ADVERTISEMENT

ಬುದ್ಧಿಯಿಂದಲೇ ವಿದ್ಯೆ ಫಲಕಾರಿಯಾಗಲು ಸಾಧ್ಯ: ಶಿವಕುಮಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 11:53 IST
Last Updated 1 ಜೂನ್ 2019, 11:53 IST
ಬೀದರ್‌ನ ಶರಣ ಉದ್ಯಾನದಲ್ಲಿ ಲಿಂಗಾಯತ ಮಹಾಮಠದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಬೀದರ್‌ನ ಶರಣ ಉದ್ಯಾನದಲ್ಲಿ ಲಿಂಗಾಯತ ಮಹಾಮಠದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಬೀದರ್‌: ‘ವಿದ್ಯೆಗಿಂತ ಬುದ್ಧಿ ಮುಖ್ಯ. ಕೇವಲ ವಿದ್ಯೆಯಿಂದ ಉದ್ಧಾರ ಸಾಧ್ಯವಿಲ್ಲ. ವಿದ್ಯೆ ಫಲಕಾರಿಯಾಗುವುದು ಬುದ್ಧಿಯಿಂದ ಮಾತ್ರ ಸಾಧ್ಯ’ ಎಂದು ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ನುಡಿದರು.

ನಗರದ ಶರಣ ಉದ್ಯಾನದಲ್ಲಿ ಲಿಂಗಾಯತ ಮಹಾಮಠದ ಆಶ್ರಯದಲ್ಲಿ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಾಲಕರಾಗುವುದು ಸುಲಭ. ತಂದೆ-ತಾಯಿಯಾಗುವುದು ಕಷ್ಟ. ಮಕ್ಕಳಿಗೆ ಸಂಸ್ಕಾರ ನೀಡಿ, ಧರ್ಮ-ದೇಶಭಕ್ತಿ ಕಲಿಸುವುದೇ ನಿಜವಾದ ತಂದೆ-ತಾಯಿಗಳು. ಸಂಪತ್ತಿನ ಆಸೆಯಲ್ಲಿ ಮಗ್ನನಾಗದೆ ಸದ್ಗುಣಗಳನ್ನು ಅಳವಡಿಸಿಕೊಂಡು ಸದಾಚಾರದಿಂದ ನಡೆಯುವವನೇ ನಿಜವಾದ ಪುತ್ರ’ ಎಂದು ಮಾರ್ಮಿಕವಾಗಿ ನುಡಿದರು.

ADVERTISEMENT

‘ಅಭ್ಯಾಸದಿಂದ ವಿದ್ಯೆ ಬರಬಹುದು ಆದರೆ ಸಂಸ್ಕಾರದಿಂದ ಬುದ್ಧಿ ಸಮನಿಸುವುದು. ವಿದ್ಯೆಯನ್ನು ಬೆಳಸುವ ಕಲೆಯೆ ಬುದ್ಧಿ.
ಮಕ್ಕಳು ಹಣಗಳಿಸುವ ಯಂತ್ರವಾಗದೇ ಮಾನವಿಯತೆ ಮೈಗೂಡಿಸಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಉಪದೇಶಿಸಿದರು.

ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಮಾತನಾಡಿ, ‘ಪರೀಕ್ಷೆಯಲ್ಲಿ ಮಕ್ಕಳು ಸಂಪಾದಿಸುವ ಅಂಕಗಳಿಗಿಂತ ಒಳ್ಳೆಯ ನಡತೆ ಮುಖ್ಯ. ನೈತಿಕತೆ, ಸದ್ವರ್ತನೆಗಳನ್ನು ಕಲಿಸುವುದೇ ಸರಿಯಾದ ವಿದ್ಯೆ’ ಎಂದು ತಿಳಿಸಿದರು.

‘ತಮ್ಮ ಯಶಸ್ಸಿನಲ್ಲಿ ತಂದೆ-ತಾಯಿ, ಗುರು-ಹಿರಿಯರ ಪಾತ್ರವಿದೆಂಬ ಕೃತಜ್ಞತೆಯಿರಬೇಕು. ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡ ರಣಧೀರರಾಗಬೇಕು ಭಾರತೀಯರು ಶುದ್ಧ ಚಾರಿತ್ರ್ಯವಂತರಾಗಿ ಪರಿಶ್ರಮಗಳಾಗಿ ವಿಶ್ವದಲ್ಲಿ ಪ್ರಜ್ಚವಲಿಸುವಂತಾಗಬೇಕು’ಎಂದರು.

ವಿ.ಟಿ. ಯು ಸಂಯೋಜಕರಾದ ಬಸವರಾಜ ಗಾದಗಿ ಕಾರ್ಯಕ್ರಮ ಉದ್ಘಾಟಿಸಿದರು. ಗಂಗಾಂಬಿಕೆ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖಂಡ ಪ್ರಕಾಶ ಟೊಣ್ಣೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದರು. ಸಮಾಜ ಸೇವಾ ಧುರೀಣ ಗುರುನಾಥ ಕೊಳ್ಳುರು ಅಧ್ಯಕ್ಷತೆ ವಹಿಸಿದ್ದರು.

ಪ್ರತಿಭಾ ಪುರಸ್ಕಾರ

ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ ದ್ವೀತಿಯ ವರ್ಷದಲ್ಲಿ ಶೇಕಡ 85 ಕ್ಕಿಂತ ಅಧಿಕ ಅಂಕ ಗಳಿಸಿದ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದವರನ್ನು ಸಹ ವಿಶೇಷವಾಗಿ ಸನ್ಮಾನಿಸಲಾಯಿತು.

ಲಿಂಗಾಕ್ಷಿ ಖೇಣಿಯವರ ವಚನ ನೃತ್ಯ ಗಮನ ಸೆಳೆಯಿತು. ಹಾವಯ್ಯಸ್ವಾಮಿ ಸ್ವಾಗತಿಸಿದದರು. ವಿಜಯಲಕ್ಷ್ಮೀ ಪಾಟೀಲ ನಿರೂಪಿಸಿದರು. ಶಿವಕುಮಾರ ಪಂಚಾಳರು ಮಕ್ಕಳಿಗೆ ವಚನ ಗಾಯನ ಕಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.