ADVERTISEMENT

‘ಜನರಿಗೆ ತೊಂದರೆಯಾದರೆ ಸಹಿಸಲ್ಲ’

ಪೊಲೀಸ್ ವಸತಿಗೃಹ ಸುತ್ತುಗೋಡೆಗೆ ಆಕ್ಷೇಪ: ಶಾಸಕ ಖಂಡ್ರೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 4:11 IST
Last Updated 25 ಜೂನ್ 2021, 4:11 IST
ಶಾಸಕ ಈಶ್ವರ ಖಂಡ್ರೆ ಗುರುವಾರ ಔರಾದ್ ಪಟ್ಟಣದಲ್ಲಿ ಪೊಲೀಸ್ ವಸತಿಗೃಹ ಸುತ್ತುಗೋಡೆ ಸ್ಥಳ ಪರಿಶೀಲನೆ ನಡೆಸಿ ಅಲ್ಲಿಯ ನಿವಾಸಿಗಳಿಂದ ಮಾಹಿತಿ ಪಡೆದರು
ಶಾಸಕ ಈಶ್ವರ ಖಂಡ್ರೆ ಗುರುವಾರ ಔರಾದ್ ಪಟ್ಟಣದಲ್ಲಿ ಪೊಲೀಸ್ ವಸತಿಗೃಹ ಸುತ್ತುಗೋಡೆ ಸ್ಥಳ ಪರಿಶೀಲನೆ ನಡೆಸಿ ಅಲ್ಲಿಯ ನಿವಾಸಿಗಳಿಂದ ಮಾಹಿತಿ ಪಡೆದರು   

ಔರಾದ್: ‘ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುವಂತಹ ಕೃತ್ಯವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ’ ಎಂದು ಶಾಸಕ ಈಶ್ವರ ಖಂಡ್ರೆ ಎಚ್ಚರಿಸಿದರು.

ಪಟ್ಟಣದಲ್ಲಿ ಪೊಲೀಸ್ ವಸತಿಗೃಹ ಸುತ್ತುಗೋಡೆ ನಿರ್ಮಾಣ ಸಂಬಂಧ ಅಲ್ಲಿಯ ನಿವಾಸಿಗಳ ಮನವಿಗೆ ಸ್ಪಂದಿಸಿ ಖುದ್ದಾಗಿ ಬಂದು ಸ್ಥಳ ವೀಕ್ಷಣೆ ಮಾಡಿದರು.

‘ಸರ್ಕಾರ ಆಗಲಿ, ಪೊಲೀಸರಾಗಲಿ ಜನರಿಗಾಗಿ ಕೆಲಸ ಮಾಡಬೇಕಾಗಿದೆ. ಜನರಿಗೆ ತೊಂದರೆ ಮಾಡುವುದು ಕಾನೂನು ಬಾಹಿರ. ಜನರ ಹಿತ ಗಮನದಲ್ಲಿಟ್ಟುಕೊಂಡು ಸುತ್ತುಗೋಡೆ ನಿರ್ಮಿಸಬೇಕು. ಈ ವಿಷಯದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ’ ಅವರು ಭರವಸೆ ನೀಡಿದರು.

ADVERTISEMENT

ಪಟ್ಟಣದಲ್ಲಿ ಪೊಲೀಸ್ ವಸತಿಗೃಹ ಸುತ್ತುಗೋಡೆ ನಿರ್ಮಾಣ ಕುರಿತಂತೆ ಅಲ್ಲಿಯ ನಿವಾಸಿಗಳು ಶಾಸಕರ ಗಮನಕ್ಕೆ ತಂದರು. ‘ಸುತ್ತುಗೋಡೆ ನಿರ್ಮಾಣಕ್ಕೆ ನಮ್ಮ ಅಡ್ಡಿ ಇಲ್ಲ. ಆದರೆ ಹಳೆ ಕಾಲದಿಂದಲೂ ಜನರಿಗೆ ಹೋಗಿ ಬರುವ ರಸ್ತೆ ಬಂದ್ ಮಾಡುವುದಕ್ಕೆ ನಮ್ಮ ಆಕ್ಷೇಪ ಇದೆ. ಈ ರೀತಿ ರಸ್ತೆ ಬಂದ್ ಮಾಡಿದರೆ ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಾಕಷ್ಟು ಜನರಿಗೆ ಅನಾನುಕೂಲವಾಗಲಿದೆ. ಈ ವಿಷಯ ನಾವು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ಗಮನಕ್ಕೂ ತರಲಾಗಿದೆ. ಪೊಲೀಸ್ ಅಧಿಕಾರಿಗಳಿಗೂ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಅವರು ನಮ್ಮ ಮನವಿ ಕಡೆಗಣಿಸಿ ರಾತ್ರಿ ವೇಳೆ ಸುತ್ತಗೋಡೆ ಕಟ್ಟುತ್ತಿರುವುದು ನ್ಯಾಯಸಮ್ಮತವಲ್ಲ’ ಎಂದು ಗೋಳು ತೋಡಿಕೊಂಡರು.

‘ತಾಲ್ಲೂಕಿನಲ್ಲಿ ಹೋರಾಟಗಾರರ ಮೇಲೆ ಅನ್ಯಾಯ ಮಾಡಲಾಗುತ್ತಿದೆ. ರೈತಪರ, ಜನಪರ ಹೋರಾಟ ಮಾಡುವವರ ಮೇಲೆ ಕೇಸ್ ದಾಖಲಿಸಿ ದಬ್ಬಾಳಿಕೆ ಮಾಡಲಾಗುತ್ತಿದೆ’ ಎಂದು ಪಕ್ಷದ ಯುವ ಧುರೀಣ ಸುಧಾಕರ ಕೊಳ್ಳೂರ್, ಶರಣಪ್ಪ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಧುರೀಣ ಚರಣಸಿಂಗ್ ರಾಠೋಡ್, ಆನಂದ ಚವಾಣ್, ಪಟ್ಟಣ ಪಂಚಾಯಿತಿ ಸದಸ್ಯ, ಬಂಟಿ ದರಬಾರೆ, ಗುಂಡಪ್ಪ ಮುದಾಳೆ, ಕಾಂಗ್ರೆಸ್ ವಕ್ತಾರ ಸಾಯಿಕುಮಾರ ಘೋಡ್ಕೆ, ಬಸವರಾಜ ದೇಶಮುಖ, ರಾಮಣ್ಣ ವಡೆಯರ್, ಬಸವರಾಜ ದೇಶಮುಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.