ಬೀದರ್: ನಗರದ ಡಿಸಿಸಿ ಬ್ಯಾಂಕಿಗೆ ಸುಳ್ಳು ಮಾಹಿತಿ ಕೊಟ್ಟು, ಸಾರ್ವಜನಿಕರ ಹಣ ವಂಚಿಸಿರುವ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ) ಅಧ್ಯಕ್ಷ ಡಿ.ಕೆ. ಸಿದ್ರಾಮ ಅವರು ಶನಿವಾರ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದಾರೆ.
ಮೇ 9ರಂದು ಅವರು ಬಂಧನಕ್ಕೆ ಒಳಗಾಗಿದ್ದರು. ಒಂಬತ್ತು ದಿನಗಳ ನಂತರ ಜಾಮೀನು ಸಿಕ್ಕಿದೆ. ನಗರದ ಜಿಲ್ಲಾ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ ಎಂದು ಅವರ ಸಹೋದರ ಡಿ.ಕೆ. ಗಣಪತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ರೈತರ ಸಲುವಾಗಿ ಹೋರಾಟ ಮಾಡಿದ್ದೇನೆ. ರೈತರ ಒಳಿತಿಗಾಗಿ ಕೆಲಸ ಮಾಡಿದ್ದೇನೆ. ರೈತರಿಗಾಗಿ ಜೈಲಿಗೆ ಹೋಗಿದ್ದೇನೆ ಎಂಬ ಭಾವನೆ ಇದೆ. ಕೃಷ್ಣನ ಜನ್ಮಸ್ಥಳಕ್ಕೆ ಕಳಿಸಿ ನನಗೆ ರಾಜಕೀಯವಾಗಿ ಪುನರ್‌ಜನ್ಮ ಕೊಟ್ಟಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಇದರ ಬಗ್ಗೆ ನಾನೇನೂ ಮಾತನಾಡಲಾರೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
‘ಡಿಸಿಸಿ ಬ್ಯಾಂಕಿನಿಂದ ಸಾಲ ನವೀಕರಿಸಿಕೊಳ್ಳುವಾಗ ₹56.20 ಕೋಟಿ ಮೌಲ್ಯದ ಸಕ್ಕರೆ ಕೊರತೆ ಇತ್ತು. ಬ್ಯಾಂಕಿನ ಅನುಮತಿ ಪಡೆಯದೇ ಸಕ್ಕರೆ ಮಾರಾಟ ಮಾಡಿದ್ದಾರೆ. ಬ್ಯಾಂಕಿಗೆ ಹಣ ಕಟ್ಟದೇ ಬೇರೆ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರೊಂದಿಗೆ ಶಾಮಿಲಾಗಿ ಬ್ಯಾಂಕಿಗೆ ತಪ್ಪು ಮಾಹಿತಿ ಕೊಟ್ಟು ₹78 ಕೋಟಿ ಸಾಲ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಹಣ ವಂಚನೆಯ ಉದ್ದೇಶದಿಂದ ಹೀಗೆ ಮಾಡಿದ್ದಾರೆ’ ಎಂದು ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಎಸ್. ಅವರು ಜನವಾಡ ಪೊಲೀಸ್ ಠಾಣೆಗೆ ಮೇ 8ರಂದು ದೂರು ಕೊಟ್ಟಿದ್ದರು. ಅದನ್ನು ಆಧರಿಸಿ ಡಿ.ಕೆ. ಸಿದ್ರಾಮ ಸೇರಿದಂತೆ ಏಳು ಜನರ ವಿರುದ್ಧ ಜನವಾಡ ಪೊಲೀಸ್ ಠಾಣೆಯಲ್ಲಿ 420, 409, 468, 474, 120 (ಬ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.