ADVERTISEMENT

ಶಬ್ದ ಮಾಲಿನ್ಯ ತಡೆಯದಿದ್ದರೆ ಅ.7ರಿಂದ ಆಂದೋಲನ: ಪ್ರಮೋದ ಮುತಾಲಿಕ್ ಎಚ್ಚರಿಕೆ

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 15:37 IST
Last Updated 1 ಅಕ್ಟೋಬರ್ 2021, 15:37 IST
ಪ್ರಮೋದ ಮುತಾಲಿಕ್
ಪ್ರಮೋದ ಮುತಾಲಿಕ್   

ಬೀದರ್: ‘ಮಸೀದಿಗಳ ಧ್ವನಿವರ್ಧಕಗಳಿಂದ ನಿತ್ಯ ಆಗುತ್ತಿರುವ ಶಬ್ದ ಮಾಲಿನ್ಯ ತಡೆಯದಿದ್ದರೆ ಅ.7ರಿಂದ ರಾಜ್ಯದಾದ್ಯಂತ ಆಂದೋಲನ ನಡೆಸಲಾಗುವುದು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು.

ದೇಶದಲ್ಲಿ ಶಬ್ದ ಮಾಲಿನ್ಯ ನಿಲ್ಲಿಸಬೇಕು ಎಂದು ಅನೇಕರು ಸುಪ್ರೀಂ ಕೋರ್ಟ್‌ಗೆ ಪಿಎಲ್‌ಐ ಸಲ್ಲಿಸಿದ್ದಾರೆ. ಶಬ್ದ ಮಾಲಿನ್ಯ ತಡೆಗೆ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಪೊಲೀಸರಿಂದ ಕೆಲಸ ಆಗದಿದ್ದರೆ ಠಾಣೆಗಳನ್ನು ಮುಚ್ಚಿಬಿಡಬೇಕು. ಪೊಲೀಸರಿಂದ ಆಗದ ಕೆಲಸವನ್ನು ಶ್ರೀರಾಮ ಸೇನೆಯ ಕಾರ್ಯಕರ್ತರು ಮಾಡಲಿದ್ದಾರೆ. ಸಂವಿಧಾನ ಬದ್ಧವಾಗಿ ಸುಪ್ರೀಂ ಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಅ. 7 ರಂದು ಮೊದಲ ಹಂತವಾಗಿ ಶ್ರೀರಾಮ ಸೇನೆ ಕಾರ್ಯಕರ್ತರು ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್‌ಗೆ ಮನವಿ ಕೊಡಲಿದ್ದಾರೆ. ಆದರೂ ‍ಪೊಲೀಸರು ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಿದ್ದಾರೆ’ ಎಂದರು.

‘ಮಸೀದಿಗಳಲ್ಲಿ ಬೆಳಿಗ್ಗೆ 5ಕ್ಕೆ ಆಝಾನ್‌ ಪ್ರಾರ್ಥನೆ ಶುರುವಾಗುತ್ತದೆ. ಮೈಕ್‌ ಅಳವಡಿಸಿ ಪ್ರಾರ್ಥನೆ ಸಲ್ಲಿಸುವುದರಿಂದ ವಿದ್ಯಾರ್ಥಿಗಳು, ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಕಿರಿಕಿರಿಯಾಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಮೈಕ್‌ ಬಳಸಬೇಕೆಂದರೆ ಪೊಲೀಸರ ಅನುಮತಿ ಅಗತ್ಯ. ಆದರೆ, ಮಸೀದಿಗಳಿಗೆ ಈ ನಿಯಮ ಏಕೆ ಅನ್ವಯವಾಗುತ್ತಿಲ್ಲ’ ಎಂದು ಕಿಡಿಕಾರಿದರು.

‘ದತ್ತ ಪೀಠಕ್ಕೆ ಸಂಬಂಧಿಸಿದ ವಿವಾದವನ್ನು ರಾಜ್ಯ ಸರ್ಕಾರವೇ ಬಗೆಹರಿಸಿಕೊಳ್ಳಬೇಕು ಎಂದು 2018ರಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಮಿತಿ ರಚಿಸಿ ದತ್ತ ಪೀಠವು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಮೌಲ್ವಿಗೆ ಪೂಜೆ ಮಾಡಲು ಅನುಮತಿ ಕೊಟ್ಟಿತು. ರಾಜ್ಯದ ಹೈಕೋರ್ಟ್‌ ಮೌಲ್ವಿ ನೇಮಕ ರದ್ದು ಮಾಡಿರುವುದು ಸ್ವಾಗತಾರ್ಹವಾಗಿದೆ’ ಎಂದರು.

‘ಬಿಜೆಪಿ ಸರ್ಕಾರ ವಿಳಂಬ ಮಾಡದೇ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು. ಹಿಂದೂ ಸಂಪ್ರದಾಯದ ವಿಧಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.