ADVERTISEMENT

‘ಡಿ’ ಗ್ರುಪ್‌, ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಯಾರೂ ಅರ್ಜಿ ಸಲ್ಲಿಸಲ್ಲ: ಖಂಡ್ರೆ

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆಯಲ್ಲಿ ಪರಿಸ್ಥಿತಿ ಬಿಚ್ಚಿಟ್ಟ ಸಚಿವರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:16 IST
Last Updated 9 ಜೂನ್ 2025, 14:16 IST
ಬೀದರ್‌ನಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿದರು
ಬೀದರ್‌ನಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿದರು   

ಬೀದರ್‌: ‘ಮಂಗಳೂರಿನಲ್ಲಿ ‘ಡಿ’ ಗ್ರುಪ್‌ ಹಾಗೂ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಯಾರೂ ಅರ್ಜಿ ಸಲ್ಲಿಸಲ್ಲ. ಆದರೆ, ನಮ್ಮಲ್ಲಿ ಪರಿಸ್ಥಿತಿ ಬಹಳ ಭಿನ್ನವಾಗಿದೆ. ‘ಡಿ’ ಗ್ರುಪ್‌ ಹುದ್ದೆಗಳಿಗೆ ನಿತ್ಯ ಜನ ಅಲೆದಾಡುತ್ತಾರೆ. ಹುದ್ದೆ ಕೊಡಿಸುವಂತೆ ಕೇಳುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆಯಲ್ಲಿ ಮೇಲಿನಂತೆ ಪರಿಸ್ಥಿತಿ ಬಿಚ್ಚಿಟ್ಟರು.

ಈ ಭಾಗದಲ್ಲಿ ಏನೇನು ಸಮಸ್ಯೆಯಿದೆ ಎಂಬುದನ್ನು ತಿಳಿದುಕೊಂಡು, ವಾಸ್ತವಾಂಶ ಆಧರಿಸಿ ವರದಿ ಕೊಡಬೇಕು. ಕೆಕೆಆರ್‌ಡಿಬಿ ಅನುದಾನದ ಮೂಲಕ ಶಾಲೆ, ಆಸ್ಪತ್ರೆಗಳ ಸುಧಾರಣೆ ಮಾಡಲಾಗುತ್ತಿದೆ. ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಆದರೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಗಳು ಆಗಬೇಕಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹುದ್ದೆಗಳ ಭರ್ತಿ ಆಗಬೇಕು. ಎಂಜಿನಿಯರಿಂಗ್‌ ಕಾಲೇಜು ಆಗಿ ಏಳೆಂಟು ವರ್ಷಗಳಾಗಿದೆ. ಇದುವರೆಗೆ ಮಂಜೂರಾದ ಹುದ್ದೆಗಳನ್ನು ತುಂಬಿಲ್ಲ. ಕ್ಯಾಥ್‌ಲ್ಯಾಬ್‌ ಆರಂಭಿಸಲಾಗುತ್ತಿದೆ. ಅಲ್ಲೂ ಇದೇ ಸಮಸ್ಯೆ ಇದೆ ಎಂದರು.

ADVERTISEMENT

ಕಲ್ಯಾಣ ಕರ್ನಾಟಕದಲ್ಲಿ 23 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಮುಂದಿನ ವರ್ಷ ಐದು ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ. ಒಳಮೀಸಲಾತಿ ಜಾರಿಗೆ ಬರುವ ತನಕ ಈ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂಬ ಬೇಡಿಕೆ ಇದೆ. ಆದರೆ, ಆರ್ಥಿಕ ಇಲಾಖೆಯು ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಕಡತಗಳಿಗೆ ಬೇಗ ಒಪ್ಪಿಗೆ ಕೊಟ್ಟು ವಿಲೇವಾರಿ ಮಾಡಿದರೆ ಸೂಕ್ತ. ಆದರೆ, ಆ ಕೆಲಸ ಆಗುತ್ತಿಲ್ಲ. ಶೈಕ್ಷಣಿಕ ಪ್ರಗತಿಯಾದರೆ ಆರ್ಥಿಕ ಪ್ರಗತಿ ಸಾಧ್ಯ ಎಂದು ಹೇಳಿದರು.

