ADVERTISEMENT

14ರಂದು ಮೆಗಾ ಲೋಕ್‌ ಅದಾಲತ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 4:41 IST
Last Updated 12 ಆಗಸ್ಟ್ 2021, 4:41 IST

ಬೀದರ್‌: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಗಸ್ಟ್ 14ರಂದು ರಾಷ್ಟ್ರೀಯ ಲೋಕ ಅದಾಲತ್‌ ನಡೆಯಲಿದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಜಿ.ಎ.ಮಂಜನಾಥ ಹೇಳಿದರು.

ಮಾರ್ಚ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿದ ವ್ಯಾಜ್ಯಗಳಿಗಿಂತಲೂ ಎರಡು ಪಟ್ಟು ಅಧಿಕ ವ್ಯಾಜ್ಯಗಳನ್ನು ಶನಿವಾರ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜಿಯಾಗಬಹುದಾದ ಚೆಕ್‍ ಬೌನ್ಸ್ ಪ್ರಕರಣ, ಬ್ಯಾಂಕ್‍ ವಸೂಲಾತಿ ಪ್ರಕರಣ, ಕಾರ್ಮಿಕ ವಿವಾದ ಪ್ರಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕಗಳ ಪ್ರಕರಣ, ವೈವಾಹಿಕ ವಿವಾದ ಹಾಗೂ ಜೀವನಾಂಶದ ಪ್ರಕರಣ ಹಾಗೂ ಕೋರ್ಟಿನಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ADVERTISEMENT

ವ್ಯಾಜ್ಯವನ್ನು ಕಡಿಮೆ ಖರ್ಚಿನಲ್ಲಿ, ಶೀಘ್ರ ಹಾಗೂ ಅಂತಿಮವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಕೋರ್ಟ್ ಶುಲ್ಕ ಕೊಡಬೇಕಾಗಿಲ್ಲ. ಪಕ್ಷಗಾರರು ನೇರವಾಗಿ ಅಥವಾ ವಕೀಲರ ಮುಖಾಂತರ ಭಾಗವಹಿಸಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು ಎಂದು ಹೇಳಿದರು.

ಪ್ರಕರಣ ರಾಜಿಯಾದಲ್ಲಿ ಶೇ 100 ರಷ್ಟು ನ್ಯಾಯಾಲಯದ ಶುಲ್ಕ ಹಿಂದಿರುಗಿಸಲಾಗವುದು. ಮೆಘಾ ಲೋಕ್ ಅದಾಲತ್‍ನಲ್ಲಿ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.

ವಾರಾಂತ್ಯ ಕರ್ಫ್ಯೂ ಜಾರಿ ಇದ್ದರೂ ಲೋಕ್‌ ಅದಾಲತ್‍ನಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. 14ರಂದು ಕಕ್ಷಿದಾರರು ಮೆಘಾ ಲೋಕ್ ಅದಾಲತ್‍ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದೆ ಇದ್ದರೆ ಆಗಸ್ಟ್ 16ರಂದು ಮಧ್ಯಾಹ್ನ 3 ಗಂಟೆ ನಂತರ ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ 8876 ಪ್ರಕರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 3,067 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ಗೆ ಕಕ್ಷಿದಾರರಿಂದ ಹೆಚ್ಚಿನ ಸ್ಪಂದನೆ ದೊರೆಯುವ ವಿಶ್ವಾಸ ಇದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮ ಟಿ.ಪಿ, ಅಶೋಕ ಮಾನೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.