ADVERTISEMENT

ಸೇನಾ ನೇಮಕಾತಿ ರ್‍ಯಾಲಿಗೆ ಸಹಕಾರ ಅಗತ್ಯ

ಸಭೆಯಲ್ಲಿ ಬಿಗ್ರೇಡಿಯರ್ ಎ.ಎಸ್. ವಾಲಿಂಬೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:56 IST
Last Updated 21 ಅಕ್ಟೋಬರ್ 2022, 6:56 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೇನಾ ನೇಮಕಾತಿ ರ್‍ಯಾಲಿ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಭಾರತೀಯ ಸೇನೆಯ ಬಿಗ್ರೇಡಿಯರ್ ಬಿಡಿಜಿ. ಝಡ್‍ಆರ್‍ಓ. ಎ.ಎಸ್. ವಾಲಿಂಬೆ ಮಾತನಾಡಿದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೇನಾ ನೇಮಕಾತಿ ರ್‍ಯಾಲಿ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಭಾರತೀಯ ಸೇನೆಯ ಬಿಗ್ರೇಡಿಯರ್ ಬಿಡಿಜಿ. ಝಡ್‍ಆರ್‍ಓ. ಎ.ಎಸ್. ವಾಲಿಂಬೆ ಮಾತನಾಡಿದರು   

ಬೀದರ್‌: ಡಿಸೆಂಬರ್ 5 ರಿಂದ 22 ರವರೆಗೆ ನಗರದ ಕ್ರೀಡಾಂಗಣದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ್‍ಯಾಲಿಗೆ ಜಿಲ್ಲಾಡಳಿತದ ಸಹಕಾರ ಅಗತ್ಯ ಎಂದು ಭಾರತೀಯ ಸೇನೆಯ ಬಿಗ್ರೇಡಿಯರ್ ಬಿಡಿಜಿ. ಝಡ್‍ಆರ್‍ಓ. ಎ.ಎಸ್. ವಾಲಿಂಬೆ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೇನಾ ನೇಮಕಾತಿ ರ್‍ಯಾಲಿ ಕುರಿತು ನಡೆದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರ್‍ಯಾಲಿಯಲ್ಲಿ ಬೀದರ್, ಬೆಳಗಾವಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಕಲಬುರಗಿ ಜಿಲ್ಲೆಗಳಿಂದ 70,357 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಬ್ಯಾರಿಕೇಡ್, ಟೆಂಟ್, ಲೈಟಿಂಗ್ ವ್ಯವಸ್ಥೆ, ಶೌಚಾಲಯ ಮತ್ತು ವೈದ್ಯಕೀಯ ಸಿಬ್ಬಂದಿ, ಅಂಬುಲೆನ್ಸ್, ವಿದ್ಯಾರ್ಥಿಗಳ ದಾಖಲಾತಿ ಪರಿಶೀಲಿಸಲು ಶಿಕ್ಷಣ ಇಲಾಖೆ, ಕಂದಾಯ ಇಲಾಖೆಯಿಂದ ಅಧಿಕಾರಿಗಳನ್ನು ನಿಯೋಜಿಸಬೇಕು. ಈ ರ್‍ಯಾಲಿಗೆ ಬೇಕಾಗುವ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಡಿಸೆಂಬರ್ 1 ರಿಂದ 25 ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಯದಂತೆ ಕ್ರೀಡಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ನಗರಸಭೆ ಅಧಿಕಾರಿಗಳು ರ್‍ಯಾಲಿ ಪ್ರಾರಂಭದ ದಿನದಿಂದ ಮುಗಿಯುವರೆಗೂ ಜಿಲ್ಲಾ ಕ್ರೀಡಾಂಗಣದ ಸ್ವಚ್ಚತೆಯ ಜತೆ ಕಾಯ್ದುಕೊಳ್ಳಬೇಕು. ತಾತ್ಕಾಲಿಕ ಶೌಚಾಲಯ ನಿರ್ಮಿಸಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಕ್ರೀಡಾಂಗಣದಲ್ಲಿ ಟೆಂಟ್ ಮತ್ತು ಬ್ಯಾರಿಕೇಡ್‍ಗಳನ್ನು ಹಾಕುವ ವ್ಯವಸ್ಥೆ ಮಾಡಬೇಕು, ಜೆಸ್ಕಾಂ ವತಿಯಿಂದ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು. ತಮ್ಮ ತಮ್ಮ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಯನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಬೆಳಗಾವಿಯ ಎ.ಆರ್.ಒ. ಕರ್ನಲ್ ನಿಶಾಂತ ಶೇಟಿ, ಮೇಜರ್ ಎ.ವಿಶ್ವನಾಥ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ, ಕಿಶೋರಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ್ ಉಪ ವಿಭಾಗಾಧಿಕಾರಿ ಮೊಹಮ್ಮದ ನಯೀಮ್ ಮೋಮಿನ್, ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಅಮೃತ ಅಷ್ಟಗಿ, ಬೀದರ್ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಗಣಪತಿ ಬಾರಾಟಕ್ಕೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಾಬಾದಕರ್‌, ನಗರಸಭೆ ಅಧಿಕಾರಿಗಳು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.