ಕ್ಯಾನ್ಸರ್‌ ಸೆಂಟರ್‌, ಟ್ರಾಮಾ ಕೇರ್‌ ಸೆಂಟರ್‌ ಜಿಲ್ಲೆಯಲ್ಲಿಲ್ಲ. ಅಪೌಷ್ಟಿಕತೆ ದೊಡ್ಡ ಮಟ್ಟದಲ್ಲಿದೆ. ಉದ್ಯೋಗಾವಕಾಶಗಳು ಇಲ್ಲ. ಕಲ್ಯಾಣ ಕರ್ನಾಟಕದ ಬಳ್ಳಾರಿ, ವಿಜಯನಗರದಲ್ಲಿ ಅದಿರಿನ ಗಣಿಗಳು, ಕಲಬುರಗಿಯಲ್ಲಿ ಸಿಮೆಂಟ್‌ ಕೈಗಾರಿಕೆಗಳಿವೆ. ಆದರೆ, ಬೀದರ್‌ ಜಿಲ್ಲೆ ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದೆ. ಶೇ 9ರಿಂದ 11ರಷ್ಟು ಪ್ರದೇಶ ಮಾತ್ರ ನೀರಾವರಿ ಹೊಂದಿದೆ. ಸೇವಾ ಕ್ಷೇತ್ರ, ಪ್ರವಾಸೋದ್ಯಮ ಬಲಪಡಿಸಬೇಕು. ಹೆಚ್ಚಿನ ಕೈಗಾರಿಕೆಗಳು ಬಂದರೆ ಉದ್ಯೋಗಾವಕಾಶಗಳು ಸಿಗುತ್ತವೆ. ಈ ನಿಟ್ಟಿನಲ್ಲಿ ಸಮಿತಿ ಗಂಭೀರವಾಗಿ ಗಮನಹರಿಸಿ ವರದಿ ಸಲ್ಲಿಸಿದರೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪೌರಾಡಳಿತ ಮತ್ತು ಹಜ್‌ ಖಾತೆ ಸಚಿವ ರಹೀಂ ಖಾನ್‌, ಸಮಿತಿ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್‌, ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ವಿಶಾಲ್‌ ಆರ್‌., ಸಂಗೀತಾ ಕಟ್ಟಿಮನಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಮ್‌.ಎಮ್‌. ಹಾಜರಿದ್ದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಸಭೆಯಲ್ಲಿ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿದರು

‘ನಾನು ಹೇಳಿದ್ದು ಸುಳ್ಳಾದರೆ ರಾಜೀನಾಮೆ’

‘ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರವು 98 ಗ್ರಾಮಗಳು 20 ತಾಂಡಾಗಳನ್ನು ಒಳಗೊಂಡಿದೆ. ನನ್ನ ಕ್ಷೇತ್ರಕ್ಕೆ ₹28 ಕೋಟಿ ಅನುದಾನ ಬಂದಿದೆ. ಇದರಲ್ಲಿ ಏನು ಮಾಡಲು ಸಾಧ್ಯ? ಜಿಲ್ಲೆಯ ಇತರೆ ವಿಧಾನಸಭಾ ಕ್ಷೇತ್ರಗಳಿಗೆ ₹65ರಿಂದ ₹70 ಕೋಟಿ ನೀಡಲಾಗಿದೆ. ನನ್ನ ಕ್ಷೇತ್ರಕ್ಕೆ ನ್ಯಾಯ ಕೊಡಿಸಬೇಕು. ಎರಡು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಒದ್ದಾಡುತ್ತಿರುವೆ. ಗ್ರಾಮಗಳಿಗೆ ಹೋದರೆ ಜನ ಪ್ರಶ್ನಿಸುತ್ತಾರೆ. ಒಂದುವೇಳೆ ನಾನು ಹೇಳಿದ್ದು ಸುಳ್ಳಾದರೆ ರಾಜೀನಾಮೆ ಕೊಡುವೆ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಹೇಳಿದರು. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ. ಗೋವಿಂದರಾವ್‌ ಸದಸ್ಯ ಕಾರ್ಯದರ್ಶಿ ವಿಶಾಲ್‌ ಆರ್‌. ಮಾತನಾಡಿ ಇನ್ನೂ ನಿಮ್ಮ ಅವಧಿ ಮೂರು ವರ್ಷಗಳಿದೆ. ಹೀಗೆ ಮಾಡಬೇಡಿ ಎಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಎಸ್ಸಿ/ಎಸ್ಟಿ ಹಿಂದುಳಿದವರು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಬೇಕೆಂದು ಮುಖ್ಯಮಂತ್ರಿಗೂ ಮನವಿ ಮಾಡಿದ್ದೇನೆ ಎಂದು ಬೆಲ್ದಾಳೆ ಹೇಳಿದರು.

ಜಿಲ್ಲಾಧಿಕಾರಿ ಕೊಟ್ಟ ಸಲಹೆಗಳೇನು?

* ತೆಲಂಗಾಣದ ಜಹೀರಾಬಾದ್‌ ಸ್ಯಾಟ್‌ಲೈಟ್‌ ಟೌನ್‌ ಆಗಿ ಅಲ್ಲಿನ ಸರ್ಕಾರ ಅಭಿವೃದ್ಧಿಪಡಿಸುತ್ತಿದೆ. ನಮ್ಮ ಭಾಗದಲ್ಲಿ ವಿಶೇಷ ಆರ್ಥಿಕ ವಲಯವಾದರೆ (ಎಸ್‌ಇಝಡ್‌) ಸ್ಥಳೀಯರಿಗೆ ಅನುಕೂಲ.

* ಬೃಹತ್‌ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಬೇಕು.

* ಬೀದರ್‌ ಕೋಟೆಯನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಬೇಗ ಅನುಮತಿ ಕೊಡಿಸುವ ಕೆಲಸವಾಗಬೇಕು.

* ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಾಡಬೇಕು.

* ಬಿದ್ರಿ ಕಲೆಯ ಕ್ಲಸ್ಟರ್‌ ನಿರ್ಮಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.