ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಬೀದರ್‌ ಟಾಪ್‌

ಉದ್ಯೋಗ ಖಾತ್ರಿ: ಬೀದರ್‌ ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆ, 65 ಲಕ್ಷ ಮಾನವ ದಿನ ಸೃಜನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಏಪ್ರಿಲ್ 2025, 15:27 IST
Last Updated 23 ಏಪ್ರಿಲ್ 2025, 15:27 IST
ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪೂರದಲ್ಲಿ ಉದ್ಯೋಗ ಖಾತ್ರಿ ಅಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು
ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪೂರದಲ್ಲಿ ಉದ್ಯೋಗ ಖಾತ್ರಿ ಅಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು   

ಬೀದರ್‌: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ (ಎಂಜಿಎನ್‌ಆರ್‌ಇಜಿಎ) ಬೀದರ್‌ ಜಿಲ್ಲೆಯು ಮಾನವ ದಿನಗಳ ಸೃಜನೆಯಲ್ಲಿ ಉತ್ತಮ ಸಾಧನೆ ತೋರಿ ಕಲ್ಯಾಣ ಕರ್ನಾಟಕದಲ್ಲಿಯೇ ಮೊದಲ ಸ್ಥಾನ ಗಳಿಸಿದೆ.

ಇಡೀ ರಾಜ್ಯದಲ್ಲಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳು ಕ್ರಮವಾಗಿ ಮೊದಲ, ದ್ವಿತೀಯ ಸ್ಥಾನ ಗಳಿಸಿವೆ. 2024–25ನೇ ಸಾಲಿನಲ್ಲಿ ಬೀದರ್‌ ಜಿಲ್ಲೆಯಲ್ಲಿ 50 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಗುರಿ ಮೀರಿದ ಸಾಧನೆಯಾಗಿದೆ. ಜಿಲ್ಲೆಯಲ್ಲಿ 65.28 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ130.58ರಷ್ಟು ಸಾಧನೆ ಮಾಡಲಾಗಿದೆ.

ರಾಜ್ಯದ ಪಟ್ಟಿಯಲ್ಲಿ ರಾಯಚೂರು ಜಿಲ್ಲೆ ಏಳನೇ ಸ್ಥಾನದಲ್ಲಿದ್ದರೆ, ಕೊಪ್ಪಳ ಎಂಟನೇ ಸ್ಥಾನದಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿ ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳು ಮಾತ್ರ ಸ್ಥಾನ ಪಡೆದಿವೆ. ಯಾದಗಿರಿಯಲ್ಲಿ ಅತಿ ಕಡಿಮೆ ಮಾನವ ದಿನಗಳು ಸೃಜನೆಯಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿ ಕಡೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ 24ನೇ ಸ್ಥಾನದಲ್ಲಿದೆ.

ADVERTISEMENT

ಹೆಚ್ಚಿನ ಮಾನವ ದಿನಗಳನ್ನು ಸೃಷ್ಟಿಸಿದ ಪರಿಣಾಮ ಕೆಲಸ ಅರಸಿಕೊಂಡು ನೆರೆಯ ಹೈದರಾಬಾದ್‌, ಪುಣೆ, ಸೋಲಾಪೂರ, ಮುಂಬೈ ಸೇರಿದಂತೆ ಇತರೆ ಮಹಾನಗರಗಳಿಗೆ ವಲಸೆ ಹೋಗುವುದು ಸಾಕಷ್ಟು ತಗ್ಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.

‘2024–25ನೇ ಸಾಲಿನಲ್ಲಿ ಬೀದರ್‌ ಜಿಲ್ಲೆಯಲ್ಲಿ 1.27 ಲಕ್ಷ ಕುಟುಂಬಗಳಿಗೆ ಕೂಲಿ ನೀಡಲಾಗಿದೆ. ಇದರಲ್ಲಿ 31 ಸಾವಿರ ಪರಿಶಿಷ್ಟ ಜಾತಿ, 22 ಸಾವಿರ ಪರಿಶಿಷ್ಟ ಪಂಗಡದವರು ಸೇರಿದ್ದಾರೆ. ಅತಿ ಸಣ್ಣ ರೈತರು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ 74,217 ಕುಟುಂಬಗಳಿವೆ. ಒಟ್ಟು ಕೂಲಿ ಕಾರ್ಮಿಕರಲ್ಲಿ 1.07 ಲಕ್ಷ ಮಹಿಳೆಯರು ಹಾಗೂ 519 ಅಂಗವಿಕಲರು ಸೇರಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.