ADVERTISEMENT

ಉಪ ಚುನಾವಣೆ: ಬಸವಕಲ್ಯಾಣ ರಾಜಕೀಯ ಚಟುವಟಿಕೆ ಚುರುಕು

ಮಾಣಿಕ ಆರ್ ಭುರೆ
Published 18 ಜನವರಿ 2021, 2:20 IST
Last Updated 18 ಜನವರಿ 2021, 2:20 IST
ಎಂ.ಜಿ.ಮುಳೆ
ಎಂ.ಜಿ.ಮುಳೆ   

ಬಸವಕಲ್ಯಾಣ: ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಶೀಘ್ರ ಘೋಷಣೆಯಾಗುವ ಸಾಧ್ಯತೆಯಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಇಲ್ಲಿನ ಮಾಜಿ ಶಾಸಕ ಎಂ.ಜಿ.ಮುಳೆಯವರು ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದು ಜನವರಿ 18ಕ್ಕೆ ತಮ್ಮ ನಿವಾಸದಲ್ಲಿ ಚಹಾಕೂಟ ಏರ್ಪಡಿಸಿ, ಆತ್ಮೀಯರನ್ನು ಆಹ್ವಾನಿಸಿರುವುದು ಜನರ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವಿಧಾನಸಭೆ ಚುನಾವಣೆ ಹೊರತುಪಡಿಸಿದರೆ ಅವರುಈವರೆಗೆ ಸತತ ಏಳು ಚುನಾವಣೆಗಳನ್ನು ಎದುರಿಸಿದ್ದಾರೆ.

ಒಂದು ಸಲ ಜೆಡಿಎಸ್‌ನಿಂದ ಶಾಸಕರಾಗಿ, ನಂತರ ಕಾಂಗ್ರೆಸ್ ಸೇರ್ಪಡೆಗೊಂಡರು. ಬಳಿಕಬಿಜೆಪಿಗೂ ಹೋದರು. ಈಚೆಗೆ ಜೆಡಿಎಸ್‌ಗೆ ಮರಳಿದ್ದಾರೆ.

ADVERTISEMENT

ಹಿಂದಿನ ಚುನಾವಣೆಯಲ್ಲಿ ಪಿ.ಜಿ.ಆರ್.ಸಿಂಧ್ಯ ಅವರು ಜೆಡಿಎಸ್ ಅಭ್ಯರ್ಥಿ ಆಗಿದ್ದರಿಂದ ಅವರು ಕಣದಿಂದ ದೂರ ಉಳಿಯುವಂತಾಯಿತು.

ಇಲ್ಲಿನ ಶಾಸಕರಾಗಿದ್ದ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನದ ಕಾರಣ ಉಪ ಚುನಾವಣೆ ನಡೆಯಲಿದ್ದು, ಜೆಡಿಎಸ್‌ನಿಂದ ಮುಳೆ ಅವರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅಭ್ಯರ್ಥಿ ನಿಲ್ಲಿಸುವುದರಿಂದ ಪ್ರಯೋಜನವಿಲ್ಲ ಎಂದು ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ನಿರಾಸಕ್ತಿ ತೋರಿದ್ದರಿಂದ ಅವರು ಮತ್ತೆ ಅತಂತ್ರರಾದರು.

ಆಗ ತಮ್ಮ ಬೆಂಬಲಿಗರ ಸಭೆ ನಡೆಸಿದ ಅವರು, ‘ಜೆಡಿಎಸ್‌ನವರು ಅಭ್ಯರ್ಥಿ ನಿಲ್ಲಿಸಲಿ ಅಥವಾ ಬಿಡಲಿ. ನಾನು ಚುನಾವಣೆಗೆ ಸ್ಪರ್ಧಿಸುವೆ. ಕಾಂಗ್ರೆಸ್‌ನ ಟಿಕೆಟ್‌ಗೆ ಪ್ರಯತ್ನಿಸುವೆ. ಇಲ್ಲದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವೆ‌’ ಎಂದಿದ್ದರು.

ಇತ್ತೀಚಿನ ಹೊಸ ಬೆಳವಣಿಗೆ ಪ್ರಕಾರ, ಎಂ.ಜಿ.ಮುಳೆಯವರುಎನ್.ಸಿ.ಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಶರದ್ ಪವಾರ ಅವರನ್ನು ಭೇಟಿಯಾಗಿ ಟಿಕೆಟ್ ಸಂಬಂಧ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೆ ಈ ಪಕ್ಷದ ಜಿಲ್ಲಾಘಟಕದ ಅಧ್ಯಕ್ಷ ರಾಮಭಾವು ಜಾಧವ ಅವರು ಉಪ ಚುನಾವಣೆಯಲ್ಲಿ ಎನ್.ಸಿ.ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಪ್ರಕಟಣೆ ನೀಡಿದ್ದಾರೆ.

ಹೀಗಾಗಿ ಮುಳೆಯವರು ಈ ಪಕ್ಷದಿಂದ ಸ್ಪರ್ಧಿಸುವುದು ನಿಶ್ಚಿತ ಎನ್ನಲಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತುಎನ್.ಸಿ.ಪಿ ಮಧ್ಯೆ ಹೊಂದಾಣಿಕೆ ಇದೆ. ಇಲ್ಲಿ ಆ ಸಂಬಂಧ ಮುಂದುವರೆಯುತ್ತದೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.