ADVERTISEMENT

ಮಳೆಗೆ ಕೆರೆಯಂತಾದ ನೆಹರೂ ಕ್ರೀಡಾಂಗಣ

ಸತತ ಎರಡನೇ ದಿನವೂ ಸುರಿದ ಮಳೆ; ಸಿಡಿಲಿಗೆ ಆಕಳು ಸಾವು

​ಪ್ರಜಾವಾಣಿ ವಾರ್ತೆ
Published 15 ಮೇ 2025, 13:59 IST
Last Updated 15 ಮೇ 2025, 13:59 IST
ಬೀದರ್‌ನಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಅಪಾರ ಮಳೆ ನೀರು ಸಂಗ್ರಹಗೊಂಡು ಕೆರೆಯಂತೆ ಭಾಸವಾಯಿತು
ಬೀದರ್‌ನಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಅಪಾರ ಮಳೆ ನೀರು ಸಂಗ್ರಹಗೊಂಡು ಕೆರೆಯಂತೆ ಭಾಸವಾಯಿತು   

ಬೀದರ್‌: ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಎರಡನೇ ದಿನವಾದ ಗುರುವಾರವೂ ಉತ್ತಮ ವರ್ಷಧಾರೆಯಾಗಿದೆ.

ಗುರುವಾರ ನಸುಕಿನ ಜಾವ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಆರಂಭಗೊಂಡ ಜೋರು ಮಳೆ ಬೆಳಿಗ್ಗೆ 8ರ ವರೆಗೆ ಆರ್ಭಟಿಸಿದೆ. ಬಳಿಕ ಮಧ್ಯಾಹ್ನ 12ರ ತನಕ ಜಿಟಿಜಿಟಿಯಾಗಿ ಸುರಿದಿದೆ.

ಬೆಳಗಿನ ಸಂದರ್ಭದಲ್ಲಿ ಮಳೆಯಾದ ಕಾರಣ ದೈನಂದಿನ ಕೆಲಸಕ್ಕೆ ಹೋಗುವವರು ತೀವ್ರ ಪರದಾಟ ನಡೆಸಿದರು. ಮಳಿಗೆ, ಹೋಟೆಲ್‌ಗಳೆಲ್ಲ ತಡವಾಗಿ ಬಾಗಿಲು ತೆರೆದವು. ಎಪಿಎಂಸಿ ಮಾರುಕಟ್ಟೆಗೆ ತರಕಾರಿ, ಹಣ್ಣು ಹೊತ್ತು ತಂದಿದ್ದ ರೈತರು ತೊಂದರೆ ಅನುಭವಿಸಿದರು. ಮಳೆಯಲ್ಲೇ ಸರಕು ಮಾರಾಟ ಮಾಡಿ ಹಿಂತಿರುಗಿದರು. ಎಂದಿನಂತೆ ಹೆಚ್ಚಿನ ಜನ ಮಾರುಕಟ್ಟೆಯತ್ತ ಸುಳಿಯಲಿಲ್ಲ.

ADVERTISEMENT

ಬಿರುಸಿನ ಮಳೆಗೆ ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದು, ಕೆರೆಯಂತೆ ಭಾಸವಾಗುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಸಾಯಿ ಶಾಲೆ ಮೈದಾನ, ಹಳೆ ಬಸ್‌ ನಿಲ್ದಾಣ, ಬ್ರಿಮ್ಸ್‌ ರಸ್ತೆಯಲ್ಲೂ ನೀರು ಸಂಗ್ರಹಗೊಂಡಿದ್ದರಿಂದ ಬೈಕ್‌ ಸವಾರರು, ಪಾದಚಾರಿಗಳು ಸಮಸ್ಯೆ ಎದುರಿಸಿದರು.

ಬೀದರ್‌ ನಗರ ಸೇರಿದಂತೆ ತಾಲ್ಲೂಕಿನ ಚಿಟ್ಟಾ, ಅಮಲಾಪೂರ, ಘೋಡಂಪಳ್ಳಿ, ಕಮಠಾಣ, ಯದಲಾಪೂರ, ಗುನ್ನಳ್ಳಿ, ಗೋರನಳ್ಳಿ, ಚಿಕ್ಕಪೇಟೆ, ಮರಕಲ್‌ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ಸಿಡಿಲಿನಿಂದ ಕಮಲನಗರ ತಾಲ್ಲೂಕಿನ ಗಂಗನಬೀಡು ತಾಂಡಾದಲ್ಲಿ ಆಕಳು ಸಾವನ್ನಪ್ಪಿದೆ. ಔರಾದ್‌ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಮಳೆಯಾಗಿದೆ.

ಬುಧವಾರ ಸಂಜೆ ಕೂಡ ಬೀದರ್‌ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿತ್ತು. ಎರಡು ದಿನ ಸುರಿದ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. ಉಷ್ಣಾಂಶದಲ್ಲಿ ಭಾರಿ ಇಳಿಕೆಯಾಗಿದೆ. ಗುರುವಾರ ದಿನವಿಡೀ ಹೆಚ್ಚಿನ ಸಮಯ ಮೋಡ ಕವಿದ ವಾತಾವರಣ ಇತ್ತು. ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಇನ್ನೂ ಎರಡ್ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಗುರುವಾರ ಸುರಿದ ಮಳೆಗೆ ಬೀದರ್‌ನ ಎಸ್‌ಬಿಐ ಕಚೇರಿ ಎದುರಿನ ಮುಖ್ಯರಸ್ತೆಯಲ್ಲಿ ಅಪಾರ ನೀರು ಸಂಗ್ರಹಗೊಂಡಿತು. ಜನ ಅದರಲ್ಲೇ ನಡೆದುಕೊಂಡು ಹೋದರು
ಮಳೆಗೆ ಬೀದರ್‌ನ ಡಿಎಚ್‌ಒ ಕಚೇರಿ ಪ್ರಾಂಗಣ ಜಲಾವೃತಗೊಂಡಿತು
ಮಳೆಯಲ್ಲೇ ಬೈಕ್‌ ಸವಾರಿ...
ಜಿಟಿಜಿಟಿ ಮಳೆಯಲ್ಲೇ ಕೊಡೆ ಹಿಡಿದುಕೊಂಡು ಮಗನೊಂದಿಗೆ ಹೆಜ್ಜೆ ಹಾಕಿದ ತಂದೆ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.