ADVERTISEMENT

ಹೋರಾಟ ವಕ್ಫ್ ಕಾಯ್ದೆ ವಿರುದ್ಧ, ಹಿಂದೂಗಳ ವಿರುದ್ಧವಲ್ಲ: ಮುಸ್ಲಿಮರ ರ್‍ಯಾಲಿ

ವಿವಿಧ ಧರ್ಮದ ಗುರುಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:37 IST
Last Updated 28 ಏಪ್ರಿಲ್ 2025, 13:37 IST
<div class="paragraphs"><p>ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ, ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಂಟಿ ಕ್ರಿಯಾ ಸಮಿತಿ ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ ರ್‍ಯಾಲಿನಲ್ಲಿ ಅಪಾರ ಸಂಖ್ಯೆಯ ಜನ ತ್ರಿವರ್ಣ ಧ್ವಜಗಳೊಂದಿಗೆ ಹೆಜ್ಜೆ ಹಾಕಿದರು</p></div>

ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ, ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಂಟಿ ಕ್ರಿಯಾ ಸಮಿತಿ ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ ರ್‍ಯಾಲಿನಲ್ಲಿ ಅಪಾರ ಸಂಖ್ಯೆಯ ಜನ ತ್ರಿವರ್ಣ ಧ್ವಜಗಳೊಂದಿಗೆ ಹೆಜ್ಜೆ ಹಾಕಿದರು

   

ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಬೀದರ್‌: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಹತ್ಯಾಕಾಂಡ ಖಂಡಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಂಡಿದ್ದರು.

ADVERTISEMENT

ನಗರದ ಚೌಬಾರ ಸಮೀಪದ ಜಾಮೀಯ ಮಸೀದಿ ಬಳಿ ಸೇರಿದ ಜನ ಅಲ್ಲಿಂದ ಚೌಬಾರ, ಮಹಮೂದ್‌ ಗಾವಾನ್‌ ವೃತ್ತ, ಹಳೆ ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಶಹಾಗಂಜ್‌ ಕಮಾನ, ಕ್ರಾಂತಿ ಗಣೇಶ ದೇವಸ್ಥಾನದ ಮೂಲಕ ಹಾದು ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸಮಾವೇಶಗೊಂಡರು.

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ತ್ರಿವರ್ಣ ಧ್ವಜ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರ, ಅಶೋಕ ಚಕ್ರ ಇರುವ ನೀಲಿ ಧ್ವಜ ಹಾಗೂ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಜಯಘೋಷ ಕೂಗಿದರು. ಕೆಲವರು ಕೈಗೆ ಕಪ್ಪು ಪಟ್ಟಿ ಧರಿಸಿದರೆ, ಮತ್ತೆ ಕೆಲವರು ಕಪ್ಪು ಬಣ್ಣದ ಟೀ ಶರ್ಟ್‌ ಧರಿಸಿ ಭಾಗವಹಿಸಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು. ವಕ್ಫ್‌ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಹಾಗೂ ಪಹಲ್ಗಾಮ್‌ನಲ್ಲಿ ಹಿಂದೂಗಳ ಹತ್ಯೆ ಮಾಡಿದವರನ್ನು ಬಂಧಿಸಿ, ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಪ್ರತ್ಯೇಕವಾಗಿ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದರು. ಬಳಿಕ ಮುಸ್ಲಿಂ ಹಾಗೂ ಇತರೆ ಧರ್ಮದ ಗುರುಗಳು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ, ‘ವಕ್ಫ್‌ ತಿದ್ದುಪಡಿ ಕಾಯ್ದೆ ಒಂದು ಸಮುದಾಯದ ವಿರುದ್ಧವಾಗಿದೆ. ಇದು ಕಾನೂನುಬಾಹಿರ. ಇದನ್ನು ಹಿಂಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ. ನಮ್ಮ ಹೋರಾಟ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಹೊರತು ಹಿಂದೂಗಳ ವಿರುದ್ಧವಲ್ಲ’ ಎಂದು ಸ್ಪಷ್ಟಪಡಿಸಿದರು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಬು ತಬ್ಲೀಬ್‌ ರೆಹಮಾನಿ ಮಾತನಾಡಿ, ವಕ್ಫ್‌ ತಿದ್ದುಪಡಿ ಕಾಯ್ದೆ ಹಿಂಪಡೆಯಲೇಬೇಕು. ಕೇಂದ್ರ ಎಲ್ಲಿಯವರೆಗೆ ಹಿಂಪಡೆಯುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ನಡೆಸಲಾಗುವುದು. ನಮ್ಮ ಹೋರಾಟವಿರುವುದು ಕೇಂದ್ರ ಸರ್ಕಾರದ ವಿರುದ್ಧ ಹಿಂದೂಗಳ ವಿರುದ್ಧವಲ್ಲ ಎಂದರು.

