ನಾಗೋರಾ(ಜನವಾಡ): ಬೀದರ್ ತಾಲ್ಲೂಕಿನ ನಾಗೋರಾದ ಕಾಮಧೇನು ಗೋಶಾಲೆಯಲ್ಲಿ ಬರುವ ದಿನಗಳಲ್ಲಿ ಪಂಚಗವ್ಯ ಚಿಕಿತ್ಸಾಲಯ ಸ್ಥಾಪಿಸಲು ಯೋಜಿಸಲಾಗಿದೆ ಎಂದು ತಮಲೂರಿನ ಶಿವಾನಂದ ಶಿವಾಚಾರ್ಯ ಹೇಳಿದರು.
ನಾಗೋರಾದ ಕಾಮಧೇನು ಗೋಶಾಲೆಯಲ್ಲಿ ಶನಿವಾರ ನಡೆದ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಐದು ವರ್ಷಗಳ ಹಿಂದೆ 10 ಎಕರೆ ಪ್ರದೇಶದಲ್ಲಿ ಆರಂಭಿಸಿದ ಗೋಶಾಲೆಯಲ್ಲಿ 40 ಗೋವುಗಳಿವೆ. ಗೋಮೂತ್ರ ಹಾಗೂ ಸಗಣಿಯಿಂದ 50ಕ್ಕೂ ಅಧಿಕ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ’ ಎಂದು ತಿಳಿಸಿದರು.
ಕಳೆದ ವರ್ಷ ಆಕಳ ಸಗಣಿಯಿಂದ 2 ಸಾವಿರ ಗಣೇಶ ವಿಗ್ರಹಗಳನ್ನು ಸಿದ್ಧಪಡಿಸಲಾಗಿತ್ತು. ಈ ಬಾರಿ ಅದಕ್ಕೂ ಹೆಚ್ಚು ವಿಗ್ರಹಗಳನ್ನು ತಯಾರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಗೋ ಮೂತ್ರದಿಂದ ಸಾವಯವ ಕೃಷಿಗೆ ಅನುಕೂಲವಿದೆ. ಅದರ ಉತ್ಪನ್ನ ಸಿಂಪರಣೆಯಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಬೆಳೆಗಳ ಇಳುವರಿಯೂ ವೃದ್ಧಿಸುತ್ತದೆ. ರೈತರು ಗೋವು ಸಾಕಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ತೋಟಗಾರಿಕೆ ಕಾಲೇಜು ಡೀನ್ ಡಾ. ಎಸ್.ವಿ. ಪಾಟೀಲ, ಪಶು ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಚನ್ನಪ್ಪಗೌಡ ಬಿರಾದಾರ, ತೋಟಗಾರಿಕೆ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ. ವಿಜಯ ಮಹಾಂತೇಶ, ಡಾ. ವಿ.ಪಿ. ಸಿಂಗ್, ಡಾ. ಎಂ.ಡಿ. ಫಾರೂಕ್, ಚನ್ನಬಸವಂತ ರೆಡ್ಡಿ, ಶ್ರೀಕಾಂತ ಮೋದಿ, ಗೋಶಾಲೆಯ ಸಂಚಾಲಕ ಶಿವಕುಮಾರ ಹಿರೇಮಠ ಮಾತನಾಡಿದರು.
ಮುಖಂಡ ಕಾಶಿನಾಥ ಬೆಲ್ದಾಳೆ, ಡಾ. ರಮೇಶ, ಡಾ. ಸರಿತಾ, ಶಿವಕುಮಾರ ಸ್ವಾಮಿ, ಶ್ರೀಕಾಂತ ಸ್ವಾಮಿ ಸೋಲಪುರ, ಕಾರ್ತಿಕ ಮಠಪತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.