ADVERTISEMENT

ಬೀದರ್: ಆಸ್ಪತ್ರೆಗೆ ಜಾಗ ನೀಡದ ಕಂದಾಯ ಇಲಾಖೆ

ಜಿಲ್ಲೆಯಲ್ಲಿ ಮೇಲ್ದರ್ಜೆಗೇರಲು ಸರತಿ ಸಾಲಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಚಂದ್ರಕಾಂತ ಮಸಾನಿ
Published 21 ಸೆಪ್ಟೆಂಬರ್ 2022, 19:30 IST
Last Updated 21 ಸೆಪ್ಟೆಂಬರ್ 2022, 19:30 IST
ಹುಲಸೂರ ಸಮುದಾಯ ಆರೋಗ್ಯ ಕೇಂದ್ರ
ಹುಲಸೂರ ಸಮುದಾಯ ಆರೋಗ್ಯ ಕೇಂದ್ರ   

ಬೀದರ್‌: ಹೊಸ ತಾಲ್ಲೂಕು ರಚನೆಯಾಗಿ ಐದು ವರ್ಷಗಳು ಕಳೆದಿವೆ. ಆರೋಗ್ಯ ಇಲಾಖೆ ವೈದ್ಯಕೀಯ ಸೇವೆ ವಿಸ್ತರಿಸಲು ಸಿದ್ಧತೆ ಮಾಡಿಕೊಂಡಿದ್ದರೂ ಕಂದಾಯ ಇಲಾಖೆಯು ಆಸ್ಪತ್ರೆಗಳ ನಿರ್ಮಾಣ ಹಾಗೂ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಜಾಗ ಮಂಜೂರು ಮಾಡಿಕೊಡಲು ಹಿಂದೇಟು ಹಾಕುತ್ತಿದೆ.

ಕಂದಾಯ ಇಲಾಖೆ ಪತ್ರ ವ್ಯವಹಾರದಲ್ಲಿ ಕಾಲಹರಣ ಮಾಡುತ್ತಿದೆ. ಗೋಮಾಳ ಜಾಗ ಅಲ್ಲಲ್ಲಿ ಅತಿಕ್ರಮಣಗೊಂಡಿವೆ. ಕಡೆಯ ಪಕ್ಷ ಸರ್ಕಾರದಿಂದ ಅನುಮತಿ ಪಡೆದು ಭೂಸ್ವಾಧೀನ ಮಾಡಿಕೊಂಡಿದ್ದರೂ ಇಷ್ಟೊತ್ತಿಗೆ ಹೊಸ ಆಸ್ಪತ್ರೆ ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಹೊಸ ತಾಲ್ಲೂಕು ಕೇಂದ್ರದ ಜನ ಇನ್ನಷ್ಟು ಖುಷಿಯಿಂದ ಸಂಭ್ರಮಿಸಲು ಸಾಧ್ಯವಾಗುತ್ತಿತ್ತು. ಆದರೆ, ಈವರೆಗೂ ಪ್ರಕ್ರಿಯೆ ಕಡತಗಳಲ್ಲೇ ಉಳಿದುಕೊಂಡಿದೆ.

‘2019ರಲ್ಲಿ ಹೈಕೋರ್ಟ್‌ ಮೊರೆ ಹೋಗಿ ಹೊಸ ತಾಲ್ಲೂಕುಗಳಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಜಿಲ್ಲಾಡಳಿತದ ನಿರಾಸಕ್ತಿಯ ಫಲವಾಗಿ ಕಡತಗಳು ಕಚೇರಿಗಳಲ್ಲೇ ಕೊಳೆಯುತ್ತಿವೆ’ ಎಂದು ಸಾಮಾಜಿಕ ಕಾರ್ಯಕರ್ತ ಔರಾದ್‌ ತಾಲ್ಲೂಕಿನ ಗುರುನಾಥ ವಡ್ಡೆ ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

‘ಹುಲಸೂರು, ಚಿಟಗುಪ್ಪ ಹಾಗೂ ಕಮಲನಗರದಲ್ಲಿ ಪ್ರಸ್ತುತ 30 ಹಾಸಿಗೆಗಳ ಆಸ್ಪತ್ರೆ ಇವೆ. 100 ಹಾಸಿಗೆಗಳ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಬೇಕಿದ್ದು, ಇದಕ್ಕೆ ₹30 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ
ಹೇಳುತ್ತಾರೆ.

