ADVERTISEMENT

ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸೇವಾ ಭದ್ರತೆ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:54 IST
Last Updated 24 ಸೆಪ್ಟೆಂಬರ್ 2020, 14:54 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಬೀದರ್‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಬೀದರ್‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು   

ಬೀದರ್‌: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೆಲವರು 20-25 ವರ್ಷಗಳಿಂದ ‘ಅತಿಥಿ’ಗಳಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸಕ್ಕೆ ಭದ್ರತೆ ಇಲ್ಲವಾಗಿದೆ. ಲಾಕ್‍ಡೌನ್ ಸಮಯದಲ್ಲಿ ತಮ್ಮ ಕೈಯಿಂದಲೇ ಖರ್ಚನ್ನು ಭರಿಸಿ ಆನ್‍ಲೈನ್ ತರಗತಿಗಳನ್ನೂ ನಡೆಸಿದ್ದಾರೆ. ಯುಜಿಸಿಯು ಮಾರ್ಚ್ 24ರಿಂದ ಜುಲೈ 31ರವರೆಗಿನ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕೆಂದು ನಿರ್ದೇಶನ ನೀಡಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಮೌನ ವಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

2019ರ ಜನವರಿಯಲ್ಲಿ ಯುಜಿಸಿ ಸುತ್ತೋಲೆಯು ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ ₹ 1,500 ಅಥವಾ ಮಾಸಿಕ ₹ 50 ಸಾವಿರ ವರೆಗೆ ವೇತನ ನಿಗದಿ ಮಾಡುವಂತೆ ನಿರ್ದೇಶನ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೆಟ್, ಸೆಟ್ ಅಥವಾ ಪಿ.ಎಚ್‍ಡಿ ಆಗಿರುವವರಿಗೆ ಮಾಸಿಕ ₹13 ಸಾವಿರ, ಉಳಿದವರಿಗೆ ₹ 11 ಸಾವಿರ ಕೊಡುತ್ತಿದೆ. ಅಷ್ಟೇ ಅಲ್ಲ ಐದು ತಿಂಗಳಿಂದ ವೇತನವನ್ನೂ ಪಾವತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದಾಗಿ ಅನೇಕ ಅತಿಥಿ ಉಪನ್ಯಾಸಕರು ತೊಂದರೆ ಒಳಗಾಗಿದ್ದಾರೆ. ಗಂಭೀರ ಕಾಯಿಲೆಗಳಿಂದ ಆಸ್ಪತ್ರೆಗಳಿಗೆ ತೋರಿಸಲಾದೇ ಸಾವು ಉಂಟಾದ ಪ್ರಕರಣಗಳು ಸಹ ಬೆಳಕಿಗೆ ಬಂದಿವೆ. ಇನ್ನೂ ಹಲವರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಬದುಕು ಸಾಗಿಸಲು ಹೆಣಗುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಕೆಲ ಉಪನ್ಯಾಸಕರು ತಳ್ಳುವ ಗಾಡಿಯಲ್ಲಿ ಹಣ್ಣು-ಹಂಪಲು, ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರಿಗೆ ವೇತನದಲ್ಲಿ ತಾರತಮ್ಯ ಮಾಡುತ್ತಿದೆ. ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಮಾರ್ಚ್ 24ರಿಂದ ಜುಲೈ 31ರವರೆಗಿನ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ವೇತನ ನೀಡಬೇಕೆಂದು ನಿರ್ದೇಶನ ನೀಡಿದೆ. ಆದರೆ ರಾಜ್ಯ ಸರ್ಕಾರ ವೇತನ ಬಿಡುಗಡೆ ಮಾಡುತ್ತಿಲ್ಲ ಎಂದೂ ದೂರಿದರು

ಈ ಶೈಕ್ಷಣಿಕ ವರ್ಷಕ್ಕೆ ಆರ್ಥಿಕ ಮಿತವ್ಯಯದ ನೆಪ ಮುಂದು ಮಾಡಿಕೊಂಡು ಸರ್ಕಾರವು ಅತಿಥಿ ಉಪನ್ಯಾಸಕರನ್ನು ಮುಂದುವರೆಸದೆ ಇರುವ ಅಥವಾ ಕೈಬಿಡುವ ಬಗ್ಗೆ ಮಾತು ಕೇಳಿಬರುತ್ತಿದೆ. ಇದು ಅವರನ್ನು ಇನ್ನಷ್ಟು ಹತಾಶರನ್ನಾಗಿಸಿದೆ. ಸರ್ಕಾರವು ಗಾಯದ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕೈಹಾಕಬಾರದು ಎಂದು ಮನವಿ ಮಾಡಿದರು.

ಅತಿಥಿ ಉಪನ್ಯಾಸಕರ ಬಾಕಿ ವೇತನವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ, ರಾಜ್ಯ ಸಂಯೋಜಕ ಎಂ.ಉಮಾದೇವಿ, ಮಾರುತಿ ಡಾಂಗೆ, ಮಹೇಶ ನಾಡಗೌಡ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.