ADVERTISEMENT

ಅಭಿವೃದ್ಧಿ ಸಹಿಸದೆ ಅಪಪ್ರಚಾರ

ಮಠಾಧೀಶರ ಸಮ್ಮುಖ ಸಚಿವ ಚವಾಣ್ ನೋವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 5:06 IST
Last Updated 7 ಜುಲೈ 2022, 5:06 IST
ಔರಾದ್ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ ರಕ್ತದಾನ ಶಿಬಿರ, ಆರೋಗ್ಯ, ನೇತ್ರ ತಪಾಸಣೆ ಶಿಬಿರವನ್ನು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಉದ್ಘಾಟಿಸಿದರು. ಭಾಲ್ಕಿ, ಹುಲಸೂರು, ತಮಲೂರು ಸೇರಿದಂತೆ ವಿವಿಧ ಮಠಾಧೀಶರು ಇದ್ದರು
ಔರಾದ್ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ ರಕ್ತದಾನ ಶಿಬಿರ, ಆರೋಗ್ಯ, ನೇತ್ರ ತಪಾಸಣೆ ಶಿಬಿರವನ್ನು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಉದ್ಘಾಟಿಸಿದರು. ಭಾಲ್ಕಿ, ಹುಲಸೂರು, ತಮಲೂರು ಸೇರಿದಂತೆ ವಿವಿಧ ಮಠಾಧೀಶರು ಇದ್ದರು   

ಔರಾದ್: ‘ಕೆಲವರು ನನ್ನ ಕ್ಷೇತ್ರದ ಅಭಿವೃದ್ಧಿ ಸಹಿಸದೆ ಅಪಪ್ರಚಾರ- ವಿರೋಧ ಮಾಡುತ್ತಿದ್ದಾರೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೇಳಿದರು.

ತಮ್ಮ ಜನ್ಮದಿನದ ಅಂಗವಾಗಿ ಬುಧವಾರ ಇಲ್ಲಿ ಆಯೋಜಿಸಿದ ರಕ್ತದಾನ ಶಿಬಿರ ಹಾಗೂ ಆರೋಗ್ಯ, ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ತಮಗೆ ಆಗುತ್ತಿರುವ ನೋವು ತೊಂಡಿಕೊಂಡರು.

‘ನಾನು ಕಳೆದ 14 ವರ್ಷಗಳಿಂದ ಜನರ ಮಧ್ಯೆ ಉಳಿದು ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಹಿಂದೆ ಐದು ದಶಕದಿಂದ ಆಗದ ಅಭಿವೃದ್ಧಿ ಕೆಲಸಗಳು ಈಗ ಆಗಿವೆ. ನೊಂದವರು, ಅನಾಥರು, ಬಡವರಿಗೆ ನೆರವು ನೀಡಿದ್ದೇನೆ. ಇದನ್ನೆಲ್ಲ ಮಾಡಿದ್ದು ತಪ್ಪೇ? ನನ್ನ ಮೇಲೆ ಸುಳ್ಳು ಕೇಸು ಹಾಕಲಾಗಿದೆ. ನನ್ನಿಂದ ಉಪಯೋಗ ಪಡೆದ ಕೆಲವರು ಈಗ ನನ್ನ ಬಗ್ಗೆಯೇ ಅಪ ಪ್ರಚಾರ-ವಿರೋಧ ಮಾಡುತ್ತಿದ್ದಾರೆಎಂದರು.

ADVERTISEMENT

‘ಎಲ್ಲದಕ್ಕೂ ಸಮಯ ಬಂದಾಗ ಉತ್ತರ ಕೊಡುತ್ತೇನೆ. ಈ ಕ್ಷೇತ್ರದ ಜನರ ಬೆಂಬಲ ಇರುವ ತನಕ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ನಾನು ಅದಕ್ಕೆ ಜಗ್ಗುವುದಿಲ್ಲ’ ಎಂದು ತಮ್ಮನ್ನು ವಿರೋಧಿಸುವವರಿಗೆ ಕಟು ಸಂದೇಶ ರವಾನಿಸಿದರು.

ಸಾನಿಧ್ಯ ವಹಿಸಿದ ಬಸವ ಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ‘ಪ್ರಭು ಚವಾಣ್ ನಿಷ್ಕಳಂಕ ವ್ಯಕ್ತಿ. ಅವರು ಪ್ರತಿ ವರ್ಷ ತಮ್ಮ ಜನ್ಮದಿನದಂದು ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಗೌರವಿಸುವ ಪರಿಪಾಠ ಹಾಕಿಕೊಂಡಿದ್ದು ಮಾದರಿ. ಒಳ್ಳ ವ್ಯಕ್ತಿ ಹಿಂದೆ ಜನರ ಆಶೀರ್ವಾದ ಇದ್ದೇ ಇರುತ್ತದೆ’ ಎಂದು ಹೇಳಿದರು.

