ಬೀದರ್: ‘ಮನದ ಮಲಿನ ಕಳೆಯಲು ಶರಣರು–ಸಂತಸ ಸತ್ಸಂಗದ ಅಗತ್ಯ’ ಎಂದು ಸಾಹಿತಿ ಶಂಭುಲಿಂಗ ಕಾಮಣ್ಣಾ ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ‘ವಚನ ಮೌಲ್ಯಗಳು’ ಕುರಿತ ಒಂದು ತಿಂಗಳ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸತ್ಯದ ನುಡಿಗಳನ್ನು ಆಲಿಸಬೇಕು. ಬಸವಾದಿ ಶರಣರ ವಚನಗಳು ಹೇಗೆ ಬದುಕಬೇಕೆಂಬುದು ಕಲಿಸಿಕೊಡುತ್ತವೆ. ನಮ್ಮಲ್ಲಿ ಪ್ರೀತಿ, ಮಮತೆ, ಪ್ರೇಮ, ಸಹಾನುಭೂತಿ ಅನುಕಂಪ ಬೆಳೆದು ಬರಬೇಕಾದರೆ ವಚನಗಳೇ ಅರಿವಿನ ಶಕ್ತಿಯಾಗಿವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರುಗಡೆ ಉದ್ಘಾಟಿಸಿ, ಉತ್ತಮ ಪ್ರಜೆಯಾಗಬೇಕಾದರೆ ಶರಣರು, ಮಹಾನುಭಾವರ ಮೌಲಿಕ ವಿಚಾರಗಳನ್ನು ಆಲಿಸಬೇಕು. ಹೊಟ್ಟೆಪಾಡಿಗೆ ಶಿಕ್ಷಣ ಪಡೆಯುವುಕ್ಕಿಂತ ಮಕ್ಕಳು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗದೇವರು ಮಾತನಾಡಿ, ಶರಣರ ಜೀವನವು ಸಮಾಧಾನ, ಶಾಂತಿ, ಪರಮಾನಂದ, ಪ್ರೀತಿ-ಪ್ರೇಮ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ಕೂಡಿತ್ತು. ಆದರೆ, ಮಾನವ ನಶ್ವರ ಸುಖಕ್ಕಾಗಿ ತನ್ನ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ. ಒಂದುವೇಳೆ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.
ಪ್ರವಚನ ಸೇವಾ ಸಮಿತಿ ಅಧ್ಯಕ್ಷ ದೇವಕಿ ಅಶೋಕ ನಾಗೂರೆ, ಉಮಾಕಾಂತ ಕೆ. ಮೀಸೆ, ಜಿಲ್ಲಾ ಭಾರತೀಯ ಬಸವ ಬಳಗದ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಉದ್ಯಮಿ ಜೈರಾಜ ಖಂಡ್ರೆ, ಪ್ರಸಾದ ನಿಲಯದ ಕಾರ್ಯದರ್ಶಿ ಎಸ್.ಬಿ ಬಿರಾದಾರ, ಶಕುಂತಲಾ ಮಲ್ಕೋಪನೋರ, ಬಸವಕಲ್ಯಾಣದ ಮಾತೆ ಸುಗುಣಾ ತಾಯಿ ಇದ್ದರು.
ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ವಚನ ನೃತ್ಯ ಮಾಡಿದರು. ಚನ್ನಬಸಪ್ಪ ನೌಬಾದೆ ಮತ್ತು ಶ್ರೀನಿವಾಸ ಪಾಪಡೆ ವಚನ ಗಾಯನ ನಡೆಸಿಕೊಟ್ಟರು. ಶ್ರೀಕಾಂತ ಬಿರಾದಾರ ಸ್ವಾಗತಿಸಿದರೆ, ಲಕ್ಷ್ಮಿ ಬಿರಾದಾರ ನಿರೂಪಿಸಿದರು. ವಿಜಯಲಕ್ಷ್ಮಿ ಹುಗ್ಗೆಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.