ADVERTISEMENT

ಬೀದರ್‌ | ರೈತರಿಗೆ ವರವಾದ ನಾಲಾ ಸೇತುವೆ: ಮಳೆ ನೀರಿನಿಂದ ಬೆಳೆಗಳಿಗೆ ರಕ್ಷಣೆ

ರೈತರು ಬೆಳೆದ ಉತ್ಪನ್ನಗಳ ಸಾಗಣೆಗೆ ಅನುಕೂಲ; ಮಳೆ ನೀರಿನಿಂದ ಬೆಳೆಗಳಿಗೆ ರಕ್ಷಣೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಜೂನ್ 2025, 5:16 IST
Last Updated 28 ಜೂನ್ 2025, 5:16 IST
<div class="paragraphs"><p>ಬೀದರ್‌ ತಾಲ್ಲೂಕಿನ ಚಿಂತಲಗೀರಾ ಗ್ರಾಮದಲ್ಲಿ ನಿರ್ಮಿಸಿರುವ ನಾಲಾ ಸೇತುವೆ</p></div>

ಬೀದರ್‌ ತಾಲ್ಲೂಕಿನ ಚಿಂತಲಗೀರಾ ಗ್ರಾಮದಲ್ಲಿ ನಿರ್ಮಿಸಿರುವ ನಾಲಾ ಸೇತುವೆ

   

ಬೀದರ್‌: ತಾಲ್ಲೂಕಿನ ಹೊಕ್ರಾಣ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ನಾಲಾ ಸೇತುವೆಗಳನ್ನು ನಿರ್ಮಿಸಲಾಗಿದ್ದು, ಇವುಗಳು ರೈತರಿಗೆ ವರವಾಗಿ ಪರಿಣಮಿಸಿವೆ.

ಪಂಚಾಯಿತಿ ವ್ಯಾಪ್ತಿಯ ಚಿಂತಲಗೀರಾ ಗ್ರಾಮದಲ್ಲಿ ಅತಿ ಹೆಚ್ಚು 8 ನಾಲಾ ಸೇತುವೆಗಳನ್ನು ನಿರ್ಮಿಸಿದರೆ, ಹೊಕ್ರಾಣದಲ್ಲಿ 2 ಹಾಗೂ ಧರ್ಮಾಪೂರದಲ್ಲಿ 1 ಸೇತುವೆ ನಿರ್ಮಿಸಲಾಗಿದೆ.

ADVERTISEMENT

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪ್ರತಿಯೊಂದು ನಾಲಾ ಸೇತುವೆ ನಿರ್ಮಾಣಕ್ಕೆ ₹1.50ರಿಂದ ₹2 ಲಕ್ಷ ವೆಚ್ಚ ಮಾಡಲಾಗಿದೆ.

ಏನು ಪ್ರಯೋಜನ?:

ಮಳೆ ಬಂದಾಗ ಎಲ್ಲೆಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತದೆಯೋ ಅಂತಹ ಸ್ಥಳಗಳನ್ನು ಗುರುತಿಸಿ, ಅಲ್ಲಿ ಈ ನಾಲಾ ಸೇತುವೆಗಳನ್ನು ನಿರ್ಮಿಸಲಾಗಿದೆ. ಎಷ್ಟೇ ಮಳೆ ಸುರಿದರೂ ನೀರು ಸುಗಮವಾಗಿ ಹರಿದು ಹೋಗುತ್ತದೆ. ಹೊಲಗಳಿಗೆ ಹೋಗುವ ಮಾರ್ಗದ ಬದಿಯಲ್ಲಿ ಕಾಲುವೆ ಮಾದರಿಯಲ್ಲಿ ದೊಡ್ಡದಾಗಿ ಟ್ರೆಂಚ್‌ ನಿರ್ಮಿಸಲಾಗಿದ್ದು, ನೀರು ಅದರ ಮೂಲಕವೇ ಹರಿದು ಹೋಗುವಂತೆ ಮಾಡಲಾಗಿದೆ.

ಈ ಹಿಂದೆ ಮಳೆ ಬಿದ್ದಾಗ ನೀರು ಹೊಲಗಳಿಗೆ ನುಗ್ಗಿ ಬೆಳೆಗಳೆಲ್ಲ ಹಾಳಾಗುತ್ತಿತ್ತು. ಈಗ ಅದು ತಪ್ಪಿದೆ. ನಾಲಾ ಅಡಿಯಿಂದ ನೀರು ಹರಿದು, ನೇರವಾಗಿ ಟ್ರೆಂಚ್‌ ಸೇರಿಕೊಳ್ಳುತ್ತದೆ. ಅಲ್ಲಿಂದ ಹಳ್ಳ, ನದಿಗೆ ಹೋಗಿ ಸೇರಿಕೊಳ್ಳುತ್ತದೆ. ಟ್ರೆಂಚ್‌ ಉದ್ದಕ್ಕೂ ರೈತರು ನಡೆದಾಡಲು, ಅವರ ವಾಹನಗಳು ಚಲಿಸಲು ಕಚ್ಚಾ ರಸ್ತೆ ಕೂಡ ನಿರ್ಮಿಸಲಾಗಿದೆ. ಇನ್ನು, ನಾಲಾ ಸೇತುವೆಗಳ ಮೇಲೆ ಎತ್ತಿನ ಗಾಡಿ, ಸರಕು ಸಾಗಣೆಯ ಎಲ್ಲ ರೀತಿಯ ವಾಹನಗಳು ಸಂಚರಿಸಬಹುದಾಗಿದ್ದು, ಒಂದು ಸಾವಿರ ಎಕರೆಯಲ್ಲಿ ರೈತರು ಬೆಳೆದ  ಎಲ್ಲ ರೀತಿಯ ಉತ್ಪನ್ನಗಳ ಸಾಗಾಣಿಕೆಗೆ ಇದರಿಂದ ಅನುಕೂಲವಾಗಿದೆ.