ನಮ್ಮ ಪೂರ್ವಜರ ಒಂದಿಂಚೂ ಜಮೀನು ಬೇರೆಯವರಿಗೆ ಬಿಟ್ಟುಕೊಡಲು ಅವಕಾಶ ನೀಡುವುದಿಲ್ಲ. ವಕ್ಫ್‌ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಸಂಸತ್ತಿನಲ್ಲೂ ಇದರ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.

ಸಚಿವ ರಹೀಂ ಖಾನ್‌ ಮಾತನಾಡಿ, ಮುಸ್ಲಿಂರಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಬಡವರನ್ನು ಮೇಲೆ ತರಲು ಕೆಲ ಸಿರಿವಂತರು ದೇವರ ಹೆಸರಿನಲ್ಲಿ ದಾನ ಮಾಡಿದ್ದಾರೆ. ಅದಕ್ಕೆ ವಕ್ಫ್‌ ಎಂದು ಕರೆಯುತ್ತಾರೆ. ಕೆಲವರು ಹಣ, ಮತ್ತೆ ಕೆಲವರು ಜಮೀನು ಹೀಗೆ ಬಗೆಬಗೆಯ ದಾನ ಕೊಟ್ಟಿದ್ದಾರೆ. ಸರ್ಕಾರ ಮಾಡದ ಕೆಲಸವನ್ನು ಅವರು ಮಾಡಿದ್ದಾರೆ. ಆದರೆ, ಅದನ್ನು ಕಿತ್ತುಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಮುಖಂಡ ಇಸಾಮುದ್ದೀನ್‌ ಮುಜಾಹಿದ್ದೀನ್‌ ಮಾತನಾಡಿ, ನಮ್ಮ ಪೂರ್ವಜರ ಆಸ್ತಿ ಕಬಳಿಸಲು ಮುಂದಾಗಿರುವುದು ಎಷ್ಟು ಸರಿ? ಬರುವ ದಿನಗಳಲ್ಲಿ ಮುಸ್ಲಿಮೇತರರ ಆಸ್ತಿಗೂ ಕೈಹಾಕಬಹುದು. ಹೀಗಾಗಿ ಎಲ್ಲರೂ ಎಚ್ಚರಗೊಳ್ಳಬೇಕು ಎಂದರು.

ವಕ್ಫ್‌ ಮಂಡಳಿಗೆ ಅನ್ಯ ಧರ್ಮೀಯರನ್ನು ಸದಸ್ಯರಾಗಿ ಮಾಡುವ ನಿರ್ಧಾರವೇ ಸರಿಯಲ್ಲ. ಕಾಯ್ದೆಯಲ್ಲಿ 40 ತಿದ್ದುಪಡಿಗಳನ್ನು ಮಾಡಿದ್ದಾರೆ. ಈ ಕಾನೂನು ತರುವುದರ ಹಿಂದಿನ ಹುನ್ನಾರ ಅರ್ಥವಾಗುತ್ತದೆ ಎಂದು ಹೇಳಿದರು.

ಜಂಟಿ ಕ್ರಿಯಾ ಸಮಿತಿಯ ಸಂಯೋಜಕ ಅಬ್ದುಲ್‌ ಖದೀರ್‌, ಜಂಟಿ ಸಂಯೋಜಕರಾದ ಸರ್ಫರಾಜ್‌ ಹಾಶ್ಮಿ, ಮನ್ಸೂರ್‌ ಅಹಮ್ಮದ್‌ ಖಾದ್ರಿ, ಡಾ. ಶಹಾ ಜಿಯಾ ಉಲ್‌ ಇಸ್ಲಾಂ, ಮುಹಮ್ಮದ್‌ ಯುಸುದ್ದೀನ್‌, ಮುಹಮ್ಮದ್‌ ನಿಜಾಮುದ್ದೀನ್‌, ನಗರಸಭೆ ಅಧ್ಯಕ್ಷ ಮುಹಮ್ಮದ್‌ ಗೌಸ್‌, ಬಾಬುರಾವ್‌ ಪಾಸ್ವಾನ್‌, ಮಾರುತಿ ಬೌದ್ಧೆ, ಬಸವರಾಜ ಮಾಳಗೆ, ಓಂಪ್ರಕಾಶ ರೊಟ್ಟೆ, ಜಗದೀಶ್ವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಹಿಂದೂಗಳ ಹತ್ಯೆಗೆ ಖಂಡನೆ; ಎರಡು ನಿಮಿಷ ಮೌನಾಚರಣೆ

