ADVERTISEMENT

ಹೃದಯಾಘಾತವಾದ ಒಂದು ಗಂಟೆಯಲ್ಲಿ ಆಸ್ಪತ್ರೆಗೆ ದಾಖಲಿಸಿ: ಡಾ.ನಿತಿನ್‌ ಗುದಗೆ

ಗುದಗೆ ಆಸ್ಪತ್ರೆಯಲ್ಲಿ ಹೈಟೆಕ್‌ ಕ್ಯಾಥ್‌ಲ್ಯಾಬ್‌ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 15:33 IST
Last Updated 30 ಆಗಸ್ಟ್ 2021, 15:33 IST
ಬೀದರ್‌ನ ಗುದಗೆ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾದ ಹೈಟೆಕ್‌ ಕ್ಯಾಥ್‌ಲ್ಯಾಬ್‌ ಕುರಿತು ಹೃದ್ರೋಗ ತಜ್ಞ ಡಾ.ನಿತಿನ್‌ ಗುದಗೆ ಮಾಹಿತಿ ನೀಡಿದರು. ಡಾ.ಚಂದ್ರಕಾಂತ ಗುದಗೆ, ಡಾ.ಸಚಿನ್‌ ಗುದಗೆ ಇದ್ದಾರೆ
ಬೀದರ್‌ನ ಗುದಗೆ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾದ ಹೈಟೆಕ್‌ ಕ್ಯಾಥ್‌ಲ್ಯಾಬ್‌ ಕುರಿತು ಹೃದ್ರೋಗ ತಜ್ಞ ಡಾ.ನಿತಿನ್‌ ಗುದಗೆ ಮಾಹಿತಿ ನೀಡಿದರು. ಡಾ.ಚಂದ್ರಕಾಂತ ಗುದಗೆ, ಡಾ.ಸಚಿನ್‌ ಗುದಗೆ ಇದ್ದಾರೆ   

ಬೀದರ್‌: ಹೃದಯಾಘಾತವಾದ ವ್ಯಕ್ತಿಯನ್ನು ಒಂದು ಗಂಟೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೆ ಜೀವ ಉಳಿಸಲು ಸಾಧ್ಯವಿದೆ. ಹೀಗಾಗಿ ರೋಗಿಗಳಿಗೆ ಬೀದರ್‌ನಲ್ಲೇ ಚಿಕಿತ್ಸೆ ಕೊಡಲು ಗುದಗೆ ಅಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸಾ ವಿಧಾನವನ್ನು ಸಜ್ಜುಗೊಳಿಸಲಾಗಿದೆ ಎಂದು ಹೃದ್ರೋಗ ತಜ್ಞ ಡಾ.ನಿತಿನ್‌ ಗುದಗೆ ತಿಳಿಸಿದರು.

ಹೃದಯ ಸ್ತಂಭನವಾದ ರೋಗಿ ಹೈದರಾಬಾದ್ ಇಲ್ಲವೆ ಸೋಲಾಪುರದ ಹೈಟೆಕ್‌ ಆಸ್ಪತ್ರೆಗೆ ಹೋಗುವುದರಲ್ಲೇ ಸಮಯ ವ್ಯರ್ಥವಾಗಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಗುದಗೆ ಆಸ್ಪತ್ರೆಯಲ್ಲಿ ಲಭ್ಯವಿರುವ ಕಾರಣ ರೋಗಿಗಳಿಗೆ ಕಡಿಮೆ ಖರ್ಚಿನಲ್ಲೇ ಚಿಕಿತ್ಸೆ ದೊರೆಯಲಿದೆ’ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಹೃದಯ ಸಂಬಂಧಿ ಕಾಯಿಲೆಯಿಂದ ಸಾವಿನ ಅಂಚಿಗೆ ತಲುಪುವ ರೋಗಿಗೆ ಚಿಪ್ (ಕಾಂಪ್ಲೆಕ್ಸ್ ಹೈ ಇಂಟರ್‌ವೆನ್ಶನ್ ನ್ ಪ್ರೊಸಿಜೆರ್) ಎನ್‍ಜಿಓ ಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ನಮ್ಮ ಆಸ್ಪತ್ರೆಯಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

ADVERTISEMENT

ಮಂಗಳೂರಿನಲ್ಲಿ ಡಿ.ಎಂ. ಕಾರ್ಡಿಯಾಲಾಜಿ ಶಿಕ್ಷಣ ಮುಗಿಸಿ ಬೆಂಗಳೂರು ಹಾಗೂ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿದ್ದೇನೆ. ಎರಡು ವರ್ಷ ಚಿಕಿತ್ಸಾ ಅನುಭವ ಪಡೆದು ಬೀದರ್‌ ಜನರಿಗೆ ಸೇವೆ ಕೊಡಲು ಬಂದಿದ್ದೇನೆ ಎಂದರು.

ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದ ಬೀದರ್‌ ತಾಲ್ಲೂಕಿನ ಸಿಂದೋಲ್ ತಾಂಡಾದ ಗಣೇಶ ರಾಠೋಡಗೆ ಅಪರೂಪದ ಚಿಕಿತ್ಸೆ ನೀಡಿ ನಗುಮುಖದೊಂದಿಗೆ ಅವರು ಮನೆಗೆ ತೆರಳುವಂತೆ ಮಾಡಿದ ಶ್ರೇಯಸ್ಸು ನಮ್ಮದಾಗಿದೆ. ಭಾನುವಾರ ಆಯೋಜಿಸಿದ್ದ ಉಚಿತ ಹೃದ್ರೋಗ ತಪಾಸಣೆ ಶಿಬಿರದಲ್ಲಿ 150 ಜನ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಚಂದ್ರಕಾಂತ ಗುದಗೆ ಮಾತನಾಡಿ, ‘ಆಸ್ಪತ್ರೆಯಲ್ಲಿ ₹ 2.60 ಕೋಟಿ ವೆಚ್ಚದ ಜಪಾನ್‌ ಕಂಪನಿಯ ಹೈಟೆಕ್‌ ಕ್ಯಾಥ್‌ಲ್ಯಾಬ್ ಉಪಕರಣ ಅಳವಡಿಸಲಾಗಿದೆ. ಕಾರ್ಪೋರೇಟ್‌ ಆಸ್ಪತ್ರೆಗಳಲ್ಲಿ ಲಭ್ಯವಿರುವ ಎಲ್ಲ ತಂತ್ರಜ್ಞಾನ ಇಲ್ಲಿದೆ. ಚಿಕಿತ್ಸಾ ವೆಚ್ಚವೂ ಕಡಿಮೆ ಇದೆ’ ಎಂದರು.

ಸರ್ಕಾರದ ಆರೋಗ್ಯ ಕಾರ್ಡ್‌, ಹೆಲ್ತ್ ಇನ್ಶೂರೆನ್ಸ್‌ ಹಾಗೂ ಬಿಪಿಎಲ್‌ ಕಾರ್ಡ್‌ ಹೊಂದಿದವರು ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಡಾ.ಸಚಿನ್ ಗುದಗೆ, ಡಾ.ಮಹೇಶ ತೊಂಡಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.