ಷಕರ ಕೊರತೆ ನೀಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಪ್ರಮುಖರಾದ ಸಂತೋಷ ರಾಸೂರ್‌ ಹೇಳುತ್ತಾರೆ.


533 ಅತಿಥಿ ಶಿಕ್ಷಕರ ನೇಮಕ


ಬೀದರ್‌: ಬಸವಕಲ್ಯಾಣ ತಾಲ್ಲೂಕಿನಲ್ಲಿ 182, ಔರಾದ್‌ನಲ್ಲಿ 169, ಹುಮನಾಬಾದ್‌ನಲ್ಲಿ 103, ಭಾಲ್ಕಿಯಲ್ಲಿ 67 ಹಾಗೂ ಬೀದರ್‌ ತಾಲ್ಲೂಕಿನಲ್ಲಿ 12 ಅತಿಥಿ ಶಿಕ್ಷಕರ ನೇಮಕಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 8ನೇ ತರಗತಿಗಳಲ್ಲಿ ಖಾಲಿ ಇರುವ ಒಟ್ಟು 533 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ₹ 2.39 ಕೋಟಿ ಅನುದಾನ ಅಗತ್ಯವಿರುವುದನ್ನು ಉಲ್ಲೇಖಿಸಿ ಶಿಕ್ಷಣ ಇಲಾಖೆಯ ಆಯುಕ್ತರಿಗೂ ಪ್ರಸ್ತಾವ ಕಳಿಸಲಾಗಿದೆ’ ಎಂದು ಡಿಡಿಪಿಐ ಗಂಗಣ್ಣ ಸ್ವಾಮಿ ಹೇಳುತ್ತಾರೆ.

ಒಂದರಿಂದ ಎಂಟನೇ ತರಗತಿಯಲ್ಲಿ 85,261 ಮಕ್ಕಳು ಹಾಗೂ 9, 10ನೇ ತರಗತಿಯಲ್ಲಿ 13,073 ಮಕ್ಕಳು ಸೇರಿ 1,29,024 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 14,41,344 ಪುಸ್ತಕಗಳ ಪೈಕಿ 13,45,899 ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗಿದೆ.

ಪೂರಕ ಮಾಹಿತಿ
ಮಾಣಿಕ ಭುರೆ, ಗುಂಡು ಅತಿವಾಳ, ಬಸವರಾಜ ಪ್ರಭಾ, ಮನ್ಮಥ ಸ್ವಾಮಿ, ವೀರೇಶ ಮಠಪತಿ, ಬಸವಕುಮಾರ, ನಾಗೇಶ ಪ್ರಭಾ, ಗಿರಿರಾಜ ವಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.