ವಕ್ಫ್‌ ವಿರುದ್ಧದ ಪ್ರತಿಭಟನಾ ರ್‍ಯಾಲಿ ಮುಗಿದ ನಂತರ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು, ಹಿಂದೂಗಳು ಸೇರಿದಂತೆ ಇತರೆ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಲಾಯಿತು. ಎರಡು ನಿಮಿಷ ಮೌನ ಆಚರಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ, ಅವರ ಹತ್ಯೆ ಮಾಡಿದ್ದು ಹೀನ ಕೃತ್ಯ. ಘಟನೆಯಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಭಗವಂತ ಶಾಂತಿ ನೀಡಬೇಕು. ಮೃತರ ಕುಟುಂಬದವರ ದುಃಖದಲ್ಲಿ ನಾವು ಜೊತೆಗಿದ್ದೇವೆ. ಈ ಕೃತ್ಯ ಎಸಗಿದವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಜರುಗಿಸಬೇಕೆಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿ ಒತ್ತಾಯಿಸಲಾಯಿತು.

‘ತಿರಂಗಾ ನಮಗಾಗಿ, ಅದರ ಕೋಲು ಉಗ್ರರಿಗೆ’

‘ಪಾಕಿಸ್ತಾನದ ಭಯೋತ್ಪಾದಕರೇ ಇದು ನೋಡಿ.. ಈ ದೇಶದ ತಿರಂಗಾ ನಮಗಾಗಿ, ಅದರ ಕೋಲು ನಿಮಗಾಗಿ (ಉಗ್ರರಿಗಾಗಿ). ಕೇಂದ್ರ ಸರ್ಕಾರವು ಪಾಕಿಸ್ತಾನ, ಚೀನಾದವರನ್ನು ನಿಭಾಯಿಸಲು ಆಗದಿದ್ದರೆ ನಮಗೆ ಕಳಿಸಿಕೊಡಿ’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಬು ತಬ್ಲೀಬ್‌ ರೆಹಮಾನಿ ಹೇಳಿದರು.

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ದೇಶದ ಅಖಂಡತೆಗೆ ಸವಾಲಾಗಿದೆ. ನಮ್ಮ ದೇಶದ ವಿಷಯ ಬಂದರೆ ಪ್ರತಿಯೊಬ್ಬರ ಮನೆಯಿಂದ ಒಬ್ಬ ಸಿಪಾಯಿ ಹೊರಗೆ ಬರುತ್ತಾನೆ. ಪಾಕಿಸ್ತಾನ, ಚೀನಾದವರು ಮುಸ್ಲಿಮರ ರೂಪದಲ್ಲಿ ದುಷ್ಕೃತ್ಯ ನಡೆಸುತ್ತಿದ್ದಾರೆ. ಜನರ ಹೆಸರು ಕೇಳಿ ಹತ್ಯೆ ಮಾಡಿರುವುದು ಹೊಸ ಘಟನೆ. ಇದು ಖಂಡನಾರ್ಹ ಎಂದರು.

‘ಮುಸ್ಲಿಮರಿಗೆ ಕಷ್ಟ ಕೊಡಬೇಡಿ’

