ಬೀದರ್ : ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಧ್ಯಮ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದ ಮೈಲೂರು ರಸ್ತೆಯಲ್ಲಿರುವ ಜಿ.ಎನ್.ಡಿ ಕಾಲೇಜಿನ ಗುರುನಾನಕ ಭವನ ಅವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದರ ಜೊತೆಗೆ ಈ ಅಂಗಗಳ ನ್ಯೂನ್ಯತೆಯನ್ನು ಎತ್ತಿ ಹಿಡಿಯುವುದು ಮತ್ತು ಪ್ರಗತಿದಾಯಕ ಕಾರ್ಯ ಮಾಡಿದರೆ ಅದನ್ನು ಪ್ರಶಂಸಿಸುವ ಕಾರ್ಯವನ್ನು ಮಾಧ್ಯಮ ಮಾಡುತ್ತಿದೆ ಎಂದರು.
ಶರಣರು, ಸಂತರ ನಾಡು ಈ ಬೀದರ್‌ನಲ್ಲಿ ಅಕಾಡೆಮಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಂತಸದ ಸಂಗತಿ. ಮಾಧ್ಯಮ ಆಡಳಿತದ ನಾಲ್ಕನೇ ಅಂಗ, ಅದನ್ನು ತಿದ್ದುವ ಮತ್ತು ಜನಾಭಿಪ್ರಾಯ ಮೂಡಿಸುವ ಕಾರ್ಯವನ್ನು ಮಾಧ್ಯಮ ಮಾಡುತ್ತ ಬಂದಿದೆ. ಇದು ಶ್ರೇಷ್ಠ ಸೇವಾ ಕಾರ್ಯ. ಸತ್ಯ ಮರೆಮಾಚದೆ ಉತ್ತಮ ಕಾರ್ಯ ಮಾಡಬೇಕು. ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದರು.
ಕೃತಕ ಬುದ್ಧಿ ಮತ್ತೆಯಿಂದ ಅನೇಕ ಆತಂಕಗಳು ಎದುರಾಗಿವೆ. ಮಾಧ್ಯಮ ರಂಗದಲ್ಲೂ ಇದರಿಂಧ ನಿರುದ್ಯೋಗ ಸಮಸ್ಯೆ ಎದುರಾಗುವ ಅಪಾಯವಿದೆ. ಅದನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುದ್ದಿಯಲ್ಲಿ ನಿಖರತೆ ಇರುವುದು ಬಹಳ ಮುಖ್ಯ. ಬರೆಯುವ ಮುಂಚೆ ಸತ್ಯ ಸತ್ಯತೆ ತಿಳಿದುಕೊಂಡು ಬರೆದರೆ ವಿಶ್ವಾಸಾರ್ಹತೆ ಬೆಳೆಯುತ್ತದೆ. ನಮ್ಮ ಸಂಹವನ ಉತ್ತಮವಾಗಿದ್ದರೆ ಸುದ್ದಿಗಳನ್ನು ಹೆಕ್ಕಿ ತೆಗೆಯಲು ಕಷ್ಟವಾಗದು ಎಂದರು.