‘ಚಿಟಗುಪ್ಪದಲ್ಲಿ ಮಾತ್ರ 5 ಎಕರೆ ಜಾಗ ದೊರಕಿದೆ. ಕಮಲನಗರ ಹಾಗೂ ಹುಲಸೂರಿನಲ್ಲಿ ಅಗತ್ಯವಿರುವಷ್ಟು ಜಾಗ ಲಭಿಸಿಲ್ಲ. ಹೀಗಾಗಿ ವಿಳಂಬವಾಗಿದೆ. ಕಂದಾಯ ಇಲಾಖೆಯವರು ಜಾಗ ಕೊಟ್ಟರೆ ಪ್ರಕ್ರಿಯೆ ಆರಂಭಿಸಲಾಗುವುದು. ಆಸ್ಪತ್ರೆ ಮೇಲ್ದರ್ಜೇರಿದರೆ ಅಲ್ಲಿ ಸ್ರ್ರೀರೋಗ ತಜ್ಞ, ಮಕ್ಕಳ ತಜ್ಞ ವೈದ್ಯ, ಅರವಳಿಕೆ ತಜ್ಞರು, ಹಿರಿಯ ವೈದ್ಯಾಧಿಕಾರಿ, ದಂತ ವೈದ್ಯ, ನೇತ್ರ ತಜ್ಞರನ್ನು ನೇಮಕ ಮಾಡಲಾಗುವುದು’ ಎಂದು ವಿವರಿಸುತ್ತಾರೆ.

8 ಪಿಎಚ್‌ಸಿಗಳು ಮೇಲ್ದರ್ಜೆಗೆ: ಔರಾದ್‌ ತಾಲ್ಲೂಕಿನ ಚಿಂತಾಕಿ, ಕಮಲನಗರ ತಾಲ್ಲೂಕಿನ ಜೋಳದಾಬಕಾ, ಹುಲಸೂರು ತಾಲ್ಲೂಕಿನ ಬೇಲೂರು, ಬಸವಕಲ್ಯಾಣ ತಾಲ್ಲೂಕಿನ ಮಂಠಾಳ, ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ, ಭಾಲ್ಕಿ ತಾಲ್ಲೂಕಿನ ಹಲಬರ್ಗಾ, ಚಿಟಗುಪ್ಪದ ತಾಲ್ಲೂಕಿನ ನಿರ್ಣಾ, ಬೀದರ್‌ ತಾಲ್ಲೂಕಿನ ಮನ್ನಳ್ಳಿ ಸೇರಿ ಜಿಲ್ಲೆಯ 8 ಪಿಎಚ್‌ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಆರೋಗ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಹೊಸದಾಗಿ ಹುಮನಾಬಾದ್ ತಾಲ್ಲೂಕಿನ ಚಂದನಹಳ್ಳಿ, ಘೋಡವಾಡಿ, ಬೇನ್‌ಚಿಂಚೋಳಿ, ಜಲಸಂಗಿ, ಬೆಳಕೇರಾ, ಬಸವಕಲ್ಯಾಣ ತಾಲ್ಲೂಕಿನ ನಿರಗುಡಿ, ಮೋರಖಂಡಿ, ಮಿರಕಲ್‌ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮಂಜೂರಾತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ
ಬಂದಿಲ್ಲ.

ಚಿಟಗುಪ್ಪ ಪಟ್ಟಣದ ನಿಜಾಮರ ಆಡಳಿತಾವಧಿಯಲ್ಲೇ ಜಿಲ್ಲಾ ಕೇಂದ್ರವಾಗಿತ್ತು. ಸರ್ಕಾರ ಇಲ್ಲಿಯ ಆರೋಗ್ಯ ಸೇವೆ ಮೇಲ್ದರ್ಜೆಗೇರಿಸಲು ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಕನಿಷ್ಠ ಪಕ್ಷ ಆರೋಗ್ಯ ಸೇವೆಗಳನ್ನಾದರೂ ಸರಿಯಾಗಿ ಕೊಡಬೇಕು ಎಂದು ಚಿಟಗುಪ್ಪದ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.