ADVERTISEMENT

ಪಿಯು ಫಲಿತಾಂಶ: 18ನೇ ಸ್ಥಾನಕ್ಕೆ ಬಡ್ತಿ

ಪರೀಕ್ಷೆಗೆ ಹಾಜರಾದ ಜಿಲ್ಲೆಯ 14,285 ವಿದ್ಯಾರ್ಥಿಗಳಲ್ಲಿ 9,229 ಉತ್ತೀರ್ಣ

ಚಂದ್ರಕಾಂತ ಮಸಾನಿ
Published 14 ಜುಲೈ 2020, 15:20 IST
Last Updated 14 ಜುಲೈ 2020, 15:20 IST
ಬೀದರ್‌ನ ಡಿಟಿಪಿ ಸೆಂಟರ್‌ನಲ್ಲಿ ಪಿಯು ಫಲಿತಾಂಶ ವೀಕ್ಷಿಸಿದ ವಿದ್ಯಾರ್ಥಿಗಳು
ಬೀದರ್‌ನ ಡಿಟಿಪಿ ಸೆಂಟರ್‌ನಲ್ಲಿ ಪಿಯು ಫಲಿತಾಂಶ ವೀಕ್ಷಿಸಿದ ವಿದ್ಯಾರ್ಥಿಗಳು   

ಬೀದರ್: ಪದವಿಪೂರ್ವ ಶಿಕ್ಷಣ ಮಂಡಳಿ ಸ್ಥಾಪನೆಯಾದಾಗಿನಿಂದಲೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಫಲಿತಾಂಶದಲ್ಲಿ ಬೀದರ್ ಜಿಲ್ಲೆ, ರಾಜ್ಯದ ಮೊದಲ 20 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಆದರೆ, ಈ ಬಾರಿ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.

ಪ್ರತಿ ಬಾರಿ ಪಿಯುಸಿ ಫಲಿತಾಂಶ ಪ್ರಕಟವಾದಾಗ ಕೊನೆಯ ಸಾಲಿನಿಂದಲೇ ಜಿಲ್ಲೆಯ ಸ್ಥಾನವನ್ನು ನೋಡಬೇಕಾಗುತ್ತಿತ್ತು. ಇಲಾಖೆ ಅಧಿಕಾರಿಗಳು ಫಲಿತಾಂಶ ಸುಧಾರಣೆಗೆ ವರ್ಷ ಪೂರ್ತಿ ಹಮ್ಮಿಕೊಂಡ ಕಾರ್ಯಕ್ರಮ, ಉಪನ್ಯಾಸ ವರ್ಗದ ಸಮರ್ಪಣಾ ಭಾವ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಈ ಬಾರಿ ಜಿಲ್ಲೆಗೆ ಗೌರವ ಸಂದಿದೆ.

ಪಿಯುಸಿ ಫಲಿತಾಂಶದಲ್ಲಿ 2015ರಲ್ಲಿ ಬೀದರ್, ರಾಜ್ಯದ ಜಿಲ್ಲೆಗಳ ಸಾಲಿನಲ್ಲಿ 30ನೇ ಶೇ 54.40 ಸ್ಥಾನದಲ್ಲಿ ಇತ್ತು. 2016ರಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದು 27ನೇ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು. 2017ರಲ್ಲಿ ಶೇ 42.05 ರಷ್ಟು ಫಲಿತಾಂಶದೊಂದಿಗೆ ಕೊನೆ ಸ್ಥಾನದಲ್ಲಿತ್ತು. 2018 ರಲ್ಲಿ 31 ಹಾಗೂ 2019ರಲ್ಲಿ 30ನೇ ಸ್ಥಾನ ಪಡೆದುಕೊಂಡಿತ್ತು.

ADVERTISEMENT

ಪಿಯುಸಿ ಪರೀಕ್ಷೆ ಮುಗಿಯುವ ಹಂತದಲ್ಲಿದ್ದಾಗಲೇ ಜಿಲ್ಲೆಗೆ ಕೊರೊನಾ ಸೋಂಕು ಬಂದು ಅಪ್ಪಳಿಸಿತು. ಬಹಳ ತಡ ಮಾಡಿ ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಸಲಾಗಿತ್ತು. ಎಲ್ಲ ಅಡ್ಡಿ ಆತಂಕಗಳ ನಡುವೆಯೂ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.

‘ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಜಿಲ್ಲೆಯ ಉಪನ್ಯಾಸಕರಿಗೆ ಪುನಃಶ್ಚೇತನ ಕಾರ್ಯಕ್ರಮ, ತಾಲ್ಲೂಕು ಮಟ್ಟದಲ್ಲಿ ಉಪನ್ಯಾಸಕರಿಗೆ ತರಬೇತಿ ಆಯೋಜಿಸಲಾಗಿತ್ತು. ಪ್ರಾಂಶುಪಾಲರ ಸಂಘದಿಂದ ಪರೀಕ್ಷಾ ಮಾರ್ಗದರ್ಶಿ ಕಿರುಹೊತ್ತಿಗೆ ಹೊರ ತರಲಾಗಿತ್ತು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಮೇಶ ಬೆಜಗಂ ತಿಳಿಸಿದರು.

‘ಪ್ರತಿ ವಿಷಯಕ್ಕೂ ಒಂದು ಉಪನ್ಯಾಸಕರ ವೇದಿಕೆ ರಚಿಸಿ ಪರಸ್ಪರ ವಿಷಯ ವಿನಿಮಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೆಲವು ಕಡೆ ನಾನೇ ಕಾಲೇಜಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳಿಗೆ ಪಾಠ ಮಾಡಿದೆ. ಇಂತಹ ಅನೇಕ ಸಣ್ಣಪುಟ್ಟ ಅಂಶಗಳು ಫಲಿತಾಂಶ ಸುಧಾರಣೆಗೆ ನೆರವಾದವು’ ಎಂದು ಸಂತಸ ಹಂಚಿಕೊಂಡರು.

‘ಪದವಿಪೂರ್ವ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಿ ಕಾಲಕಾಲಕ್ಕೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಕಾರಣ ಈ ಬಾರಿ ಜಿಲ್ಲೆಗೆ ಉತ್ತಮ ಫಲಿತಾಂಶ ದೊರಕಿದೆ’ ಎಂದು ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಬಸವರಾಜ ಬಲ್ಲೂರ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.