ಜಿಲ್ಲೆಯಲ್ಲಿ ಮಾಧ್ಯಮ ತರಬೇತಿ ಕೇಂದ್ರ ಸ್ಥಾಪನೆಗೆ ಒತ್ತು ನೀಡಿದಲ್ಲಿ ನಿವೇಶನ ನೀಡಿ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಅನುಕೂಲವಾಗುತ್ತದೆ. ಇಲ್ಲಿನ ಪತ್ರಕರ್ತರ ಕೌಶಲ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಯಾವ ಸಿದ್ಧಾಂತಗಳ ಮೇಲೆ ಮಾಧ್ಯಮ ನಡೆಯಬೇಕು ಎನ್ನುವುದು ನಾವು ತಿಳಿದುಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಅದರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಅದನ್ನು ನಾವು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಿಷ್ಪಕ್ಷಪಾತವಾಗಿ, ಸಾಮಾಜಿಕ ಕಳಕಳಿ ಇಟ್ಟುಕೊಂಡು ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಗುರುದ್ವಾರಾ ಪ್ರಬಂಧಕ ಸಮಿತಿ ಅಧ್ಯಕ್ಷ ಡಾ.ಸರ್ದಾರ ಬಲಬೀರಸಿಂಗ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ, ಸದಸ್ಯರಾದ ರಶ್ಮಿ, ಅಬ್ಬಾಸ್ ಮುಲ್ಲಾ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ, ಬೀದರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ,ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸುಮಾರು 200 ಕ್ಕೂ ಅಧಿಕ ಪತ್ರಕರ್ತರು ತರಬೇತಿಯಲ್ಲಿ ಭಾಗವಹಿಸಿದ್ದರು.
ನೈಜ ಸುದ್ದಿ ನೀಡುವ ಗ್ರಾಮೀಣ ಪತ್ರಕರ್ತರು
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಶಾ ಖಾನಂ ಮಾತನಾಡಿ ಹೊಸ ತಾಂತ್ರಿಕ ಯುಗದಲ್ಲಿ ಗ್ರಾಮೀಣ ಪತ್ರಕರ್ತರು ನೈಜ ಸುದ್ದಿಗಳನ್ನು ನೀಡುತ್ತಾರೆ. ಧ್ವನಿ ಇಲ್ಲದವರಿಗೆ ಧ್ವನಿ ಕೊಡುತ್ತಾರೆ ಅಂತಹವರಿಗೆ ತರಬೇತಿ ನೀಡುವ ಕಾರ್ಯ ಅಕಾಡೆಮಿ ಮಾಡುತ್ತಿದೆ. ಪತ್ರಕರ್ತರು ಗುಂಪುಗಳಾಗಿ ಒಡೆದು ಹೋಗಿದ್ದೇವೆ. ನಾವು ಸಹ ಒಗ್ಗೂಡುವ ಕಾರ್ಯವಾಗಬೇಕಾಗಿದೆ. ವೃತ್ತಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕೆಲಸ ಆಗಬೇಕು. ತರಬೇತಿ ನೀಡುವ ಮೂಲಕ ಮಾಧ್ಯಮ ಅಕಾಡೆಮಿ ತರಬೇತಿ ಯೋಜನೆಗಳನ್ನು ರೂಪಿಸಿ ಕೌಶಲ್ಯ ಅಭಿವೃದ್ಧಿ ಮಾಡಲು ಪಣ ತೊಟ್ಟಿದೆ. ಜರ್ನಲಿಸಂ ಅಂದ್ರೆ ಕೇವಲ ಅಂಕಣ ಬರೆಯುವುದು ಮಾತ್ರವಲ್ಲ. ಅದು ಒಂದು ರೀತಿಯ ನಾಯಕತ್ವ ಯುವ ಪತ್ರಕರ್ತರು ತರಬೇತಿ ಹೊಂದಿ ಕೌಶಲ ಬೆಳೆಸಿಕೊಳ್ಳಬೇಕು. ಫ್ಯಾಕ್ಟ್ ಸರ್ಚ್ ಆಗಬೇಕು ಫೇಕ್ ಸುದ್ದಿಗಳಿಂದ ದೂರವಿರಬೇಕು. ಆದ್ದರಿಂದ ಮಾಧ್ಯಮ ಮಿತ್ರರು ಜವಾಬ್ದಾರಿ ಹೊತ್ತು ಸುದ್ದಿ ಬಿತ್ತರಿಸುವ ಕಾರ್ಯ ಮಾಡಬೇಕಾಗಿದೆ ಎಂದರು. ಎಐ ಮಾರಕ ಅಲ್ಲ ಅದು ಪೂರಕವಾಗಿ ಕೆಲಸಮಾಡುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.