ADVERTISEMENT

ಪೆಟ್ರೋಲ್‍ಗಾಗಿ ಮುಗಿ ಬಿದ್ದರು!

ಬಂಕ್‌ ಬಂದ್‌: ದ್ವಿಚಕ್ರ ವಾಹನಗಳ ಮಾಲೀಕರಿಗೆ ಬೇಸರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 16:28 IST
Last Updated 28 ಮಾರ್ಚ್ 2020, 16:28 IST
ಜಿಲ್ಲಾ ಆಡಳಿತದ ಆದೇಶದ ಕಾರಣ ಬೀದರ್‌ನ ಅಶೋಕ ಹೋಟೆಲ್‌ ಬಳಿಯ ಪೆಟ್ರೋಲ್ ಬಂಕ್ ಬಂದ್ ಇಡಲಾಗಿತ್ತು
ಜಿಲ್ಲಾ ಆಡಳಿತದ ಆದೇಶದ ಕಾರಣ ಬೀದರ್‌ನ ಅಶೋಕ ಹೋಟೆಲ್‌ ಬಳಿಯ ಪೆಟ್ರೋಲ್ ಬಂಕ್ ಬಂದ್ ಇಡಲಾಗಿತ್ತು   

ಬೀದರ್: ಲಾಕ್‍ಡೌನ್ ಕಾರಣ ಜಿಲ್ಲೆಯಲ್ಲಿ ಶನಿವಾರದಿಂದ ಪೆಟ್ರೋಲ್ ಬಂಕ್‍ಗಳನ್ನೂ ಬಂದ್ ಮಾಡಲಾಗಿದೆ.

ಜಿಲ್ಲಾ ಆಡಳಿತದ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಅಂದರೆ ಏಪ್ರಿಲ್ 14 ರ ವರೆಗೆ ಪೆಟ್ರೋಲ್ ಬಂಕ್‍ಗಳು ಬಂದ್ ಇರಲಿವೆ.

ಮುಗಿ ಬಿದ್ದರು!: ಪೆಟ್ರೋಲ್ ಬಂಕ್‍ಗಳನ್ನು ಬಂದ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ನಗರದಲ್ಲಿ ಶುಕ್ರವಾರ ದ್ವಿಚಕ್ರ ವಾಹನಗಳ ಮಾಲೀಕರು ಪೆಟ್ರೋಲ್ ತುಂಬಿಸಿಕೊಳ್ಳಲು ಮುಗಿ ಬಿದ್ದರು.

ADVERTISEMENT

ಸಂಜೆ ಪೆಟ್ರೋಲ್ ಬಂಕ್‍ಗಳಲ್ಲಿ ದ್ವಿಚಕ್ರ ವಾಹನಗಳ ಸಾಲು ಕಂಡು ಬಂದಿತು. ಬಹುತೇಕರು ಎರಡು ವಾರಗಳಿಗೆ ಸಾಕಾಗುವಷ್ಟು ಪೆಟ್ರೋಲ್ ತುಂಬಿಸಿಕೊಂಡರು. ಕೆಲವರು ₹300, ₹500 ರ ಪೆಟ್ರೋಲ್ ಹಾಕಿಸಿಕೊಂಡರೆ, ಇನ್ನು ಕೆಲವರು ದುಡ್ಡಿಗೆ ಲೆಕ್ಕ ಹಾಕದೇ ಟ್ಯಾಂಕ್ ಭರ್ತಿ ಮಾಡಿಕೊಂಡರು.

ರಾತ್ರಿ ವೇಳೆಗೆ ಪೆಟ್ರೋಲ್ ಬಂಕ್‍ಗಳ ಮುಂದೆ ಬ್ಯಾರಿಕೇಡ್‍ಗಳನ್ನು ಹಾಕಿ ಪೆಟ್ರೋಲ್ ಹಾಕುವುದನ್ನು ನಿಲ್ಲಿಸಲಾಯಿತು. ಪೆಟ್ರೋಲ್ ತುಂಬಿಸಿಕೊಳ್ಳಲು ಬಂದವರು ಬಂಕ್ ಬಂದ್ ಮಾಡಿದ್ದನ್ನು ಕಂಡು, ಬೇರೆಡೆ ಇರಬಹುದು ಎನ್ನುವ ಲೆಕ್ಕಾಚಾರದಲ್ಲಿ ಮತ್ತೊಂದು, ಇನ್ನೊಂದು ಪೆಟ್ರೋಲ್ ಬಂಕ್‍ಗೆ ದೌಡಾಯಿಸಿದರು. ಆದರೆ, ಎಲ್ಲೆಡೆ ಬಂಕ್‍ಗಳು ಮುಚ್ಚಿದ್ದವು. ಬಂಕ್ ಸಿಬ್ಬಂದಿ ಗ್ರಾಹಕರನ್ನು ಪೆಟ್ರೋಲ್ ಖಾಲಿಯಾಗಿದೆ ಎಂದು ಹೇಳಿ ಕಳಿಸಿದರು.

ಕೆಲಕಡೆ ಅಗತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮಾಧ್ಯಮ ‍ಪ್ರತಿನಿಧಿಗಳಿಗೆ ಪೆಟ್ರೋಲ್ ಒದಗಿಸಿದ್ದು ಕಂಡು ಬಂದಿತು.

ಕೊರೊನಾ ಸೋಂಕು ತಡೆಗೆ ಪ್ರಧಾನಿ ಇಡೀ ದೇಶವನ್ನು ಲಾಕ್‍ಡೌನ್ ಮಾಡಿದ್ದಾರೆ. 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಆದರೂ, ಅನೇಕರು ಅಗತ್ಯ ವಸ್ತುಗಳ ನೆಪದಲ್ಲಿ ದ್ವಿಚಕ್ರ ವಾಹನಗಳ ಮೇಲೆ ಓಡಾಟ ನಡೆಸುತ್ತಿದ್ದಾರೆ. ಈ ರೀತಿಯ ನಿರ್ಲಕ್ಷ್ಯ ಆಪತ್ತಿಗೆ ಕಾರಣವಾಗಲಿದೆ. ಹೀಗಾಗಿ ಪೆಟ್ರೋಲ್ ಬಂಕ್ ಬಂದ್ ಮಾಡಲು ಜಿಲ್ಲಾ ಆಡಳಿತ ಕೈಗೊಂಡಿರುವ ಕ್ರಮ ಸೂಕ್ತವಾಗಿದೆ. ಇದರಿಂದ ವಾಹನಗಳ ಓಡಾಟ ತಾನಾಗಿಯೇ ನಿಲ್ಲಲಿದೆ ಎಂದು ಹಿರಿಯರೊಬ್ಬರು ಅಭಿಪ್ರಾಯಪಟ್ಟರು.

ವೈದ್ಯಕೀಯ ಮತ್ತಿತರ ತುರ್ತು ಸಂದರ್ಭದಲ್ಲಿ ಹೊರಗಡೆ ಹೋಗಲು ವಾಹನಗಳಿಗೆ ಪೆಟ್ರೋಲ್‌ ಅವಶ್ಯಕ. ಪೆಟ್ರೋಲ್ ಬಂಕ್ ಬಂದ್ ಮಾಡಿದ್ದರಿಂದ ಅನೇಕರಿಗೆ ತೊಂದರೆ ಉಂಟಾಗಲಿದೆ ಎನ್ನುವುದು ಇನ್ನೊಬ್ಬರ ಅನಿಸಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.