ADVERTISEMENT

ಸಮರ್ಪಕವಾದ ಮಾಹಿತಿ ದೊರಕುತ್ತಿಲ್ಲ

ಸಭೆಯಲ್ಲಿ ಜಿ.ಪಂ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 4 ಮೇ 2020, 11:00 IST
Last Updated 4 ಮೇ 2020, 11:00 IST
ಕಮಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಮಾತನಾಡಿದರು
ಕಮಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಮಾತನಾಡಿದರು   

ಕಮಲನಗರ: ಕೋವಿಡ್‌ ಸೋಂಕಿನಿಂದ ಇಡೀ ವಿಶ್ವ ತತ್ತರಿಸಿದೆ. ಈ ಮಹಾಮಾರಿಯನ್ನು ತೊಲಗಿಸಲು ನೋಂದಾಯಿತ ಖಾಸಗಿ ವೈದ್ಯರು ಹಾಗೂ ಔಷಧ ಅಂಗಡಿ ಮಾಲೀಕರ ಸಹಕಾರ ಬಹಳ ಮುಖ್ಯ. ವೈದ್ಯರು ವೃತ್ತಿ ಧರ್ಮ ಪಾಲನೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಚೆಗೆ ನಡೆದ ನೋಂದಾಯಿತ ಖಾಸಗಿ ವೈದ್ಯರು ಹಾಗೂ ಔಷಧ ಅಂಗಡಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ದೇಶ ಇಂದು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೀಗಿರುವಾಗ ಕೆಲ ಖಾಸಗಿ ಆಸ್ಪತ್ರೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡದೆ, ಆಸ್ಪತ್ರೆ ಮುಚ್ಚಿರುವುದು ಗಮನಕ್ಕೆ ಬಂದಿದೆ. ಹೀಗೆ ಮುಂದುವರಿದರೆ ಅಂಥವರ ಪರವಾನಗಿ ರದ್ದು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಜಿ.ಪಂ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಮಾತನಾಡಿ,‘ಔಷಧಿ ಅಂಗಡಿ ಮಾಲೀಕರು ಕೋವಿಡ್‌ ಸೋಂಕಿನ ಲಕ್ಷಣಗಳಾದ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಮಾತ್ರೆ ತೆಗೆದುಕೊಳ್ಳಲು ಬರುವವರ ಮೊಬೈಲ್ ನಂಬರ್, ವಿಳಾಸ ಬರೆದಿಟ್ಟುಕೊಂಡು ತಾಲ್ಲೂಕು ವೈದ್ಯಾಧಿಕಾರಿಗೆ ಮಾಹಿತಿ ನೀಡಬೇಕು. ಇದರಿಂದ ಸೋಂಕಿತರನ್ನು ಬೇಗನೆ ಗುರುತಿಸಿ ಚಿಕಿತ್ಸೆ ನೀಡಲು ನೆರವಾಗುತ್ತದೆ. ಆದರೆ ಜಿಲ್ಲೆಯಲ್ಲಿರುವ ಸುಮಾರು 800 ಔಷಧ ಅಂಗಡಿ ಮಾಲೀಕರಿಂದ ಸಮರ್ಪಕವಾದ ಮಾಹಿತಿ ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ್ ಮಾತನಾಡಿ,‘ಔರಾದ್ ಮತ್ತು ಕಮಲನಗರ ತಾಲ್ಲೂಕುಗಳಲ್ಲಿ 27 ಖಾಸಗಿ ಆಸ್ಪತ್ರೆಗಳಿವೆ. ಅದರಲ್ಲಿ 25 ಆಸ್ಪತ್ರೆಗಳು ಮುಚ್ಚಿವೆ. ಕೊವಿಡ್-19 ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಇಲ್ಲವಾದರೆ ಅಂಥ ಆಸ್ಪತ್ರೆಗಳ ವಿರುದ್ದ ಕ್ರಮ ಜರುಗಿಸಲಾಗುವುದು’ ಎಂದು ನುಡಿದರು.

ಡಿಎಚ್‍ಒ ಡಾ.ವಿ.ಜಿ.ರೆಡ್ಡಿ ಮಾತನಾಡಿ,‘ಪ್ರತಿ ತಾಲ್ಲೂಕಿನಲ್ಲಿ ಮಾದರಿ ಸಂಗ್ರಹಾಲಯ ಸ್ಥಾಪಿಸಲಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ಜನರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದರು.

ಟಿಎಚ್‍ಒ ಶರಣಯ್ಯ ಸ್ವಾಮಿ ಮಾತನಾಡಿದರು.

ಎಡಿಸಿ ಶರಣಬಸಪ್ಪ ಹನುಮನಾಳ, ಔರಾದ್ ತಹಶೀಲ್ದಾರ್‌ ಎಂ.ಚಂದ್ರಶೇಖರ, ತಾಪಂ ಇಒ ಮಾಣಿಕರಾವ ಪಾಟೀಲ, ಉಪ ತಹಶೀಲ್ದಾರ್ ಗೋಪಾಲಕೃಷ್ಣ, ಸಿಪಿಐ ಪಾಲಾಕ್ಷಯ್ಯ ಹಿರೇಮಠ, ಪಿಎಸ್‍ಐ ತಾನಾಜಿ ಬೆಳಕಟ್ಟೆ, ಡಾ.ಅಶೋಕಕುಮಾರ ಮಳಗೆ, ಡಾ. ಹುಲಸೂರೆ, ಡಾ.ವಿಜಯಲಕ್ಷ್ಮಿ, ರಾಜಕುಮಾರ ನವಾಡೆ ಹಾಗೂ ಪ್ರವೀಣ ಬಿರಾದಾರ ಇದ್ದರು.

ಕಮಲನಗರ ತಹಸೀಲ್ದಾರ್ ರಮೇಶ ಪೆದ್ದೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.