ADVERTISEMENT

ಭಾಲ್ಕಿ: ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಭೀತಿ

ಎಲ್ಲೆಡೆ ಹರಿಯುತ್ತಿರುವ ಚರಂಡಿ ನೀರು, ಸೊಳ್ಳೆಗಳ ಕಾಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 5:41 IST
Last Updated 2 ಜೂನ್ 2025, 5:41 IST
ಭಾಲ್ಕಿಯ ಹಳೇ ಪಟ್ಟಣದ ಸಾರಾಯಿ ಓಣಿಯಲ್ಲಿ ಚರಂಡಿ ನೀರು ರಸ್ತೆ ಮೇಲೆ, ದೇವಸ್ಥಾನ ಸುತ್ತ ಹರಿಯುತ್ತಿರುವುದನ್ನು ತೋರಿಸುತ್ತಿರುವ ನಿವಾಸಿ
ಭಾಲ್ಕಿಯ ಹಳೇ ಪಟ್ಟಣದ ಸಾರಾಯಿ ಓಣಿಯಲ್ಲಿ ಚರಂಡಿ ನೀರು ರಸ್ತೆ ಮೇಲೆ, ದೇವಸ್ಥಾನ ಸುತ್ತ ಹರಿಯುತ್ತಿರುವುದನ್ನು ತೋರಿಸುತ್ತಿರುವ ನಿವಾಸಿ   

ಭಾಲ್ಕಿ: ಹಳೇ ಪಟ್ಟಣದ ಸಾರಾಯಿ ಗಲ್ಲಿಯ ಹನುಮಾನ ನಗರದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿರುವುದರಿಂದ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭಯ ಮನೆ ಮಾಡಿದೆ.

ಬ್ಲೀಚಿಂಗ್ ಪೌಡರ್, ಫಾಗಿಂಗ್ ಸಿಂಪರಣೆ ಮಾಡದೆ ಇರುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಮನೆಗಳ ಬಾಗಿಲು ಸದಾ ಮುಚ್ಚಿಡುವಂತಹ ಸ್ಥಿತಿ ನಿರ್ಮಾಣವಾಗಿದೆ.

‘ನಮ್ಮ ಓಣಿಯಲ್ಲಿರುವ ಚರಂಡಿಗಳು ಸುಮಾರು ತಿಂಗಳುಗಳಿಂದ ಸ್ವಚ್ಛತೆ ಭಾಗ್ಯ ಕಂಡಿಲ್ಲ. ಹಾಗಾಗಿ ಎಲ್ಲ ಮನೆಗಳ ಹೊಲಸು ನೀರು ಮತ್ತು ಈಚೆಗೆ ನಿರಂತರ ಸುರಿದ ಮಳೆ ನೀರು ರಸ್ತೆಯ ತುಂಬ, ಹನುಮಾನ ದೇವಸ್ಥಾನದ ಸುತ್ತಲೂ ಹರಿಯುತ್ತಿರುವುದರಿಂದ ಜನರು ಓಡಾಡಲು ತುಂಬಾ ಕಷ್ಟ ಪಡುತ್ತಿದ್ದಾರೆ. ಇಂತಹ ಅಸ್ವಚ್ಛ ಸ್ಥಳವನ್ನು ದಾಟಿಕೊಂಡೇ ದೇವಸ್ಥಾನಕ್ಕೆ ತೆರಳಬೇಕಾದ ಅನಿವಾರ್ಯತೆ ನಮ್ಮದಾಗಿದೆ’ ಎಂದು  ನಿವಾಸಿಗಳಾದ ಕಲ್ಯಾಣರಾವ್ ಚಾಟೆ, ಗದಗು ಸ್ವಾಮಿ, ದತ್ತಾತ್ರಿ ಜಾಧವ್ ಅಳಲು ತೋಡಿಕೊಂಡರು.

ADVERTISEMENT

‘ಕಸಾಯಿ ಖಾನಾದ ಮಲಿನ ನೀರು, ದನಗಳ ರಕ್ತ ಚರಂಡಿ ಮೂಲಕವೇ ಹರಿದು ಹೋಗುತ್ತಿತ್ತು. ಚರಂಡಿಗಳು ತುಂಬಿರುವುದರಿಂದ ರಕ್ತ ಮಿಶ್ರಿತ ಹೊಲಸು ನೀರು ಎಲ್ಲೆಡೆ ಹರಿಯುತ್ತಿದ್ದು, ದುರ್ನಾತ ಮಿತಿಮೀರಿ ಸೂಸುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳಾದ ಕಾಲರಾ, ಡೆಂಗಿ, ಚಿಕೂನ್ ಗುನ್ಯ, ಟೈಫಾಯಿಡ್ ಸೇರಿದಂತೆ ಇತರ ರೋಗಗಳ ಭಯ ನಮ್ಮನ್ನು ಬಹುವಾಗಿ ಕಾಡುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆಯರು ತಿಳಿಸಿದರು.