‘ಮುಸ್ಲಿಮರಿಗೆ ಅನಗತ್ಯವಾಗಿ ಕಷ್ಟ ಕೊಡಬೇಡಿ. ಕೇಂದ್ರದ ಬಿಜೆಪಿ ಸರ್ಕಾರ ಹಿಜಾಬ್‌, ಮುಸ್ಲಿಮರ ಆಹಾರ ಪದ್ಧತಿ, ಶಿಕ್ಷಣ ಹೀಗೆ ಒಂದಿಲ್ಲೊಂದು ಕಾರಣದಿಂದ ಮುಸ್ಲಿಮರಿಗೆ ಕಿರಿಕಿರಿ ಕೊಡುತ್ತಿದೆ. ನಮ್ಮ ಹಕ್ಕಿಗಾಗಿ ಜೀವ ಕೊಡಲು ಸಿದ್ಧರಿದ್ದೇವೆ. ನಾವು ಸಂಸತ್ತಿನ ಒಳಗೆ ಹಾಗೂ ಹೊರಗೆ ಎಲ್ಲ ಕಡೆಗಳಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಡುತ್ತೇವೆ. ನಮ್ಮ ಪಕ್ಷ ಕೂಡ ಜನರೊಂದಿಗೆ ಇರಲಿದೆ’ ಎಂದು ಪೌರಾಡಳಿತ ಮತ್ತು ಹಜ್‌ ಖಾತೆ ಸಚಿವ ರಹೀಂ ಖಾನ್‌ ಆಶ್ವಾಸನೆ ನೀಡಿದರು.

ಕೇಂದ್ರ ಸರ್ಕಾರಕ್ಕೆ ರೈತರು, ಯುವಕರು, ಮಹಿಳೆಯರ ಬದುಕಿನ ಚಿಂತೆಯಿಲ್ಲ. ಉದ್ದೇಶಪೂರ್ವಕವಾಗಿ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದಿದೆ. ಜೊತೆಗೆ ಅನೇಕ ಮುಸ್ಲಿಂ ಮುಖಂಡರನ್ನು ತುಳಿಯಲು ಪ್ರಯತ್ನಿಸುತ್ತಿದೆ. ನೀವು ಎಷ್ಟು ತುಳಿದರೂ ಅಷ್ಟೇ ಸಂಖ್ಯೆಯಲ್ಲಿ ಪುನಃ ಎದ್ದು ಬರುತ್ತಾರೆ ಎಂದು ಹೇಳಿದರು.

ನಮ್ಮದು ಶಾಂತಿಯುತ ಧರ್ಮ. ಆದರೆ, ನಮಗೆ ಕಷ್ಟಕೊಟ್ಟರೆ ನಾವು ನಿಮ್ಮನ್ನು ಅಧಿಕಾರದಿಂದ ಮನೆಗೆ ಕಳಿಸುತ್ತೇವೆ.
–ಅಬು ತಬ್ಲೀಬ್‌ ರೆಹಮಾನಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಮುಸ್ಲಿಮರು ತಮ್ಮ ಹಕ್ಕಿಗಾಗಿ ಜೀವ ಕೊಡಲು ಸಿದ್ಧರಿದ್ದಾರೆ. ಆದರೆ, ಎಂದೂ ಯಾರ ಎದುರು ತಲೆಬಾಗುವುದಿಲ್ಲ.
–ಇಸಾಮುದ್ದೀನ್‌ ಮುಜಾಹಿದ್ದೀನ್‌, ಮುಸ್ಲಿಂ ಸಮಾಜದ ಮುಖಂಡ
ವಕ್ಫ್‌ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
–ಜ್ಞಾನಿ ದರ್ಬಾರ ಸಿಂಗ್‌, ಸಿಖ್‌ ಧರ್ಮದ ಮುಖಂಡ
ವಕ್ಫ್‌ ಆಸ್ತಿ ರಕ್ಷಣೆಗೆ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಇದು ಕಾನೂನುಬಾಹಿರವಾದ ಕಾಯ್ದೆ.
–ಭಂತೆ ಜ್ಞಾನಸಾಗರ, ವೈಶಾಲಿನಗರ ಆಣದೂರ
ವಕ್ಫ್‌ ತಿದ್ದುಪಡಿ ಕಾಯ್ದೆ ಒಂದು ನಿರ್ದಿಷ್ಟ ಧರ್ಮದ ವಿರುದ್ಧವಾದುದು. ರಾಜಕೀಯ ದುರುದ್ದೇಶ ಇದರಲ್ಲಿದ್ದು, ಖಂಡನಾರ್ಹ.
–ಫಾದರ್‌ ಕ್ಲಾರಿಯೋ, ಕ್ರೈಸ್ತ ಧರ್ಮದ ಪಾದ್ರಿ
ಕಾಶ್ಮೀರದಲ್ಲಿ ದುಷ್ಕೃತ್ಯ ಎಸಗಿದ ಭಯೋತ್ಪಾದಕರು ಯಾವುದೇ ಧರ್ಮಕ್ಕೆ ಸೇರಿರಲಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು.
–ರಹೀಂ ಖಾನ್‌, ಪೌರಾಡಳಿತ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.