ADVERTISEMENT

ಔರಾದ್, ಕಮಲನಗರದಲ್ಲಿ ಹೊಸ ಕನ್ನಡ ಭವನ: ಶಾಸಕ ಪ್ರಭು ಚವಾಣ್ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 14:00 IST
Last Updated 8 ಏಪ್ರಿಲ್ 2025, 14:00 IST
ಔರಾದ್ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ಕನ್ನಡ ಕಾರ್ಯಚಟುವಟಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವಾಣ್, ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು, ತಹಶೀಲ್ದಾರ್ ಮಹೇಶ ಪಾಟೀಲ ಇತರರು ಇದ್ದರು
ಔರಾದ್ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ಕನ್ನಡ ಕಾರ್ಯಚಟುವಟಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವಾಣ್, ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು, ತಹಶೀಲ್ದಾರ್ ಮಹೇಶ ಪಾಟೀಲ ಇತರರು ಇದ್ದರು   

ಔರಾದ್: ‘ನಿವೇಶನ ಕಲ್ಪಿಸಿಕೊಟ್ಟರೆ ಆದಷ್ಟು ಬೇಗ ಎರಡು ಗಡಿ ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಜವಾಬ್ದಾರಿ ನನ್ನದು’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಸೋಮವಾರ ಸಂಜೆ ಆಯೋಜಿಸಿದ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.

‘ಈಗಾಗಲೇ ಕಮಲನಗರ ತಾಲ್ಲೂಕಿನಲ್ಲಿ ಕನ್ನಡ ಭವನಕ್ಕೆ ಅನುದಾನ ನೀಡಲು ಘೋಷಣೆ ಮಾಡಿದ್ದೇನೆ. ಇನ್ನು ಔರಾದ್‌ನಲ್ಲಿ ಈಗಾಗಲೇ ಕನ್ನಡ ಭವನ ಇದೆ. ಆದರೆ ಅದು ಚಿಕ್ಕದಾಗಿದೆ. ತಹಶೀಲ್ದಾರರರು ನಿವೇಶನ ಕೊಟ್ಟರೆ ಸಕಲ ಸೌಲಭ್ಯವುಳ್ಳ ದೊಡ್ಡ ಭವನ ಕಟ್ಟಲು ಅನುಕೂಲವಾಗಲಿದೆ’ ಎಂದು ಹೇಳಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು ಈ ಗಡಿ ಭಾಗದಲ್ಲಿ ಎಲ್ಲರೂ ಸೇರಿ ಕನ್ನಡ ಕಟ್ಟುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ‘ಜಿಲ್ಲೆಯಲ್ಲಿ ಕನ್ನಡ ಕೆಲಸಕ್ಕೆ ಶಾಸಕ ಪ್ರಭು ಚವಾಣ್ ಅವರ ಸಹಕಾರ ಬಹಳಷ್ಟಿದೆ’ ಎಂದು ಹೇಳಿದರು.

ಕಸಾಪ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಬಾಲಾಜಿ ಅಮರವಾಡಿ, ನಿಕಟಪೂರ್ವ ಅಧ್ಯಕ್ಷ ಶಾಲಿವಾನ ಉದಗಿರೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿದರು.

ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘುಳೆ, ತಹಶೀಲ್ದಾರ್ ಮಹೇಶ ಪಾಟೀಲ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ್, ವೈಜಿನಾಥ ಬುಟ್ಟೆ, ಪ್ರಶಾಂತ ಮಠಪತಿ ಮತ್ತಿತರರು ಇದ್ದರು. ಮಹಾನಂದಾ ಯಂಡೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಟಂಕಸಾಲೆ ನಿರೂಪಿಸಿದರು.

ನನ್ನ ಕನ್ನಡ ಕೆಲಸ ಕೆಲವರು ಸಹಿಸುತ್ತಿಲ್ಲ: ಚವಾಣ್

‘ನಮ್ಮದು ಗಡಿ ಭಾಗ ಅಂದು ಈ ಭಾಗದಲ್ಲಿ ಕನ್ನಡ ಶಾಲೆಗಳಿರಲಿಲ್ಲ. ಅನಿವಾರ್ಯವಾಗಿ ಮರಾಠಿ ಓದಬೇಕಾಯಿತು. ಆದರೆ ನಾನೊಬ್ಬ ಕನ್ನಡಿಗ ಶಾಸಕ. ಕನ್ನಡ ಅಂದರೆ ನನಗೆ ಅಭಿಮಾನ ಕನ್ನಡ ಕೆಲಸಗಳಿಗೆ ಸದಾ ಪ್ರೋತ್ಸಾಹಿಸುವುದು ಎಲ್ಲರಿಗೂ ಗೊತ್ತಿದೆ. ಆದರೆ ಕೆಲವರು ಇದನ್ನು ಸಹಿಸಿಕೊಳ್ಳದೆ ನನಗೆ ಕಿರುಕುಳ ನೀಡುವುದು ನನ್ನ ವಿರುದ್ಧ ಅಪಪ್ರಚಾರ ಮಾಡುವುದು ನಡೆಯುತ್ತಿದೆ’ ಎಂದು ಶಾಸಕ ಪ್ರಭು ಚವಾಣ್ ಬೇಸರ ವ್ಯಕ್ತಪಡಿದರು. ‘ಇದು ಗಡಿ ಭಾಗ ಇರುವುದರಿಂದ ತಾಲ್ಲೂಕಿನ ಜನ ಶಿಕ್ಷಣ ಉದ್ಯೋಗಕ್ಕಾಗಿ ಪಕ್ಕದ ಮಹಾರಾಷ್ಟ್ರಕ್ಕೆ ಹೋಗುವುದು ಸಹಜ. ಹೀಗೆ ಹೋದವರೆಲ್ಲ ನೀವು ಮಹಾರಾಷ್ಟ್ರದವರು ಎನ್ನಲು ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು ನಾನು ಕನ್ನಡಿಗ ಕನ್ನಡಿಗನಾಗಿ ಇಲ್ಲಿಯೇ ಇರುತ್ತೇನೆ ಯಾವುದಕ್ಕೆ ಬಗ್ಗುವುದಿಲ್ಲ ಜಗ್ಗುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.