‘ಈ ಹಿಂದೆ ಮಳೆ ಬಂದಾಗ ಸಾಕಷ್ಟು ಕೆಸರಾಗುತ್ತಿತ್ತು. ಮಳೆ ನೀರು ಬೇಕಾಬಿಟ್ಟಿ ಹರಿದು ಹೊಲಗಳಿಗೆ ನುಗ್ಗಿ ಹಾನಿ ಉಂಟಾಗುತ್ತಿತ್ತು. ನಡೆದಾಡಲು ಕಷ್ಟವಾಗುತ್ತಿತ್ತು. ನಾಲಾ ಸೇತುವೆಗಳ ನಿರ್ಮಾಣದಿಂದ ಅದು ದೂರಾಗಿದೆ’ ಎಂದು ಸ್ಥಳೀಯ ರೈತರಾದ ಬಸವರಾಜ, ಮಹಾದೇವ ತಿಳಿಸಿದ್ದಾರೆ.

ನಾಲಾ ಸೇತುವೆಗಳು ಅದರ ನೀರು ಹರಿಯಲು ಟ್ರೆಂಚ್‌ ನಿರ್ಮಿಸಲಾಗಿದೆ. ರೈತರಿಗೆ ನಡೆದಾಡಲು ಕಚ್ಚಾ ರಸ್ತೆ ಮಾಡಿರುವುದರಿಂದ ಬಹಳ ಅನುಕೂಲವಾಗಿದೆ. 1 ಸಾವಿರ ಎಕರೆ ಕಬ್ಬು ಸಾಗಿಸಲು ನೆರವಾಗಿದೆ.
ಗಿರೀಶ ಗುಂಡೇರಾವ್‌ ಅಧ್ಯಕ್ಷ ಹೊಕ್ರಾಣ (ಬಿ) ಗ್ರಾ.ಪಂ.
ನಾಲಾ ಸೇತುವೆ ನಿರ್ಮಾಣದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರೈತರಿಗೆ ಬಹಳ ಸಹಾಯವಾಗಿದೆ. ನಿಜಕ್ಕೂ ಇದು ಬಹಳ ಉತ್ತಮವಾದ ಯೋಜನೆ. ರೈತರು ಖುಷಿಯಲ್ಲಿದ್ದಾರೆ.
ಮೀನಾಕ್ಷಿ ಪಾಟೀಲ ಪಿಡಿಒ ಹೊಕ್ರಾಣ (ಬಿ) ಗ್ರಾ.ಪಂ
ಹೊಕ್ರಾಣ (ಬಿ) ಗ್ರಾಮ ಪಂಚಾಯಿತಿಯಲ್ಲಿ ನಾಲಾ ಸೇತುವೆಯ ಉತ್ತಮ ಕೆಲಸವಾಗಿದೆ. ನಿಜಕ್ಕೂ ಇದು ದೊಡ್ಡ ಸಾಧನೆ. ಈ ಸಾಲಿನಲ್ಲಿ ತಾಲ್ಲೂಕು ವ್ಯಾಪ್ತಿಯ ಎಲ್ಲ ಪಂಚಾಯಿತಿಗಳಲ್ಲಿ ಇದನ್ನು ಜಾರಿಗೆ ತರಲಾಗುವುದು.
ಮಾಣಿಕರಾವ್‌ ಪಾಟೀಲ ಇಒ ಬೀದರ್‌ ತಾಲ್ಲೂಕು ಪಂಚಾಯಿತಿ
ತೆರಿಗೆ ಸಂಗ್ರಹದಲ್ಲೂ ಸಾಧನೆ
ಹೊಕ್ರಾಣ (ಬಿ) ಗ್ರಾಮ ಪಂಚಾಯಿತಿ ಕಳೆದ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ತೋರಿ ಮೆಚ್ಚುಗೆ ಗಳಿಸಿತ್ತು. ಈ ಸಾಲಿನಲ್ಲಿ ಮೂರು ತಿಂಗಳಲ್ಲಿ ಶೇ 20ರ ಗುರಿ ಮೀರಿದೆ. ಆರ್ಥಿಕ ವರ್ಷ ಮುಗಿಯುವುದರೊಳಗೆ ನಿಶ್ಚಿತ ಗುರಿ ಸಾಧಿಸಲಾಗುವುದು ಎಂದು ಪಿಡಿಒ ಮೀನಾಕ್ಷಿ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಈ ಪಂಚಾಯಿತಿ ಈ ಹಿಂದೆ ಬರೂರ ವ್ಯಾಪ್ತಿಯಲ್ಲಿತ್ತು. ಹತ್ತು ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿದೆ. ನರೇಗಾದಡಿ ಸಾಕಷ್ಟು ಕೆಲಸಗಳಾಗಿವೆ. ಪಂಚಾಯಿತಿ ಹೊಸ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಗೋದಾಮು ಎಸ್‌ಎಚ್‌ಜಿ ಕಟ್ಟಡ ಎರಡು ಅಂಗನವಾಡಿ ಕಟ್ಟಡಗಳು ಕುರಿ ಮತ್ತು ಮೇಕೆ ಶೆಡ್‌ ನಿರ್ಮಾಣ ಪೂರ್ಣಗೊಂಡಿದ್ದು ಎಲ್ಲರ ಸಹಕಾರದೊಂದಿಗೆ ಮಾದರಿ ಪಂಚಾಯಿತಿ ನಿರ್ಮಿಸುವ ಗುರಿ ಇದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.