ಹುಮನಾಬಾದ್: ಪಟ್ಟಣದ ಸಾರ್ವಜನಿ ಆಸ್ಪತ್ರೆಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ದಿಢೀರ್ ಭೇಟಿ ನೀಡಿ, ರೋಗಿಗಳ ಜತೆ ಮಾತನಾಡಿದರು. ಅಲ್ಲಿನ ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
‘ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳಿಲ್ಲ, ಒಂದೇ ಕೊಠಡಿಯಲ್ಲಿ ಆರು ವೈದ್ಯರು ಕುಳಿತುಕೊಂಡು ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತೀರಿ?, ಇದು ಏನು ದನದ ಕೊಟ್ಟಿಗೆಯಾ’ ಎಂದು ವೈದ್ಯಾಧಿಕಾರಿಗಳ ವಿರುದ್ಧ ಕಿಡಿಕಾರಿದರು.
‘ಸರ್ಕಾರಿ ಆಸ್ಪತ್ರೆಗೆ ಬಡವರು ಹೆಚ್ಚಾಗಿ ಬರುತ್ತಾರೆ. ಅಲ್ಪಸ್ವಲ್ಪ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಿರಿ ಎಂಬ ಆರೋಪ ಇದೆ. ಸಮಯಕ್ಕೆ ವೈದ್ಯರು ರೋಗಿಗಳಿಗೆ ಸಿಗುವುದಿಲ್ಲ. ರೋಗಿಗಳು ಸಂಬಂಧಪಟ್ಟ ವೈದ್ಯರನ್ನು ಭೇಟಿ ಮಾಡಿದರೂ ಚಿಕಿತ್ಸೆ ನೀಡದೆ ತಮ್ಮ ಖಾಸಗಿ ಆಸ್ಪತ್ರೆಯ ಮಾಹಿತಿ ನೀಡಿ ಹೋಗುತ್ತಾರೆ. ರೋಗಿಗಳು ನೇರವಾಗಿ ವೈದ್ಯರು ಹೇಳಿದ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ಹಣ ನೀಡಿ ಚಿಕಿತ್ಸೆ ಪಡೆಯುವಂತಹ ಪರಿಸ್ಥಿತಿ ಇಲ್ಲಿಯ ರೋಗಿಗಳಿಗೆ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರದ ನಿರ್ದೇಶನದಂತೆ ಕಾಯಂ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ನಿಗದಿಪಡಿಸಿದ ಸಮಯದಲ್ಲಿ ಇರಬೇಕು. ಇಲ್ಲದಿದ್ದರೆ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಸಿದ್ದೇಶ್ವರ ಅವರಿಗೆ ಶಾಸಕರು ಸೂಚನೆ ನೀಡಿದರು.
ರಾತ್ರಿ ಸೇವೆ ಇಲ್ಲ: ‘ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳನ್ನು ಒಳಗೊಂಡಿರುವ ಹುಮನಾಬಾದ್ ತಾಲ್ಲೂಕಿನಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ರಾತ್ರಿ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರದಿರುವುದರಿಂದ ತುರ್ತು ಚಿಕಿತ್ಸೆ ಸಿಗುವುದು ವಿಳಂಬವಾಗುತ್ತಿದೆ. ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ರಾತ್ರಿ ಸಂದರ್ಭದಲ್ಲಿ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
‘ಆಸ್ಪತ್ರೆಯ ವಿವಿಧೆಡೆ ಅಸ್ವಚ್ಛತೆ ಹೆಚ್ಚಾಗಿದೆ. ಆಸ್ಪತ್ರೆಯ ನೆಲವನ್ನು ಸಮರ್ಪಕವಾಗಿ ತೊಳೆಯುತ್ತಿಲ್ಲ. ಅಕ್ಕ–ಪಕ್ಕದ ಪರಿಸರವನ್ನೂ ಶುಚಿಗೊಳಿಸುತ್ತಿಲ್ಲ. ಸರಿಯಾಗಿ ಸ್ವಚ್ಚತೆ ಮಾಡಿಕೊಳ್ಳಬೇಕು. ಬಡವರು ಮದ್ಯಮ ವರ್ಗದವರು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇವರ ಜತೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸುತ್ತಿಸಬೇಕು’ ಎಂದು ಹೇಳಿದರು.
‘ವೈದ್ಯರು ರಾಜಕೀಯ ಮಾಡುವುದು ಬಿಡಿ’
‘ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೆಲ ವೈದ್ಯರು ತಮ್ಮ ಸರ್ಕಾರಿ ಜವಾಬ್ದಾರಿ ಬಿಟ್ಟು ರಾಜಕೀಯ ಮಾಡುತ್ತಿರುವುದು ಎಷ್ಟು ಸರಿ’ ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ವೈದ್ಯರನ್ನು ಪ್ರಶ್ನಿಸಿದರು.
‘ನೀವು ರಾಜಕೀಯ ಮಾಡುವುದಾದರೆ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು. ನಿಮ್ಮೆಲ್ಲರ ವೈಯಕ್ತಿಕ ವಿಷಯಗಳನ್ನು ದೂರವಿಟ್ಟು ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡಬೇಕು ಇಲ್ಲದಿದ್ದರೆ ಸರ್ಕಾರಕ್ಕೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.