ADVERTISEMENT

ಮತ್ತೆ ಹೆಚ್ಚಿದ ಈರುಳ್ಳಿ ಬೆಲೆ, ಗ್ರಾಹಕರಲ್ಲಿ ಆತಂಕ

ಚಂದ್ರಕಾಂತ ಮಸಾನಿ
Published 25 ಜನವರಿ 2020, 5:56 IST
Last Updated 25 ಜನವರಿ 2020, 5:56 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್: ಗ್ರಾಹಕರು ಇನ್ನೇನು ಈರುಳ್ಳಿ ಬೆಲೆ ನಿಧಾನವಾಗಿ ಇಳಿಯಲಿದೆ ಎನ್ನುವ ಲೆಕ್ಕಾಚಾರದಲ್ಲಿರುವಾಗಲೇ ಮತ್ತೆ ಬೆಲೆಯಲ್ಲಿ  ಪ್ರತಿ ಕ್ವಿಂಟಲ್‌ಗೆ ಒಂದು ಸಾವಿರ ರೂಪಾಯಿ ಹೆಚ್ಚಳವಾಗಿದೆ. ಈರುಳ್ಳಿ ಬೆಲೆ ಮತ್ತೆ ಏರು ಮುಖ ಮಾಡಿರುವುದು ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದೆ.

ತರಕಾರಿ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಎರಡು ವಾರಗಳಲ್ಲಿ ಈರುಳ್ಳಿ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿಯಬೇಕಿತ್ತು. ಆದರೆ, ಅವರ ಲೆಕ್ಕಾಚಾರವೂ ಬುಡ ಮೇಲಾಗಿದೆ. ಹೊಸ ಈರುಳ್ಳಿ ಮಾರುಕಟ್ಟೆಗೆ ಬಾರದಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಗ್ರಾಹಕರು ಅನ್ಯದಾರಿ ಇಲ್ಲದೆ ಈರುಳ್ಳಿ ಖರೀದಿಸುತ್ತಿದ್ದಾರೆ.

ಈರುಳ್ಳಿ ಬಳಕೆ ಸಾಧ್ಯವಿರುವಷ್ಟು ಕಡಿಮೆ ಮಾಡುವ ಪ್ರಯತ್ನಗಳು ನಡೆದಿವೆ. ಹೋಟೆಲ್‌ಗಳಲ್ಲಿ ಈರುಳ್ಳಿ ಬಜ್ಜಿ ಮಾಡುವುದು ಕಡಿಮೆಯಾಗಿದೆ.

ADVERTISEMENT

ಆಲೂಗಡ್ಡೆ ಬೆಲೆ ಪ್ರತಿ ಕ್ವಿಂಟಲ್‌ಗೆ ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ. ಹೋಟೆಲ್‌ ಹಾಗೂ ಖಾನಾವಳಿಗಳಲ್ಲಿ ಆಲೂಗಡ್ಡೆಯ ಪದಾರ್ಥಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ.

ಸೊಪ್ಪುಗಳ ಪೈಕಿ ಪಾಲಕ್‌ ಬೆಲೆ ಮಾತ್ರ ಹೆಚ್ಚಾಗಿದೆ. ಬೀನ್ಸ್, ಸಬ್ಬಸಗಿ, ಕರಿಬೇವು, ಕೊತಂಬರಿ ಬೆಲೆ ಕಡಿಮೆಯಾಗಿದೆ. ಬೆಳ್ಳುಳ್ಳಿ, ಮೆಣಸಿನಕಾಯಿ, ಎಲೆಕೋಸು. ಗಜ್ಜರಿ, ಬದನೆಕಾಯಿ, ಹೂಕೋಸು, ಬೀಟ್‌ರೂಟ್, ತೊಂಡೆಕಾಯಿ, ಟೊಮೆಟೊ, ಬೆಂಡೆಕಾಯಿ, ಹಿರೇಕಾಯಿ ಹಾಗೂ ನುಗ್ಗೆಕಾಯಿ ಬೆಲೆ ಸ್ಥಿರವಾಗಿದೆ.

ಬೀದರ್‌ ಜಿಲ್ಲೆಯ ಜನ ಮೂರು ತಿಂಗಳಿಂದ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಿಂದ ಬರುವ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನೇ ಅವಲಂಬಿಸಿದ್ದಾರೆ. ಬೆಳಗಾವಿ, ಧಾರವಾಡ, ರಾಯಚೂರಲ್ಲಿ ಈರುಳ್ಳಿ ಬೆಳೆಯುತ್ತಿದ್ದರೂ ಅದು ಅಲ್ಲಿಯ ಮಾರುಕಟ್ಟೆಗೆ ಸಾಲುತ್ತಿಲ್ಲ. ಒಂದೊಮ್ಮೆ ಬೀದರ್‌ಗೆ ತರಿಸಿದರೂ ಸಾಗಣೆ ವೆಚ್ಚವೇ ಅಧಿಕವಾಗುತ್ತಿದೆ.

ಆಗ್ರಾದ ಆಲೂಗಡ್ಡೆಯ ಆವಕ ಮುಂದುವರಿದಿದೆ. ಬೆಳಗಾವಿ ಹಾಗೂ ಹೈದರಾಬಾದ್‌ನಿಂದ ಮೆಣಸಿನಕಾಯಿ ಬಂದಿದೆ.

ಹೈದರಾಬಾದ್‌ನಿಂದ ಬೀನ್ಸ್, ಗಜ್ಜರಿ, ಹಿರೇಕಾಯಿ, ತೊಂಡೆಕಾಯಿ, ಔರೆಕಾಯಿ, ಮೂಲಂಗಿ, ನವಲಕೋಲ, ಎಲೆಕೋಸು ಹಾಗೂ ಹೂಕೋಸು ಬಂದಿದೆ.

‘ತರಕಾರಿ ಸಗಟು ಮಾರುಕಟ್ಟೆಯಲ್ಲಿ ವ್ಯವಹಾರ ಮಂದಗತಿಯಲ್ಲಿ ಸಾಗಿದೆ. ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದಲೂ ನಿರೀಕ್ಷೆಯಷ್ಟು ತರಕಾರಿ ಬರುತ್ತಿಲ್ಲ. ಪ್ರಮುಖ ತರಕಾರಿಗಳ ಬೆಲೆ ಒಂದು ವಾರದಿಂದ ಸ್ಥಿರವಾಗಿದೆ. ಗ್ರಾಹಕರು ಎರಡು ದಿನಕ್ಕೆ ಎಷ್ಟು ಬೇಕೋ ಅಷ್ಟನ್ನೇ ಖರೀದಿಸುತ್ತಿದ್ದಾರೆ. ಮನೆಗಳಲ್ಲಿ ರೆಫ್ರಿಜಿರೇಟರ್‌ ಇದ್ದರೂ ಹೆಚ್ಚು ಖರೀದಿಸಿ ಇಟ್ಟುಕೊಳ್ಳುತ್ತಿಲ್ಲ’ ಎಂದು ಗಾಂಧಿಗಂಜ್ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.