ADVERTISEMENT

ಸಿದ್ಧೇಶ್ವರ ಬೆಟ್ಟ ಅಭಿವೃದ್ಧಿಗೆ ಯೋಜನೆ- ಡಾ. ರಾಜಶೇಖರ ಶಿವಾಚಾರ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 14:22 IST
Last Updated 17 ಜನವರಿ 2022, 14:22 IST
ಬೀದರ್ ಸಮೀಪದ ತೆಲಂಗಾಣದ ಮಲ್ಗಿ ಗ್ರಾಮದಿಂದ ಸಿದ್ಧೇಶ್ವರ ಬೆಟ್ಟದ ವರೆಗೆ ಬೇಮಳಖೇಡದ ಡಾ. ರಾಜಶೇಖರ ಶಿವಾಚಾರ್ಯರ ಮೆರವಣಿಗೆ ನಡೆಯಿತು
ಬೀದರ್ ಸಮೀಪದ ತೆಲಂಗಾಣದ ಮಲ್ಗಿ ಗ್ರಾಮದಿಂದ ಸಿದ್ಧೇಶ್ವರ ಬೆಟ್ಟದ ವರೆಗೆ ಬೇಮಳಖೇಡದ ಡಾ. ರಾಜಶೇಖರ ಶಿವಾಚಾರ್ಯರ ಮೆರವಣಿಗೆ ನಡೆಯಿತು   

ಬೀದರ್: ಸಿದ್ಧೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ಬೇಮಳಖೇಡದ ಡಾ. ರಾಜಶೇಖರ ಶಿವಾಚಾರ್ಯ ನುಡಿದರು.

ಇಲ್ಲಿಗೆ ಸಮೀಪದ ನೆರೆಯ ತೆಲಂಗಾಣದ ಮಲ್ಗಿಯ ಸಿದ್ಧೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ ಮಾಸಿಕ ರುದ್ರಾಭಿಷೇಕ ಹಾಗೂ ಸಿದ್ಧ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆಯು ರಸ್ತೆ, ಕುಡಿಯುವ ನೀರು, ಭಕ್ತ ನಿವಾಸ, ಗುರು ನಿವಾಸ, ದಾಸೋಹ ಭವನ ಮೊದಲಾದವುಗಳನ್ನು ಒಳಗೊಳ್ಳಲಿದೆ ಎಂದು ತಿಳಿಸಿದರು.

ADVERTISEMENT

ಸಿದ್ಧೇಶ್ವರ ಬೆಟ್ಟಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಿಸರ್ಗದ ಮಡಿಲಲ್ಲಿ ಇರುವ ಬೆಟ್ಟವನ್ನು ಅಭಿವೃದ್ಧಿಪಡಿಸಿದರೆ ರಾಷ್ಟ್ರಮಟ್ಟದ ಪ್ರವಾಸಿ ತಾಣ ಆಗಲಿದೆ. ಈ ಭಾಗದ ಆರ್ಥಿಕ ಅಭಿವೃದ್ಧಿಗೂ ಪೂರಕವಾಗಿದೆ ಎಂದು ಹೇಳಿದರು.

ಹೊನ್ನಿಕೇರಿ, ಅಲಿಯಾಬಾದ್, ಹೊನ್ನಡ್ಡಿ ಸಿದ್ಧೇಶ್ವರ ಕ್ಷೇತ್ರಗಳಂತೆ ಮಲ್ಗಿ ಬೆಟ್ಟವು ಸಿದ್ಧಕುಲ ಚಕ್ರವರ್ತಿ ಜಗದ್ಗುರು ರೇವಣಸಿದ್ಧೇಶ್ವರರು ಪಾದ ಪ್ರಕ್ಷಾಲನೆ ಮಾಡಿದ ತಪೋಭೂಮಿಯಾಗಿದೆ. ಈ ಸ್ಥಳದಲ್ಲಿ ಅನೇಕರ ಸಿದ್ಧಿ ಪುರುಷರು ತಪಸ್ಸು ಮಾಡಿ ಸಿದ್ಧಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಶೀಘ್ರದಲ್ಲೇ ಕ್ಷೇತ್ರದ ಚರಿತ್ರೆಯ ಕಿರುಹೊತ್ತಿಗೆ ಹೊರ ತರಲಾಗುವುದು. ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಭಕ್ತರು ಹಾಗೂ ದಾನಿಗಳು ಕೈಜೋಡಿಸಬೇಕು ಎಂದು ಹೇಳಿದರು.

ಸಿದ್ಧಾರೆಡ್ಡಿ ಪಾಟೀಲ, ಕುಶಾಲರಾವ್ ಗೌರಶೆಟ್ಟಿ, ಮಾದಪ್ಪ ಭಂಗೂರೆ, ಸರಸ್ವತಿಬಾಯಿ ಗೌರಶೆಟ್ಟಿ, ಕಂಟೆಪ್ಪ ಭಂಗೂರೆ, ಮಾರುತಿ ಮಲಗಿ ಇದ್ದರು. ಮಾರುತಿ ಸರಪಂಚ ಸ್ವಾಗತಿಸಿದರು.

ಇದಕ್ಕೂ ಮುನ್ನ ಗ್ರಾಮದಿಂದ ಬೆಟ್ಟದ ವರೆಗೆ ಮಂಗಳ ವಾದ್ಯಗಳೊಂದಿಗೆ ಶ್ರೀಗಳ ಮೆರವಣಿಗೆ ಜರುಗಿತು. ಮಾರ್ಗಮಧ್ಯೆ ಮಲ್ಗಿ ಜಹೀರಾಬಾದ್ ಮುಖ್ಯ ರಸ್ತೆಗೆ ಹೊಂದಿಕೊಂಡು ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ರಾಜಶೇಖರ ಶಿವಾಚಾರ್ಯರು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.