ADVERTISEMENT

ಬೀದರ್‌: ಆನ್‌ಲೈನ್‌ ಗೇಮ್ಸ್‌; ಗ್ರಾಮೀಣರ ಬದುಕು ಮೂರಾಬಟ್ಟೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 30 ಜನವರಿ 2025, 6:56 IST
Last Updated 30 ಜನವರಿ 2025, 6:56 IST
ಕಾರ್ತಿಕ್‌
ಕಾರ್ತಿಕ್‌   

ಬೀದರ್‌: ಆನ್‌ಲೈನ್‌ ಗೇಮ್ಸ್‌ನಿಂದ ಗ್ರಾಮೀಣರ ಬದುಕು ಅಕ್ಷರಶಃ ಮೂರಾಬಟ್ಟೆಯಾಗುತ್ತಿದೆ.

ಹಿಂದೆ ಇಸ್ಪೀಟ್‌, ಜೂಜು, ಮಟ್ಕಾದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದವರು ಈಗ ಆನ್‌ಲೈನ್‌ ಗೇಮ್ಸ್‌ ಕಡೆಗೆ ಮುಖ ಮಾಡಿದ್ದಾರೆ.

ಪ್ರತಿಯೊಬ್ಬರೂ ಮೊಬೈಲ್‌ ಬಳಸುತ್ತಿರುವುದರಿಂದ ಆನ್‌ಲೈನ್‌ ಗೇಮ್ಸ್‌ ಮೇಲಿನ ವ್ಯಾಮೋಹ ಹೆಚ್ಚಾಗಿದೆ. ಅದರಲ್ಲೂ ಈ ಆಟದಲ್ಲಿ ಗ್ರಾಮೀಣ ಭಾಗದ ಜನರೇ ಹೆಚ್ಚಾಗಿ ತೊಡಗಿಸಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಕೃಷಿ ಸೇರಿದಂತೆ ಇತರೆ ಕೆಲಸಗಳಿಗೆ ಸಾಲ ಪಡೆದು, ಹೆಚ್ಚಿನ ಹಣ ಗಳಿಸಬೇಕೆಂಬ ಉದ್ದೇಶದಿಂದ ಯುವಕರು ಆನ್‌ಲೈನ್‌ ಗೇಮ್ಸ್‌ ಆಡಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳಲ್ಲಿ ಆನ್‌ಲೈನ್‌ ಗೇಮ್ಸ್‌ಗೆ ಸಂಬಂಧಿಸಿವೆ. ಆದರೆ, ಯಾರೂ ಆ ವಿಷಯ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಸಮಾಜದಲ್ಲಿ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರಬಹುದು ಎಂಬ ವಿಚಾರದಿಂದ ಹಿಂದೇಟು ಹಾಕಿಕೊಳ್ಳುತ್ತಿದ್ದಾರೆ. ಗ್ರಾಮೀಣ ಯುವಜನರನ್ನು ಇದರಿಂದ ತಡೆಯಲೂ ಸಾಧ್ಯವಾಗುತ್ತಿಲ್ಲ.

ಡಿಸೆಂಬರ್‌ 25ರಂದು ಭಾಲ್ಕಿ ತಾಲ್ಲೂಕಿನ ಸಾಯಗಾಂವ ಬಳಿ ಜ್ಯೋತಿ ತಾಂಡಾದ ಸಮೀಪ ವಿಜಯಕುಮಾರ ಹೊಳ್ಳೆ ಎಂಬ 24 ವರ್ಷ ವಯಸ್ಸಿನ ಯುವಕ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಜೀವ ಬಿಟ್ಟಿದ್ದ. ಆನ್‌ಲೈನ್‌ ಗೇಮ್ಸ್‌ನಲ್ಲಿ ₹10ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ಹತಾಶನಾಗಿ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದ.