‘ಈ ರಸ್ತೆ ಮೇಲೆ ಹಗಲು ಹೊತ್ತಿನಲ್ಲೂ ಸಂಚರಿಸಲಾಗುತ್ತಿಲ್ಲ. ಇನ್ನೂ ರಾತ್ರಿಯ ಓಡಾಟ ಅಂತೂ ತುಂಬಾ ಕಷ್ಟದ ಮಾತಾಗಿದೆ. ದಿನಪೂರ್ತಿ ಚರಂಡಿಯ ದುರ್ವಾಸನೆ ಕಾಲೊನಿ ನಿವಾಸಿಗಳಿಗೆ ಶಾಪದ ರೀತಿಯಲ್ಲಿ ಕಾಡುತ್ತಿದೆ. ಹನುಮಾನ ನಗರದ ಹಿಂಭಾಗದಲ್ಲಿರುವ ಸರ್ಕಾರಿ ಚಿಕಿತ್ಸಾ ಕೇಂದ್ರದ ಮುಂಭಾಗದಲ್ಲಿ ಅಸ್ವಚ್ಚತೆ ತಾಂಡವಾಡುತ್ತಿದೆ. ನಮ್ಮ ಸಮಸ್ಯೆ ಸಂಬಂಧ ಅನೇಕ ಸಾರಿ ಸಂಬಂಧಪಟ್ಟ ಜನಪ್ರತಿನಿಧಿ ಅಧಿಕಾರಿಗಳ ಗಮನಕ್ಕೂ ತಂದರೂ ಕೂಡ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ದಿನೇಶ್ ಭಾಂಗೆ, ಬಿ.ಮಂಜರಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಎಲ್ಲಾ ಚರಂಡಿಗಳು ಸೇರಿದಂತೆ ಆನಂದವಾಡಿ ರಸ್ತೆಯಲ್ಲಿರುವ ಬಟಾಳ (ಸ್ಮಶಾನ ಭೂಮಿ) ದವರೆಗಿನ ದೊಡ್ಡ ಚರಂಡಿಗಳು ಸ್ವಚ್ಛಗೊಳಿಸಬೇಕು. ಖಡಕೇಶ್ವರ ಮಂದಿರದಿಂದ ಹನುಮಾನ ದೇವಸ್ಥಾನದವರೆಗಿನ ಕಾರ್ಯ ನಿರ್ವಹಿಸದ ಬೀದಿದೀಪಗಳನ್ನು ದುರಸ್ತಿಗೊಳಿಸಬೇಕು. ಸೊಳ್ಳೆಗಳ ಹಾಗೂ ರೋಗ ನಿಯಂತ್ರಣಕ್ಕೆ ಬ್ಲೀಚಿಂಗ್ ಪೌಡರ್, ಫಾಗಿಂಗ್ ಸಿಂಪರಣೆಗೆ ಮುಂದಾಗಬೇಕು ಎಂಬುದು ಕಾಲೊನಿ ನಿವಾಸಿಗಳ ಒತ್ತಾಯವಾಗಿದೆ.

ಸುಮಾರು ದಿನಗಳಿಂದ ಚರಂಡಿಗಳು ತುಂಬಿ ಹರಿಯುತ್ತಿವೆ. ಸಂಬಂಧಪಟ್ಟವರು ಸ್ವಚ್ಛತೆಗೆ ಮುಂದಾಗದೆ ಇರುವುದರಿಂದ ಜನರ ಬದುಕು ಯಾತನೆಯಿಂದ ಕೂಡಿದೆ
ದತ್ತಾತ್ರಿ ಜಾಧವ್ ನಿವಾಸಿ
ಪೌರ ಕಾರ್ಮಿಕರ ಮುಷ್ಕರದಿಂದಾಗಿ ಸ್ವಚ್ಛತೆಗೆ ಹಿನ್ನೆಡೆಯಾಗಿದೆ.‌ ಎರಡು ದಿವಸಗಳಲ್ಲಿ ಸ್ವಚ್ಛತೆ ಮತ್ತು ವಿದ್ಯುತ್ ದೀಪಗಳ ದುರಸ್ತಿ  ಮಾಡಲಾಗುವುದು
ಸಂಗಮೇಶ ಕಾರಬಾರಿ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.