ADVERTISEMENT

ಸಾಹಿತ್ಯ ಓದಿ ಜ್ಞಾನ ವೃದ್ಧಿಸಿಕೊಳ್ಳಿ

ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 16:04 IST
Last Updated 9 ನವೆಂಬರ್ 2020, 16:04 IST
ಬೀದರ್‌ನಲ್ಲಿ ನಡೆದ ಬಹು ಭಾಷಾ ಕವಿಗೋಷ್ಠಿ ಹಾಗೂ ಧರಿನಾಡು ಕನ್ನಡ ಸಂಘದ ನಗರ ಸಮಿತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿದರು
ಬೀದರ್‌ನಲ್ಲಿ ನಡೆದ ಬಹು ಭಾಷಾ ಕವಿಗೋಷ್ಠಿ ಹಾಗೂ ಧರಿನಾಡು ಕನ್ನಡ ಸಂಘದ ನಗರ ಸಮಿತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿದರು   

ಬೀದರ್‌: ‘ಉದಯೋನ್ಮುಖ ಬರಹಗಾರರು ಹಿರಿಯ ಸಾಹಿತಿಗಳ ಕೃತಿಗಳನ್ನು ಓದುವ ಮೂಲಕ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಬರವಣಿಗೆಯನ್ನು ಇನ್ನಷ್ಟು ಹದ ಮಾಡಿಕೊಳ್ಳಬೇಕು’ ಎಂದು ಸಾಹಿತಿ ಶಂಭುಲಿಂಗ ವಾಲ್ದೊಡ್ಡಿ ಸಲಹೆ ನೀಡಿದರು.

ಇಲ್ಲಿಯ ಆರ್.ಎಚ್.ಬಲ್ಲೂರ ಪ್ರೌಢಶಾಲೆಯಲ್ಲಿ ಧರಿನಾಡು ಕನ್ನಡ ಸಂಘ ಕೇಂದ್ರ ಸಮಿತಿ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಸೋಮವಾರ ನಡೆದ ಬಹುಭಾಷಾ ಕವಿಗೋಷ್ಠಿ ಹಾಗೂ ಧರಿನಾಡು ಕನ್ನಡ ಸಂಘದ ನಗರ ಸಮಿತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಂದಿನ ಯುವ ಕವಿಗಳು ಹಿರಿಯ ಕವಿಗಳ ಸಾಹಿತ್ಯದ ಶೈಲಿ, ಶಬ್ದಗಳ ಬಳಕೆ ಹಾಗೂ ಸಾಹಿತ್ಯದ ಪ್ರಕಾರಗಳ ಬಗ್ಗೆಯೂ ಚೆನ್ನಾಗಿ ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ರನ್ನ, ಪಂಪ, ಕುವೆಂಪು, ದ.ರಾ.ಬೇಂದ್ರೆ ಮೊದಲಾದವರ ಸಾಹಿತ್ಯವು ಕನ್ನಡ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಅವರ ಸಾಹಿತ್ಯ ಯುವ ಸಾಹಿತಿಗಳಿಗೆ ಮಾರ್ಗದರ್ಶಿಯಾಗಿವೆ. ಜನಪರವಾದ ಹಾಗೂ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತಹ ಸಾಹಿತ್ಯ ರಚನೆಗೆ ಒತ್ತುಕೊಡಬೇಕು’ ಎಂದು ಹೇಳಿದರು.

ಸಾಹಿತಿ ಜಗದೇವಿ ದುಬುಲಗುಂಡೆ ಮಾತನಾಡಿ, ‘ಸ್ಥಳೀಯ ಸಾಹಿತಿಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಡುವ ಕೆಲಸ ಆಗಬೇಕಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರಿನಾಡು ಕನ್ನಡ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ಚಂದ್ರಪ್ಪ ಹೆಬ್ಬಾಳಕರ್‌ ಮಾತನಾಡಿ, ‘ಕವಿಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆಯೇ ಕವನ ವಾಚನ ಮಾಡಿದ್ದಾರೆ’ ಎಂದು ಹೇಳಿದರು.

ಶಾಂತಮ್ಮ ಬಲ್ಲೂರ ಸ್ವರಚಿತ ಚುಟುಕು, ಸಾಧನಾ ರಂಜೋಳಕರ್, ರಮೇಶ ಬಿರಾದಾರ, ಚನ್ನಮ್ಮ ವಲ್ಲೇಪುರೆ, ನಿಜಲಿಂಗ ರಗಟೆ, ವೀರಶೆಟ್ಟಿ ಮೂಲಗೆ, ಸ್ವರ್ಣಮಾಲಾ ದಿಕ್ಷೀತ್, ಪ್ರೊ.ಮಂಗಲಾ ಪಾಟೀಲ, ಚನ್ನಬಸವ ನೌಬಾದೆ, ಓಂಕಾರ ಪಾಟೀಲ, ಪುಷ್ಪಾ ಕನಕ, ಅವಿನಾಶ ಸೋನೆ, ದಿಲೀಪ ತರನಳ್ಳಿ, ಚೆನ್ನಪ್ಪ ಸಂಗೋಳಗೆ, ಪರಮ್ ಸಂಗ್ರಾಮ್ ಕವನ ವಾಚಿಸಿದರು.

ನಗರ ಸಮಿತಿಯ ಅಧ್ಯಕ್ಷರಾಗಿ ಬಾಬುರಾವ್ ಗಾದಗಿ, ಉಪಾಧ್ಯಕ್ಷರಾಗಿ ಡ್ಯಾನಿಯಲ್ ಮೇತ್ರೆ ಅಲಿಯಾಬಾದ್, ಸಹ ಕಾರ್ಯದರ್ಶಿಯಾಗಿ ಶಿವಾನಂದ ಅಟ್ಟೂರ್, ಸಂಚಾಲಕರಾಗಿ ಚೆನ್ನಬಸಪ್ಪ ನೌಬಾದೆ, ಅಂಬಿಕಾ ಸಿದ್ಧೇಶ್ವರೆ, ನಿಜಲಿಂಗ ರಗಟೆ ಅವರನ್ನು ಆಯ್ಕೆ ಮಾಡಲಾಯಿತು.

ನಗರ ಸಮಿತಿಯ ಅಧ್ಯಕ್ಷ ಬಾಬುರಾವ್ ಗಾದಗಿ, ಹಂಶಕವಿ ಹಾಗೂ ಡಾ.ಸ್ವಾತಿ ವಲ್ಲೇಪುರೆ ಅವರನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ಕಾದಂಬರಿಕಾರ ಸುಬ್ಬಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುರೇಖಾ ಚೊಂಡಿ ಸ್ವಾಗತ ಗೀತೆ ಹಾಡಿದರು. ನಿರ್ಹಂಕಾರ ಬಂಡಿ ನಿರೂಪಿಸಿದರು. ಶಿವಾನಂದ ಅಟ್ಟೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.