ಬೀದರ್: ನಗರದ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದ ಯುದ್ಧ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಅಣಕು ಪ್ರದರ್ಶನ ಜನರ ಗಮನ ಸೆಳೆಯಿತು.
ಯುದ್ಧ ನಡೆದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸುವುದು, ಬಾಂಬ್ ಸ್ಫೋಟ, ಬೆಂಕಿ ಅನಾಹುತ ಸಂಭವಿಸಿದಾಗ ಅದನ್ನು ಹೇಗೆ ನಿಯಂತ್ರಿಸುವುದು, ಸಾರ್ವಜನಿಕರಲ್ಲಿ ಧೈರ್ಯ ಮೂಡಿಸುವುದು ಹೇಗೆ ಸೇರಿದಂತೆ ಇತರೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ಸಾರಿದರು.
ಅಗ್ನಿಶಾಮಕ ದಳ, ರೈಲ್ವೆ ಪೊಲೀಸರು, ಸಿವಿಲ್ ಪೊಲೀಸರು ಜಂಟಿಯಾಗಿ ಮಾಕ್ ಡ್ರಿಲ್ ನಡೆಸಿಕೊಟ್ಟರು. ಕೃತಕವಾಗಿ ತುರ್ತು ಪರಿಸ್ಥಿತಿಯ ಸನ್ನಿವೇಶ ಸೃಷ್ಟಿಸಿ, ತಮ್ಮ ಕಾರ್ಯವೈಖರಿ, ದಕ್ಷತೆ ಪ್ರದರ್ಶಿಸಿದರು. ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೈನಿಕರು ಭಯೋತ್ಪಾದಕರ ಅಡಗುದಾಣಗಳ ಮೇಲೆ ದಾಳಿ ನಡೆಸಿದ್ದರು. ಭವಿಷ್ಯದಲ್ಲಿ ಇಂತಹ ಇನ್ನಷ್ಟು ದಾಳಿ ಮತ್ತು ಪ್ರತಿ ದಾಳಿಯ ಸಾಧ್ಯತೆಯ ಹಿನ್ನೆಲೆಯಲ್ಲಿ ಮಾಕ್ ಡ್ರಿಲ್ ನಡೆಸಬೇಕೆಂದು ಗೃಹ ಸಚಿವಾಲಯ ನಿರ್ದೇಶನ ನೀಡಿತ್ತು. ಅದರ ಪ್ರಕಾರ, ಜಿಲ್ಲಾಡಳಿತವು ಇದಕ್ಕೆ ವ್ಯವಸ್ಥೆ ಮಾಡಿತ್ತು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಡಿವೈಎಸ್ಪಿ ಶಿವನಗೌಡ ಪಾಟೀಲ, ಬೀದರ್ ಉಪವಿಭಾಗಾಧಿಕಾರಿ ಎಂ.ಡಿ. ಶಕೀಲ್, ಕೆಎಸ್ಆರ್‌ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಪುಲೇಕರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ, ಜಿಲ್ಲಾ ಸರ್ಜನ್ ಅಹಮ್ಮದ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಎಮ್.ಡಿ ಮುಜಾಮಿಲ್ ಪಟೇಲ್, ಜಿಲ್ಲಾ ಗೃಹರಕ್ಷಕ ದಳದ ಅಧಿಕಾರಿ ಮನೋಜಕುಮಾರ ಪಾಟೀಲ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.