ಬಸವಕಲ್ಯಾಣದಲ್ಲೂ ಇಂತಹುದೇ ಘಟನೆ ನಡೆದಿತ್ತು. ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿ, ‘ಆನ್‌ಲೈನ್‌ ಗೇಮ್ಸ್‌ ಆಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾರೂ ಅದರ ದಾಸರಾಗಬೇಡಿ. ಸರ್ಕಾರ ಇದನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದ್ದರು.

ಆದರೂ ಇದರ ಬಗ್ಗೆ ವ್ಯಾಪಕ ಜನಜಾಗೃತಿ, ತಿಳಿವಳಿಕೆ ಮೂಡಿಸದ ಕಾರಣ ಈ ರೀತಿಯ ಘಟನೆಗಳು ಹೆಚ್ಚಾಗುತ್ತಲೇ ಇವೆ. ಆದರೆ, ಸರ್ಕಾರ ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಸಿಎಂ ಜೊತೆ ಚರ್ಚೆ–ಖಂಡ್ರೆ

ಆನ್‌ಲೈನ್‌ ಗೇಮಿಂಗ್‌ನಿಂದ ಆಗುತ್ತಿರುವ ಅವಾಂತರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುತ್ತೇನೆ. ಇದನ್ನು ತಡೆಯಲು ಏನು ಮಾಡಬಹುದು ಎಂದು ಚರ್ಚಿಸಿ ತೀರ್ಮಾನಕ್ಕೆ ಬರುತ್ತೇವೆ. ಈ ಕುರಿತು ಪೊಲೀಸ್‌ ಇಲಾಖೆಯವರು ಕೂಡ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. –ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಒಂದೇ ದಿನ ಇಬ್ಬರು ರೈತರ ಆತ್ಮಹತ್ಯೆ

ಬೀದರ್‌: ಸಾಲ ತೀರಿಸಲಾಗದೆ ಮನನೊಂದು ಒಂದೇ ದಿನ ಜಿಲ್ಲೆಯ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಲ್ಕಿ ತಾಲ್ಲೂಕಿನ ಖಾನಾಪೂರದ ಯುವ ರೈತ ಕಾರ್ತಿಕ್‌ (21) ಹಾಗೂ ಬಸವಕಲ್ಯಾಣ ತಾಲ್ಲೂಕಿನ ಇಲ್ಲಾಳ ಗ್ರಾಮದ ರೈತ ಜಗದೀಶ ರೆಡ್ಡಿ ಪ್ರಲ್ಹಾದ ರೆಡ್ಡಿ (49) ಮೃತ ರೈತರು.

ಕಾರ್ತಿಕ್‌ ಅವರು ಖಾನಾಪೂರದ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಜೀವ ತ್ಯಜಿಸಿದ್ದಾರೆ. ಜಮೀನು ಗುತ್ತಿಗೆ ಪಡೆದು ಬೇಸಾಯಕ್ಕಾಗಿ ಖಾಸಗಿ ಹಾಗೂ ಬ್ಯಾಂಕಿನಿಂದ ಒಟ್ಟು ₹4 ಲಕ್ಷ ಸಾಲ ಮಾಡಿಕೊಂಡಿದ್ದರು. ನಿರೀಕ್ಷಿಸದಷ್ಟು ಆದಾಯ ಬರದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧನ್ನೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಜಗದೀಶ ರೆಡ್ಡಿ ಅವರು ಬಾವಿಗೆ ಹಾರಿ ಜೀವ ಬಿಟ್ಟಿದ್ದಾರೆ. ಬ್ಯಾಂಕಿನಲ್ಲಿ ₹1.25 ಲಕ್ಷ ಹಾಗೂ ಕೈಸಾಲ ಮಾಡಿಕೊಂಡಿದ್ದರು. ರೇಷ್ಮೆ ಕೃಷಿಯಲ್ಲಿ ನಷ್ಟ ಉಂಟಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ ಮಗ ಮಗಳು ಇದ್ದಾರೆ. ಮಂಠಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಘಟನೆ ಮಂಗಳವಾರ ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.