ಹುಲಸೂರು ಶಿವಾನಂದ ಸ್ವಾಮೀಜಿ ಮಾತನಾಡಿ, ‘ಪ್ರಭು ಚವಾಣ್ ಅವರು ಪಶು ಸಂಗೋಪನೆ ಸಚಿವರಾಗಿ ಬಹಳ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ಅವರಿಗೆ ಕೊಟ್ಟರೆ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾತಂಬ್ರಾ ಶಿವಯೋಗೇಶ್ವರ ಸ್ವಾಮೀಜಿ ಮಾತನಾಡಿದರು. ಪೌರಾದೇವಿ ಬಾಬುಸಿಂಗ್ ಮಹಾರಾಜ, ಶಂಭುಲಿಂಗ ಶಿವಾಚಾರ್ಯರು, ಶಂಕರಲಿಂಗ ಶಿವಾಚಾರ್ಯರು, ಸಿದ್ರಾಮೇಶ್ವರ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯರು, ಸಂಗಮ ಆಶ್ರಮದ ಮಹಾದೇವಮ್ಮ ತಾಯಿ, ಮಾತೆ ಸತ್ಯಕ್ಕ, ಸಾಯಗಾಂವ್ ಮಠದ ಪ್ರಭುದೇವರು, ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು ಸಮಾರಂಭದಲ್ಲಿ ಪಾಲ್ಗೊಂಡರು.

ಗುರುನಾಥ ರಾಜಗಿರಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಪವಾರ್, ಉಪಾಧ್ಯಕ್ಷ ಸಂತೋಷ ಪೋಕಲವಾರ, ಮುಖಂಡ ವಸಂತ ವಕೀಲ್, ಜಗದೀಶ ಖೂಬಾ, ರಾಮಶೆಟ್ಟಿ ಪನ್ನಾಳೆ, ಡಾ. ಕಲ್ಲಪ್ಪ ಉಪ್ಪೆ, ಶ್ರೀಮಂತ ಪಾಟೀಲ ಹೆಡಗಾಪುರ, ಶರಣಪ್ಪ ಪಂಚಾಕ್ಷಿರೆ, ರಮೇಶ ಪಾಟೀಲ ಪಾಶಾಪುರ, ಧೊಂಡಿಬಾ ನರೋಟೆ, ರಾಮ ನರೋಟೆ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಈಶ್ವರಸಿಂಗ್ ಠಾಕೂರ್, ಕಿರಣ ಪಾಟೀಲ ಇದ್ದರು.

ಸಚಿವ ಚವಾಣ್ ಸೇರಿ 127 ಯುವಕರಿಂದ ರಕ್ತದಾನ

ಔರಾದ್ : ಪಶು‌ ಸಂಗೋಪನೆ ಸಚಿವ ಪ್ರಭು ಚವಾಣ್ ಅವರ ಜನ್ಮದಿನದ ಅಂಗವಾಗಿ ಬುಧವಾರ ಇಲ್ಲಿ ನಡೆದ ಶಿಬಿರದಲ್ಲಿ 127 ಜನರು ರಕ್ತದಾನ ಮಾಡಿದರು.

ಸ್ವತಃ ಸಚಿವ ಪ್ರಭು ಚವಾಣ್ ಅವರ ಅಳಿಯ ಸಮಿತ ರಾಠೋಡ್,‌ ಮಗ ಸಚಿನ್ ರಾಠೋಡ್, ಮುಖಂಡ ಶೇಷಾರಾವ ಕೋಳಿ, ಸಂದೀಪ ಬಿರಾದಾರ,‌ ವೀರಶೆಟ್ಟಿ ಅವರು ರಕ್ತದಾನ ಮಾಡಿದವರು.

ಆರೋಗ್ಯ ಶಿಬಿರದಲ್ಲಿ 73 ಜನರ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಾಯಿತು. 54 ಜ‌ನರ ನೇತ್ರ ತಪಾಸಣೆ ಹಾಗೂ 47 ಜ‌ನರಿಗೆ ಆಯುಷ್ಮಾನ್ ಭಾರತ ಕಾರ್ಡ್ ವಿತರಿಸಲಾಯಿತು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.