ADVERTISEMENT

ಅಧಿಕಾರಿಗಳ ವಿರುದ್ಧ ಅರಳಿ ಆಕ್ರೋಶ

ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 15:24 IST
Last Updated 29 ನವೆಂಬರ್ 2020, 15:24 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಮಾತನಾಡಿದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಮಾತನಾಡಿದರು   

ಬೀದರ್‌: ‘ಕೆಲ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯು ಕಾಲಕಾಲಕ್ಕೆ ನಡೆಯುತ್ತಿಲ್ಲ. ದೌರ್ಜನ್ಯ ಪ್ರಕರಣಗಳಲ್ಲಿ ಸರ್ಕಾರ ನೀಡುವ ಪರಿಹಾರಧನವೂ ಸಂತ್ರಸ್ತರಿಗೆ ಸಕಾಲಕ್ಕೆ ತಲುಪುತ್ತಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಒಂಬಂತ್ತು ತಿಂಗಳಿಂದ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆ ಕರೆದಿಲ್ಲ, ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ಅಧಿಕಾರಿಗಳು ಒಂದಿಷ್ಟೂ ಆಸಕ್ತಿ ತೋರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಪ್ರತಿ ತಿಂಗಳು ಸಮಿತಿ ಸಭೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ದೌರ್ಜನ್ಯ ಎಸಗುವವರಿಗೆ ಕಾನೂನಿನ ಭಯ ಇಲ್ಲದಂತಾಗುತ್ತದೆ. ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.

‘ದೌರ್ಜನ್ಯ ಘಟನೆಯಿಂದ ನೊಂದ ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ಧನ ಸಿಗಬೇಕು. ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಬಗ್ಗೆ ಸಮಿತಿಯ ಸದಸ್ಯರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ಮಾತನಾಡಿ, ‘ದೌರ್ಜನ್ಯ ಘಟನೆ ನಡೆದ ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪ್ರಕರಣ ದಾಖಲಿಸಿದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ವಿವರವಾದ ವರದಿಯನ್ನು ಕೊಡಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಸಂತ್ರಸ್ತರಿಗೆ ಪರಿಹಾರ ದೊರಕಿಸುವ ಬಗ್ಗೆ ಚರ್ಚಿಸುವುದಷ್ಟೇ ಈ ಸಮಿತಿಯ ಕಾರ್ಯವಲ್ಲ. ಬದಲಾಗಿ ಇಂತಹ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ಸಮಾಜದಲ್ಲಿ ಶಾಂತಿ ಕಾಪಾಡಲು ಮುಂದಾಗಬೇಕು’ ಎಂದರು.

‘ಎಲ್ಲರೂ ಸಹಬಾಳ್ವೆಯಿಂದ ಬದುಕುವಂತೆ ಜನರಿಗೆ ತಿಳಿವಳಿಕೆ ನೀಡುವ ಸಂದೇಶವನ್ನೂ ಜಿಲ್ಲಾಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಮಾಡಬೇಕು. ಸಮಿತಿಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಕೂಡಲೇ ಅನುಷ್ಠಾನವಾಗುವಂತೆ ನೋಡಿಕೊಳ್ಳಲು ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಒತ್ತು ಕೊಡಬೇಕು’ ಎಂದು ತಿಳಿಸಿದರು.

ನ್ಯಾಯಾಲದಲ್ಲಿ ನಡೆಯುತ್ತಿರುವ ಪ್ರಕರಣಗಳು, ಪೊಲೀಸ್ ವಿಚಾರಣೆಯಲ್ಲಿರುವ ಪ್ರಕರಣಗಳು, ಕಳೆದ 10 ತಿಂಗಳಲ್ಲಿ ಸಂತ್ರಸ್ತರಿಗೆ ಪರಿಹಾರಧನ ವಿತರಿಸಿದ ವಿವರಗಳು ಮತ್ತು ಪರಿಹಾರ ಧನಕ್ಕಾಗಿ ಬಾಕಿ ಉಳಿದ ಪ್ರಕರಣಗಳು ವಿವರಗಳ ಬಗ್ಗೆ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.

ದೌರ್ಜನ್ಯ ಪ್ರಕರಣಗಳಿಗೆ ಸಂಬAಧಿಸಿದಂತೆ 2016 ರಿಂದ 2020ರ ವರೆಗೆ ಎಲ್ಲ ಪ್ರಕರಣಗಳಿಗೂ ಎರಡನೇ ಕಂತಿನ ಪರಿಹಾರ ಧನ ವಿತರಿಸಲಾಗಿದೆ. ಕಳೆದ ಹತ್ತು ತಿಂಗಳಲ್ಲಿ ಬೀದರ್ ತಾಲ್ಲೂಕಿನಲ್ಲಿ 3, ಹುಮನಾಬಾದ್, ಬಸವಕಲ್ಯಾಣ, ಚಿಟಗುಪ್ಪ ತಾಲ್ಲೂಕುಗಳಲ್ಲಿ ತಲಾ ಒಂದು ಸೇರಿ ಒಟ್ಟು 6 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಬಸವಕಲ್ಯಾಣದಲ್ಲಿ 2, ಬೀದರ್‌ನಲ್ಲಿ 3 ಹಾಗೂ ಭಾಲ್ಕಿ, ಹುಮನಾಬಾದ್ ಮತ್ತು ಚಿಟಗುಪ್ಪ ತಾಲ್ಲೂಕುಗಳಲ್ಲಿ ತಲಾ ಒಂದು ಪ್ರಕರಣಗಳು ಪೊಲೀಸ್ ವಿಚಾರಣೆ ಹಂತದಲ್ಲಿವೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಎಂ.ಬ್ಯಾಕೋಡ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ಎಸ್.ಎಂ.ಜನವಾಡಕರ್, ಶಂಕರರಾವ್ ಸಿಂಧೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.