ADVERTISEMENT

ವಿಜಯಪುರ, ಬೀದರ್ ಬಾಗಲಕೋಟೆಯಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 23:37 IST
Last Updated 5 ಆಗಸ್ಟ್ 2025, 23:37 IST
ಬೀದರ್ ಜಿಲ್ಲಾ ನ್ಯಾಯಾಲಯ ಸಂಕೀರ್ಣ‌ದ ಎದುರಿನ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು
ಪ್ರಜಾವಾಣಿ ಚಿತ್ರ: ಲೋಕೇಶ ವಿ.ಬಿರಾದಾರ
ಬೀದರ್ ಜಿಲ್ಲಾ ನ್ಯಾಯಾಲಯ ಸಂಕೀರ್ಣ‌ದ ಎದುರಿನ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು ಪ್ರಜಾವಾಣಿ ಚಿತ್ರ: ಲೋಕೇಶ ವಿ.ಬಿರಾದಾರ   

ಬೀದರ್/ಹುಬ್ಬಳ್ಳಿ: ರಾಜ್ಯದಲ್ಲಿ ಮಂಗಳವಾರ ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತು.

ಬೀದರ್‌ ನಗರ ಸೇರಿ ವಿವಿಧೆಡೆ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡವು. ನಗರದ ತಹಶೀಲ್ದಾರ್ ಕಚೇರಿ, ಹಳೆ ಜಿಲ್ಲಾಧಿಕಾರಿ ಕಚೇರಿ,‌ ಮಹಾನಗರ ಪಾಲಿಕೆ ಕಚೇರಿ ಆವರಣ ಹಾಗೂ ಮುಖ್ಯರಸ್ತೆಯು ಜಲಾವೃತಗೊಂಡಿತು.

ಮನ್ನಳ್ಳಿ ರಸ್ತೆ, ನೆಹರೂ ಕ್ರೀಡಾಂಗಣ ರಸ್ತೆ, ಶಿವಾಜಿ ವೃತ್ತದಲ್ಲಿ ನೀರು ಸಂಗ್ರಹವಾಗಿತ್ತು. ಮಧ್ಯಾಹ್ನ ಸುಮಾರು ಎರಡೂವರೆ ಗಂಟೆ ಮಳೆ ಸುರಿಯಿತು. 

ADVERTISEMENT

ಕಲಬುರಗಿ ನಗರದಲ್ಲೂ ಸಂಜೆ ಕೆಲ ಕಾಲ ಬಿರುಸಿನಿಂದ ಮಳೆ ಸುರಿಯಿತು. ರಾಯಚೂರು ಜಿಲ್ಲೆಯ ಲಿಂಗಸುಗೂರು, ಹಟ್ಟಿ ಚಿನ್ನದಗಣಿ, ಮಾನ್ವಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. 

ಮಳೆ: ಕೃಷಿಕರ ಹರ್ಷ

ಹುಬ್ಬಳ್ಳಿ ವರದಿ: ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಯಿತು. ಕೃಷಿಕರು ಹರ್ಷಗೊಂಡರು.

ವಿಜಯಪುರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ, ಬಬಲೇಶ್ವರ, ಕೊಲ್ಹಾರ, ನಾಲತವಾಡದಲ್ಲಿ ಗುಡುಗು, ಸಿಡಿಲಿನೊಂದಿಗೆ ಅರ್ಧ ಗಂಟೆ ಮಳೆ ಸುರಿಯಿತು. ಬಾಗಲ
ಕೋಟೆಯಲ್ಲಿ ಉತ್ತಮ, ಜಮಖಂಡಿ, ಕೂಡಲಸಂಗಮದಲ್ಲಿ ಸಾಧಾರಣ ಮಳೆಯಾಯಿತು.

ವಿಜಯನಗರ ಜಿಲ್ಲೆಯ ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ, ಹೂವಿನಹಡಗಲಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಉತ್ತಮ ಮಳೆಯಾಯಿತು.

ತೋರಣಗಲ್ಲು ಹೋಬಳಿಯ ಎಂ.ಲಕ್ಕಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟವು.

ಕುಕ್ಕೆ ಸುಬ್ರಹ್ಮಣ್ಯ: ಸೇತುವೆ ಜಲಾವೃ

ಶಿಶಿಲ ದೇವಸ್ಥಾನಕ್ಕೆ ನೀರು    ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಂಗಳವಾರ ಸಂಜೆ ಸುಮಾರು ಎರಡು ತಾಸು ಭಾರಿ ಮಳೆಯಾಗಿದೆ. ಬಿಳಿನೆಲೆ ಗ್ರಾಮದ ಕೈಕಂಬದ ಮೂಲಕ ಹಾದುಹೋಗುವ ಮಂಗಳೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೋಟೆ ಹೊಳೆಯಲ್ಲಿ ಭಾರಿ ಪ್ರವಾಹ ಬಂದು ಸೇತುವೆ ಮುಳುಗಡೆಯಾಗಿತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸುಬ್ರಹ್ಮಣ್ಯದಿಂದ ನೆಟ್ಟಣ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ತೆರಳುವ ಮತ್ತು ಕ್ಷೇತ್ರಕ್ಕೆ ರೈಲಿನಲ್ಲಿ ಬಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಬೆಳ್ತಂಗಡಿ ತಾಲ್ಲೂಕಿನಲ್ಲಿಯೂ ಉತ್ತಮ ಮಳೆಯಾಗಿದ್ದು ಕಪಿಲಾ ನದಿ ಉಕ್ಕಿ ಶಿಶಿಲದ ಶಿಶಿಲೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ಮಂಗಳೂರು ನಗರದಲ್ಲಿಯೂ ಭಾರಿ ಗಾಳಿಯೊಂದಿಗೆ ಮಳೆ ಸುರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.